ನವದೆಹಲಿ: ಅಬಕಾರಿ ನೀತಿಗೆ ಸಂಬಂಧಿಸಿದ ಹಣದ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಬಿಆರ್‌ಎಸ್ ಎಂಎಲ್‌ಸಿ ಹಾಗೂ ಕೆ ಚಂದ್ರಶೇಖರ್ ರಾವ್ (ಕೆಸಿಆರ್) ಪುತ್ರಿ ಕೆ. ಕವಿತಾ ಅವರ ವಿರುದ್ಧ ಜಾರಿ ನಿರ್ದೇಶನಾಲಯ (ಇಡಿ) ಸಲ್ಲಿಸಿರುವ ಪೂರಕ ದೋಷಾರೋಪಪಟ್ಟಿಯನ್ನು ವಿಚಾರಣೆಯನ್ನು ತೆಗೆದುಕೊಳ್ಳಬೇಕೆ ಎಂಬ ಇ.ಡಿ ಮತ್ತು ಸಿಬಿಐ ಪ್ರಕರಣಗಳ ವಿಶೇಷ ನ್ಯಾಯಾಲಯವು ಮೇ.13ರಂದು ಆದೇಶ ಹೊರಡಿಸುವ ಸಾಧ್ಯತೆ ಇದೆ.
ಕವಿತಾ ಅವರ ವಿರುದ್ಧ ಕ್ರಮ ಜರುಗಿಸಲು ಸಾಕಷ್ಟು ಪುರಾವೆಗಳು ಇವೆ ಎಂದು ಇಡಿ ಮತ್ತು ಸಿಬಿಐ ಹೇಳಿದ್ದನ್ನು ಪರಿಗಣಿಸಿದ ವಿಶೇಷ ನ್ಯಾಯಾಧೀಶರಾದ ಕಾವೇರಿ ಬವೇಜಾ ಅವರು ಆದೇಶ ಕಾಯ್ದಿರಿಸಿದರು. ಈ ಪ್ರಕರಣದಲ್ಲಿ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರನ್ನು ವಿಚಾರಣೆಗೆ ಒಳಪಡಿಸಲು ತನ್ನ ಬಳಿ ಸಾಕಷ್ಟು ಸಾಕ್ಷ್ಯಗಳಿವೆ ಎಂದು ಇಡಿ ಪ್ರತಿಪಾದಿಸಿದೆ.
ಈ ಪ್ರಕರಣದಲ್ಲಿ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಮತ್ತು ಆಮ್ ಆದ್ಮಿ ಪಕ್ಷದ ವಿರುದ್ಧದ ಹೆಚ್ಚುವರಿ ದೋಷಾರೋಪಪಟ್ಟಿಯನ್ನು ಪರಿಗಣಿಸಲು ನ್ಯಾಯಾಲಯವು ಮೇ 28ಕ್ಕೆ ವಿಚಾರಣೆ ನಿಗದಿ ಮಾಡಿದೆ.
ಕೇಜ್ರಿವಾಲ್ ಅವರು ಲೋಕಸಭೆ ಚುನಾವಣೆಯಲ್ಲಿ ಪ್ರಚಾರ ಮಾಡಲು ಅನುಮತಿ ನೀಡಿದ ಸುಪ್ರೀಂ ಕೋರ್ಟ್ ಆದೇಶದ ನಂತರ ಜೂನ್ 1 ರವರೆಗೆ ಮಧ್ಯಂತರ ಜಾಮೀನಿನ ಮೇಲೆ ಹೊರಗಿದ್ದಾರೆ. ಜೂನ್ 2ರಂದು ಶರಣಾಗಿ ಮತ್ತೆ ಜೈಲಿಗೆ ಹೋಗುವಂತೆ ಸೂಚಿಸಿದೆ. ಅಬಕಾರಿ ಪ್ರಕರಣವು 2021-22 ಕ್ಕೆ ದೆಹಲಿ ಸರ್ಕಾರವು ಈಗ ರದ್ದುಗೊಳಿಸಿರುವ ಅಬಕಾರಿ ನೀತಿಯ ರಚನೆ ಮತ್ತು ಕಾರ್ಯಗತಗೊಳಿಸುವಿಕೆಯಲ್ಲಿ ಭ್ರಷ್ಟಾಚಾರ ಮತ್ತು ಅಕ್ರಮ ಹಣ ವರ್ಗಾವಣೆಗೆ ಸಂಬಂಧಿಸಿದ್ದಾಗಿದೆ.