ರಾಜ್ಯೋತ್ಸವದ ವೇಳೆ ಪಂಪಾ ಜವಳಿ ಕಲಾಕೃತಿಗಳ ಪ್ರದರ್ಶನ 
ನ್ಯೂಸ್

ರಾಜ್ಯೋತ್ಸವದ ವೇಳೆ ಪಂಪಾ ಜವಳಿ ಕಲಾಕೃತಿಗಳ ಪ್ರದರ್ಶನ

ಡಿ.15ರವರೆಗೆ 150ಕ್ಕೂ ಹೆಚ್ಚು ಜವಳಿ ಕಲಾಕೃತಿಗಳ ಪ್ರದರ್ಶನ

ಬೆಂಗಳೂರು : ಕನ್ನಡ ರಾಜ್ಯೋತ್ಸವದ ಅಂಗವಾಗಿ ಬೆಂಗಳೂರಿನ ನ್ಯಾಷನಲ್ ಗ್ಯಾಲರಿ ಆಫ್ ಮಾರ್ಡನ್ ಆರ್ಟ್ ಕೇಂದ್ರದಲ್ಲಿ ವಿಶೇಷ ಜವಳಿ ಪರಂಪರೆ ಮತ್ತು ಕಲಾಕೃತಿಗಳ ಪ್ರದರ್ಶನ ಏರ್ಪಡಿಸಲಾಗಿದೆ.

ಬಲ್ಡೋಟಾ ಸಮೂಹದ ಸಾಮಾಜಿಕ ಸೇವಾ ವಿಭಾಗವಾದ ಅಭೇರಾಜ್ ಬಲ್ಡೋಟಾ ಫೌಂಡೇಶನ್, ಬೆಂಗಳೂರಿನ ನ್ಯಾಷನಲ್ ಗ್ಯಾಲರಿ ಆಫ್ ಮಾರ್ಡನ್ ಆರ್ಟ್ ಮತ್ತು ಕೇಂದ್ರ ಪ್ರವಾಸೋದ್ಯಮ ಸಚಿವಾಲಯದ ಜಂಟಿ ಸಹಯೋಗದಲ್ಲಿ ಈ ವಿಶೇಷ ಪ್ರದರ್ಶನವನ್ನು ಆಯೋಜಿಸಲಾಗಿದೆ.

ಕರ್ನಾಟಕದ ಕೈಮಗ್ಗ ಮತ್ತು ಕೈಮುದ್ರಿತ ಜವಳಿಗಳ ಇತಿಹಾಸ ಹಾಗೂ ಸಮಕಾಲೀನ ಬೆಳವಣಿಗೆಗಳನ್ನು ಪರಿಚಯಿಸುವ ‘ಪಂಪಾ ಕರ್ನಾಟಕದ ಜವಳಿ ಪರಂಪರೆ’ ಎಂಬ ವಿಶೇಷ ಪ್ರದರ್ಶನಕ್ಕೆ ನ.1 ರಾಜ್ಯೋತ್ಸವದಂದು ಚಾಲನೆ ದೊರೆಯಲಿದ್ದು, ಡಿ.15ರವರೆಗೆ ನಡೆಯಲಿದೆ.

ಕೇಂದ್ರ ಸಂಸ್ಕೃತಿ ಮತ್ತು ಪ್ರವಾಸೋದ್ಯಮ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಪ್ರದರ್ಶನ ಉದ್ಘಾಟಿಸಲಿದ್ದು, ರಾಜ್ಯಸಭಾ ಸದಸ್ಯ ಲೆಹರ ಸಿಂಗ್ ಸಿರೋಯಾ, ಮುಖ್ಯ ಕಾರ್ಯದರ್ಶಿ ಡಾ. ಶಾಲಿನಿ ರಜನೀಶ್, ನ್ಯಾಷನಲ್ ಗ್ಯಾಲರಿ ಮಹಾನಿರ್ದೇಶಕ ಡಾ. ಸಂಜೀವ್ ಕಿಶೋರ್ ಗೌತಮ್, ಹಾಗೂ ಬಲ್ಡೋಟಾ ಸಂಸ್ಥೆಯ ಎಂಡಿ ಡಾ. ನರೇಂದ್ರಕುಮಾರ್ ಎ. ಬಲ್ಡೋಟಾ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.

ಡಿ.15ರವರೆಗೆ ನಡೆಯುವ 150ಕ್ಕೂ ಹೆಚ್ಚು ಜವಳಿ ಕಲಾಕೃತಿಗಳ ಪ್ರದರ್ಶನ

ಪ್ರದರ್ಶನದ ವಿಶೇಷತೆ :

18ನೇ ಶತಮಾನದಿಂದ ಇಂದಿನವರೆಗಿನ 150ಕ್ಕೂ ಹೆಚ್ಚು ಸೀರೆಗಳು, ಮತ್ತು ಇತರ ಉಡುಪುಗಳು, ಗೃಹೋಪಯೋಗಿ ಜವಳಿ ವಸ್ತುಗಳು, ಕಲಾಕೃತಿಗಳು ಹಾಗೂ ಕಲಾವಿನ್ಯಾಸಗಳನ್ನು ಪ್ರದರ್ಶನಕ್ಕಿಡಲಾಗಿದೆ.

ಮೇಲುಕೋಟೆಯ ಹಿರಿಯ ನೇಕಾರ ನಾರಾಯಣಪ್ಪ ಮತ್ತು ಕಮಲಮ್ಮ ಅವರು ನೇಯ್ದಿರುವ ಅಪರೂಪದ ಸೀರೆಗಳು ಹಾಗೂ 18ನೇ ಶತಮಾನದ ಹತ್ತು ಮೀಟರ್ ಉದ್ದದ ಅಪರೂಪದ ಕಸೂತಿ ಕಲೆ, ಲಂಬಾಣಿ ಕಲಾವಿದರಿಂದ ವಿಶೇಷವಾಗಿ ನಿರ್ಮಿಸಲಾದ ಬೃಹತ್ ಗಾತ್ರದ ಕನ್ನಡಿ ಕಸೂತಿಯ ಮೇಲಾವರಣ. ಹಂಪಿಯ ವಿಜಯನಗರ ಸಾಮ್ರಾಜ್ಯದ ಅರಮನೆಯ ದೃಶ್ಯವೆಂದು ಬಿಂಬಿಸಲಾದ ಚಿತ್ರಣವನ್ನು ಒಳಗೊಂಡ ಕಲಾಕೃತಿಗಳು ಈ ಪ್ರದರ್ಶನದಲ್ಲಿ ಇರಲಿವೆ.

ತುಂಗಭದ್ರಾ ನದಿಯ ಪ್ರಾಚೀನ ಹೆಸರು ಪಂಪಾ. ಒಂದು ಕಾಲದಲ್ಲಿ ಈ ಪ್ರದರ್ಶನವನ್ನು ಪಂಪಾ ತೀರ್ಥ ಅಥವಾ ಪಂಪಾ ಕ್ಷೇತ್ರ ಎಂದೂ ಕರೆಯುತ್ತಿದ್ದರು. ‘ಪಂಪಾ’ ಎಂಬ ಹೆಸರು ವಿವಿಧ ಕಲಾ ಪರಂಪರೆಗಳ ಸಂಗಮವನ್ನು ಸಂಕೇತಿಸುತ್ತದೆ.