ನ್ಯೂಸ್

ಭ್ರಷ್ಟಾಚಾರದ ವಿರುದ್ಧ ದಂಡಯಾತ್ರೆ: ಆರ್.ಅಶೋಕ್ ವ್ಯಾಖ್ಯಾನ

ಮೃತ್ಯುಂಜಯ ಕಪಗಲ್

ಬೆಂಗಳೂರು: ವಾಲ್ಮೀಕಿ ನಿಗಮದ ಹಗರಣ, ಮುಡಾ ಅಕ್ರಮ, ಪರಿಶಿಷ್ಟರ ಹಣ ದುರ್ಬಳಕೆ ವಿರುದ್ಧ ಎನ್ ಡಿಎ ಆ.3ರಿಂದ 10 ರವರೆಗೆ ನಡೆಸಲಿರುವ ಮೈಸೂರು ಚಲೋ ಪಾದಯಾತ್ರೆ ಕೇವಲ ರಾಜಕೀಯ ಹೋರಾಟವಲ್ಲ. ಇದು ಭ್ರಷ್ಟಾಚಾರದ ವಿರುದ್ಧದ ದಂಡಯಾತ್ರೆ ಎಂದು ವಿಧಾನಸಭೆ ಪ್ರತಿಪಕ್ಷ ನಾಯಕ ಆರ್.ಅಶೋಕ್ ವ್ಯಾಖ್ಯಾನಿಸಿದ್ದಾರೆ.

ಸಾಮಾಜಿಕ ಜಾಲತಾಣದ ತಮ್ಮ ಖಾತೆಯಲ್ಲಿ ಈ ಕುರಿತು ಸಂದೇಶ ಹಂಚಿಕೊಂಡಿರುವ ಅವರು, ಆರೂವರೆ ಕೋಟಿ ಕನ್ನಡಿಗರ ಜನಕ್ರೋಶಕ್ಕೆ ದನಿಗೂಡಿಸುವ ಪ್ರಜಾಯಾತ್ರೆ. ಅನೈತಿಕತೆಯ ವಿರುದ್ಧ ನೈತಿಕತೆಯ ಮೌನಯಾತ್ರೆ ಎಂದು ವಿಶ್ಲೇಷಿಸಿದ್ದಾರೆ.

ಅಧರ್ಮ ರಾಜಕಾರಣದ ವಿರುದ್ಧ ಧರ್ಮ ರಾಜಕಾರಣದ ಸಂಘರ್ಷ ಯಾತ್ರೆ. ಅಸತ್ಯದ ವಿರುದ್ಧ ಸತ್ಯದ ನ್ಯಾಯ ಯಾತ್ರೆ. ಸಿಎಂ ಸಿದ್ದರಾಮಯ್ಯನವರ ಅಕ್ರಮಗಳ ವಿರುದ್ಧ ಎನ್ ಡಿ ಎ ಮಿತ್ರ ಕೂಟ ನಡೆಸಿರುವ ಜನಾಂದೋಲನಕ್ಕೆ ಆ.3ರಂದು ಚಾಲನೆ ಸಿಗಲಿದೆ ಎಂದು ಹೇಳಿದ್ದಾರೆ.

ಸಿಎಂ ಸಿದ್ದರಾಮಯ್ಯನವರೇ, ಈಗಲೂ ಕಾಲ ಮಿಂಚಿಲ್ಲ. ತಮಗೆ ಕಿಂಚಿತ್ತಾದರೂ ನೈತಿಕತೆ, ಆತ್ಮಸಾಕ್ಷಿ, ಅಂತಃಕರಣ ಅನ್ನುವುದು ಇದ್ದರೆ ಕೂಡಲೇ ಸಿಎಂ ಸ್ಥಾನಕ್ಕೆ ರಾಜೀನಾಮೆ ಕೊಡಿ ಎಂದು ಒತ್ತಾಯಿಸಿದ್ದಾರೆ.

ಈಗ ಪ್ರಾಯಶ್ಚಿತ ಮಾಡಿಕೊಳ್ಳದಿದ್ದರೆ ಮುಂದೆ ಪಶ್ಚಾತ್ತಾಪಕ್ಕೂ ಅವಕಾಶ ಇರುವುದಿಲ್ಲ ಎಂದಿರುವ ಆರ್.ಅಶೋಕ್, ಮುಖ್ಯಮಂತ್ರಿ ಹಾಗೂ ಕಾಂಗ್ರೆಸ್ ಸರ್ಕಾರದ ಹಮ್ಮಿಕೊಂಡಿರುವ ಚಳವಳಿಯನ್ನು ಸಮರ್ಥಿಸಿಕೊಂಡಿದ್ದಾರೆ.