ನ್ಯೂಸ್

ಸುರಂಗ ರಸ್ತೆಗೆ ದುಬಾರಿ ಟೋಲ್: ಒಮ್ಮೆ ಟನಲ್ ಒಳಗೆ ಹೋಗಿ ಹೊರಬರಲು 323 ರೂ.

ಆರ್​.ತುಳಸಿಕುಮಾರ್​

ಬೆಂಗಳೂರು: ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಸುರಂಗ ರಸ್ತೆ ಯೋಜನೆ ಜಾರಿಗೆ ಟೆಂಡರ್ ಆಹ್ವಾನಿಸಲು ಬಿಬಿಎಂಪಿ ಅಂತಿಮ ಸಿದ್ಧತೆ ನಡೆಸಿದ್ದು, ಸುರಂಗ ಮಾರ್ಗದಲ್ಲಿ ಒಮ್ಮೆ ಸಂಚರಿಸಲು 323 ರೂ. ಮೊತ್ತದ ದುಬಾರಿ ಟೋಲ್ ತೆರಬೇಕಾಗುತ್ತದೆ.

ಇತ್ತೀಚಿಗಷ್ಟೇ ಸರ್ಕಾರದ ಸಚಿವ ಸಂಪುಟದಲ್ಲಿ ಯೋಜನೆ ಅನುಷ್ಠಾನಕ್ಕೆ ಅನುಮೋದನೆ ನೀಡಿದ ಬಳಿಕ ಟನಲ್‌ನಲ್ಲಿ ಪ್ರಯಾಣದ ಶುಲ್ಕದ ಬಗ್ಗೆ ನಾಗರಿಕರಿಗೆ ಇನ್ನೂ ಸ್ಪಷ್ಟ ಮಾಹಿತಿ ಇಲ್ಲ. ಆದರೂ, ವಿಸ್ತೃತ ಯೋಜನಾ ವರದಿ (ಡಿಪಿಆರ್) ಯಲ್ಲಿ ನಮೂದಿಸಿರುವಂತೆ 1 ಕಿ.ಮೀ. ಪ್ರಯಾಣಕ್ಕೆ 19 ರೂ. ಶುಲ್ಕ ತೆರಬೇಕಾಗುತ್ತದೆ. ಮಾಸಿಕ ಶುಲ್ಕ 5 ಸಾವಿರ ರೂ. ದಾಟಬಹುದು. ಹಾಗಾಗಿ ಸಿಟಿಯೊಳಗಿನ ಸೀಮಿತ ಮಾರ್ಗದಲ್ಲಿ ತೆರಳಲು ಜೇಬು ಭಾರವಾಗಲಿದೆ ಎಂಬುದಾಗಿ ನಗರ ಪರಿಣಿತರು ವಾಸ್ತವವನ್ನು ಬಿಡಿಸಿಟ್ಟಿದ್ದಾರೆ.

ಕಳೆದ ಒಂದು ವರ್ಷದಿಂದ ಭಾರಿ ಸದ್ದು ಮಾಡುತ್ತಿರುವ ಡಿಸಿಎಂ ಡಿ.ಕೆ.ಶಿವಕುಮಾರ್ ಅವರ ಕನಸಿನ ಯೋಜನೆಯಾದ ಸುರಂಗ ರಸ್ತೆ ಯೋಜನೆಯು ರಾಜಧಾನಿಯ ಸಂಚಾರ ಸಿಕ್ಕುಗೆ ಪರಿಹಾರ ನೀಡಲಿದೆ ಎಂಬ ವಾದ ಮುಂದಿಡಲಾಗಿದೆ. ಆದರೆ, ಬೃಹತ್ ಹಣವನ್ನು ಖರ್ಚು ಮಾಡಿ ನಿರ್ಮಿಸಲಿರುವ ಪ್ರಾಜೆಕ್ಟ್‌ನಿಂದ ಜನಸಾಮಾನ್ಯರು ಓಡಾಡದಿದ್ದಲ್ಲಿ ಜಾಗತಿಕ ಮಟ್ಟದ ರಸ್ತೆ ನಿರ್ಮಿಸಿ ಏನು ಪ್ರಯೋಜನೆ ಎಂದು ತಜ್ಞರು ಸರ್ಕಾರದ ಮುಂದೆ ಪ್ರಶ್ನೆ ಇಟ್ಟಿದ್ದಾರೆ.

ಕೈಗೆಟಕುವ ದರದ ಶುಲ್ಕ ಅಸಾಧ್ಯ:

ನಗರದಲ್ಲಿ ಉತ್ತರ-ದಕ್ಷಿಣ ಹಾಗೂ ಪೂರ್ವ-ಪಶ್ಚಿಮ ಕಾರಿಡಾರ್ ಮಾದರಿಯಲ್ಲಿ ಸುರಂಗ ಯೋಜನೆ ರೂಪಿಸಲಾಗಿದೆ. ಮೊದಲ ಯತ್ನವಾಗಿ ಉತ್ತರ-ದಕ್ಷಿಣ ಕಾರಿಡಾರ್ ಮಾರ್ಗವು ಹೆಬ್ಬಾಳ ಕೆರೆ ಕೋಡಿಯಿಂದ ಸಿಲ್ಕ್ ಬೋರ್ಡ್ ಜಂಕ್ಷನ್‌ವರೆಗೆ ನಿರ್ಮಿಸಲಾಗುತ್ತದೆ. ಇದರ ಅಂದಾಜು ವೆಚ್ಚ 17,780.13 ಕೋಟಿ ರೂ. ಆಗಲಿದೆ. ಟನಲ್ ರಸ್ತೆ ಉದ್ದ 16.75 ಕಿ.ಮೀ. ಇರಲಿದ್ದು, ಈ ಮಾರ್ಗವನ್ನು ನಿರ್ಮಿಸಲು ಬೃಹತ್ ಮೊತ್ತ ಖರ್ಚಾಗುವುದರಿಂದ ಸಹಜವಾಗಿಯೇ ಟೋಲ್ ಶುಲ್ಕ ಹೆಚ್ಚಿರಲಿದೆ. ಸುರಂಗ ಕೊರೆಯುವಿಕೆ, ರಸ್ತೆ ನಿರ್ಮಾಣ, ಸುರಕ್ಷತೆ, ನಿರ್ವಹತೆ, ಸಾಲ ತೀರುವಳಿ ಸೇರಿ ಇತರ ವೆಚ್ಚವು ಅಂದಾಜಿಗಿಂತ ಶೇ.10-20 ಹೆಚ್ಚಾಗಬಹುದು. ಈ ಎಲ್ಲ ಅಂಶಗಳನ್ನು ಗಮನಿಸಿ ಟೋಲ್ ಶುಲ್ಕ ನಿಗದಿ ಮಾಡಲಾಗುತ್ತದೆ. ಹೀಗಾಗಿ ಟೋಲ್ ನಿಗದಿ ಕಡಿಮೆ ಮಾಡಲು ಸಾಧ್ಯವಾಗದು ಎನ್ನುತ್ತಾರೆ ನಗರ ಪರಿಣಿತರು. ಇದಕ್ಕೆ ಬಿಬಿಎಂಪಿ ಅಧಿಕಾರಿಗಳು ಕೂಡ ದನಿ ಸೇರಿಸಿದ್ದು, ಶುಲ್ಕ ಪಾವತಿಸಿ ಸಂಚರಿಸುವವರಿಗೆ ಸುಲಭವಾಗಿ ಗಮ್ಯ ಸೇರಬಹುದು ಎಂದು ಸಮರ್ಥಿಸಿಕೊಂಡಿದ್ದಾರೆ.

ಜನರ ತೆರಿಗೆ ಹಣದಲ್ಲಿ ಕೈಗೆತ್ತಿಕೊಳ್ಳುವ ಯಾವುದೇ ಯೋಜನೆ ಜನರಿಗಾಗಿಯೇ ಬಳಕೆಯಾಗಬೇಕು. ಈ ಅಂಶ ಟನಲ್ ಪ್ರಾಜೆಕ್ಟ್‌ನಲ್ಲಿ ಕಾಣುತ್ತಿಲ್ಲ. ಸುರಂಗದಲ್ಲಿ ಖಾಸಗಿ ಕಾರ್‌ಗಳು ಮಾತ್ರ ಸಂಚರಿಸುವುದಾದರೆ ಜನಸಾಮಾನ್ಯರು ಓಡಾಡುವ ಬಿಎಂಟಿಸಿ ಬಸ್‌ಗಳಿಗೆ ಅವಕಾಶ ಇಲ್ಲವೆಂದೇ ಅರ್ಥ. ನಗರದ ಟ್ರಾಫಿಕ್ ಸಮಸ್ಯೆಗೆ ಸಮೂಹ ಸಾರಿಗೆಗೆ ಸರ್ಕಾರ ಒತ್ತು ನೀಡುವುದು ಒಳಿತು ಎಂದು ಸಾಮಾಜಿಕ ಹೋರಾಟಗಾರರು ಪ್ರತಿಕ್ರಿಯಿಸಿದ್ದಾರೆ.

2030ರ ವೇಳೆಗೆ ಸೇವೆ ಲಭ್ಯ?:

ಸುರಂಗ ಯೋಜನೆಯ ಮೊದಲ ಕಾರಿಡಾರ್ 2028ರ ಅಂತ್ಯಕ್ಕೆ ಸಿದ್ಧಗೊಳ್ಳಲಿದೆ ಎಂದು ಹೇಳಲಾಗುತ್ತಿದೆ. ಆದರೆ, ಟನಲ್‌ನ ಎರಡೂ ಪ್ಯಾಕೇಜ್‌ನ ಒಟ್ಟು 4 ಕಡೆಯಿಂದ ಎಂಟು ಯಂತ್ರಗಳನ್ನು ಬಳಸಿ ಕೊರೆಯುವಿಕೆಗೆ 3 ವರ್ಷ ಬೇಕು. ರಸ್ತೆ ಸಿದ್ಧಪಡಿಸಲು ಒಂದು ವರ್ಷ ಹಿಡಿಯಲಿದೆ. ಸುರಕ್ಷತೆ, ವಾಹನಗಳ ಸಂಚಾರ ಪರೀಕ್ಷೆ, ಇನ್ನಿತರ ಕಾರ್ಯಕ್ಕೆ ಮೊತ್ತೊಂದು ವರ್ಷ ಬೇಕಾಗುತ್ತದೆ. ತಾಂತ್ರಿಕ ಕಾರಣದಿಂದ ಕಾಮಗಾರಿ ನಿಧಾನಗೊಂಡಲ್ಲಿ ಗಡುವು ಮೀರಲೂಬಹುದು. ಅಂದರೆ 16.75 ಕಿ.ಮೀ. ಸುರಂಗ ಮಾರ್ಗ 2030ರ ನಂತರವೇ ಸೇವೆಗೆ ಸಿಗಬಹುದು ಎಂಬ ಲೆಕ್ಕಾಚಾರ ಇದೆ.

ಟನಲ್ ಯೋಜನೆ ಏನು ಎತ್ತ . . .?:

ಉತ್ತರ-ದಕ್ಷಿಣ ಕಾರಿಡಾರ್:

ಮಾರ್ಗ - ಹೆಬ್ಬಾಳ ಕೆರೆ ಕೋಡಿಯಿಂದ ಸಿಲ್ಕ್ ಬೋರ್ಡ್ ಜಂಕ್ಷನ್‌ವರೆಗೆ

ಅಂದಾಜು ವೆಚ್ಚ - 17,780.13 ಕೋಟಿ ರೂ.

ರಸ್ತೆಯ ಉದ್ದ - 16.75 ಕಿ.ಮೀ.

ಪೂರ್ವ-ಪಶ್ಚಿಮ ಕಾರಿಡಾರ್:

ಮಾರ್ಗ - ಮೈಸೂರು ರಸ್ತೆಯ ನಾಯಂಡಹಳ್ಳಿಯಿಂದ ಕೆ.ಆರ್.ಪುರದವರೆಗೆ

ಅಂದಾಜು ವೆಚ್ಚ - 25,000 ಕೋಟಿ ರೂ.

ರಸ್ತೆಯ ಉದ್ದ - 28 ಕಿ.ಮೀ.

-------------------

ಸುರಂಗ ರಸ್ತೆಯ ಮೊದಲ ಕಾರಿಡಾರ್‌ನ ಮುಖ್ಯಾಂಶ:

ಪ್ಯಾಕೇಜ್ - 1:

ಮಾರ್ಗ - ಹೆಬ್ಬಾಳ ಕೆರೆ ಕೋಡಿಯಿಂದ ಫ್ರೀಡಂ ಪಾರ್ಕ್‌ವರೆಗೆ

ರಸ್ತೆಯ ಉದ್ದ - 8.74 ಕಿ.ಮೀ.

ಅಂದಾಜು ವೆಚ್ಚ - 8,814.78 ಕೋಟಿ ರೂ.

ಪ್ಯಾಕೇಜ್ - 2:

ಮಾರ್ಗ - ಫ್ರೀಡಂ ಪಾರ್ಕ್‌ನಿಂದ ಸಿಲ್ಕ್ ಬೋಡ್ ಜಂಕ್ಷನ್‌ವರೆಗೆ

ರಸ್ತೆಯ ಉದ್ದ - 8.75 ಕಿ.ಮೀ.

ಅಂದಾಜು ವೆಚ್ಚ - 8,965.35 ಕೋಟಿ ರೂ.

ಎರಡೂ ಪ್ಯಾಕೇಜ್‌ನ ಒಟ್ಟು ವೆಚ್ಚ - 17,780.13 ಕೋಟಿ ರೂ.

ಬೆಂಗಳೂರಿನ ಸಂಚಾರ ಸಿಕ್ಕುಗೆ ಪರಿಹಾರ ಒದಗಿಸಲು ಬೃಹತ್ ಯೋಜನೆ ಬೇಕು. ಹಾಗಂತ ನಾಗರಿಕರಿಗೆ ಹೊರೆಯಾಗುವ ರೀತಿಯಲ್ಲಿ ಟೋಲ್ ವಿಧಿಸಿದರೆ ಓಡಾಡುವವರು ಯಾರು? ಹೆಬ್ಬಾಳದಿಂದ ಆರಂಭವಾಗಲಿರುವ ಟನಲ್ ಯೋಜನೆ ಮುನ್ನ ಅಲ್ಲಿನ ಟ್ರಾಫಿಕ್ ಸಮಸ್ಯೆಯನ್ನು ನಿವಾರಿಸಲು ಪ್ರಥಮ ಆದ್ಯತೆ ನೀಡಲು ಸರ್ಕಾರ ಮುಂದಾಗಲಿ.

- ಅಶ್ವತ್ಥನಾರಾಯಣಗೌಡ, ಬಿಬಿಎಂಪಿ ಆಡಳಿತ ಪಕ್ಷದ ಮಾಜಿ ನಾಯಕ

ಟನಲ್ ರಸ್ತೆ ಯೋಜನೆಗೆ ಸರ್ಕಾರ ಒಪ್ಪಿಗೆ ನೀಡಿರುವುದು ಪಾಲಿಕೆ ವತಿಯಿಂದ ಟೆಂಡರ್ ಆಹ್ವಾನಿಸಲು ಅಂತಿಮ ಸಿದ್ಧತೆ ನಡೆದಿದೆ. ಕೆಲವೊಂದು ಅಂಶಗಳನ್ನು ಸೇರಿಸುವುದು ಬಾಕಿ ಇದ್ದು, ಜುಲೈನಲ್ಲಿ ಟೆಂಡರ್ ಕರೆಯಲಾಗುವುದು. ಯೋಜನೆ ಜಾರಿ ಸಂಬಂಧ ಸರ್ಕಾರದ ಸಲಹೆ-ಸೂಚನೆ ಪಾಲಿಸಲಾಗುವುದು.

- ಎಂ.ಮಹೇಶ್ವರ್ ರಾವ್, ಬಿಬಿಎಂಪಿ ಮುಖ್ಯ ಆಯುಕ್ತ