ಮದ್ಯ ಮಾರಾಟ ಹೆಚ್ಚಳ 
ನ್ಯೂಸ್

ಬರದಲ್ಲೂ ಸರ್ಕಾರದ ಬೊಕ್ಕಸಕ್ಕೆ ಅಬಕಾರಿ ಕಿಕ್: 3 ತಿಂಗಳಲ್ಲಿ 11,595 ಕೋಟಿ ಆದಾಯ- Excise revenue boost

ಪ್ರಸಕ್ತ ಸಾಲಿನ ಜುಲೈನಿಂದ ಸೆಪ್ಟೆಂಬರ್‌ವರೆಗೆ 171.69 ಲಕ್ಷ ಬಾಕ್ಸ್ ಐಎಂಎಲ್ ಮತ್ತು 126.68 ಲಕ್ಷ ಬಾಕ್ಸ್ ಬಿಯರ್ ಮಾರಾಟವಾಗಿದೆ. ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ ಪ್ರಸಕ್ತ ಸಾಲಿನಲ್ಲಿ ಐಎಂಎಲ್ ಮಾರಾಟದಲ್ಲಿ ಶೇ.1.52 ಮತ್ತು ಬಿಯರ್ ಮಾರಾಟದಲ್ಲಿ ಶೇ.49.69 ಹೆಚ್ಚಳವಾಗಿದೆ.

ಬೆಂಗಳೂರು: (Excise revenue boost) ಬರ ನಡುವೆಯೂ ಸರ್ಕಾರದ ಬೊಕ್ಕಸಕ್ಕೆ ಗಣನೀಯವಾಗಿ ಮದ್ಯ ಆದಾಯ ಹರಿದು ಬಂದಿದೆ. ಪ್ರಸಕ್ತ ಸಾಲಿನ ಜುಲೈನಿಂದ ಸೆಪ್ಟೆಂಬರ್‌ವರೆಗೆ ಅಬಕಾರಿ ಇಲಾಖೆ, 11,595 ಕೋಟಿ ರೂ.ಆದಾಯ ಗಳಿಸಿದೆ. 2025ರ ಜುಲೈನಿಂದ ಸೆಪ್ಟೆಂಬರ್‌ವರೆಗೆ 10,303 ಕೋಟಿ ರೂ.ಆದಾಯ ಬಂದಿತ್ತು. ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ ಪ್ರಸಕ್ತ ಸಾಲಿನಲ್ಲಿ 1,292 ಕೋಟಿ ರೂ. ಅಧಿಕ ರಾಜಸ್ವ ಬಂದಿದ್ದು, ಶೇ.12.54 ಆದಾಯ ಏರಿಕೆಯಾಗಿದೆ.

ಕಳೆದ ವರ್ಷದ ಜುಲೈನಿಂದ ಸೆಪ್ಟೆಂಬರ್‌ವರೆಗೆ 169.12 ಲಕ್ಷ ಬಾಕ್ಸ್ ಇಂಡಿಯನ್ ಮೇಡ್ ಲಿಕ್ಕರ್ (ಐಎಂಎಲ್), 84.63 ಲಕ್ಷ ಬಿಯರ್ ಮಾರಾಟವಾಗಿತ್ತು. ಪ್ರಸಕ್ತ ಸಾಲಿನ ಜುಲೈನಿಂದ ಸೆಪ್ಟೆಂಬರ್‌ವರೆಗೆ 171.69 ಲಕ್ಷ ಬಾಕ್ಸ್ ಐಎಂಎಲ್ ಮತ್ತು 126.68 ಲಕ್ಷ ಬಾಕ್ಸ್ ಬಿಯರ್ ಮಾರಾಟವಾಗಿದೆ. ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ ಪ್ರಸಕ್ತ ಸಾಲಿನಲ್ಲಿ ಐಎಂಎಲ್ ಮಾರಾಟದಲ್ಲಿ ಶೇ.1.52 ಮತ್ತು ಬಿಯರ್ ಮಾರಾಟದಲ್ಲಿ ಶೇ.49.69 ಹೆಚ್ಚಳವಾಗಿದೆ.

ರಾಜ್ಯದಲ್ಲಿ ಮೇ.11ರಿಂದ ಮದ್ಯದಲ್ಲಿನ ಆಲ್ಕೋಹಾಲ್ ಪ್ರಮಾಣ ಆಧಾರಿತ(ಎಐಬಿ) ‘ನೂತನ ತೆರಿಗೆ ಪದ್ಧತಿ’ ಜಾರಿಗೆ ತಂದಿದೆ. ಈ ಹಿನ್ನೆಲೆಯಲ್ಲಿ ಕೆಳ, ಮಧ್ಯಮ ವರ್ಗದವರು ಅತಿ ಹೆಚ್ಚಾಗಿ ಸೇವಿಸುವ ಒರಿಜನಲ್ ಚಾಯ್ಸ, ಹಯ್ವಡ್ಸ್, ರಾಜಾ ವಿಸ್ಕಿ ಸೇರಿ ಇತರ ಚೀಪ್ ಲಿಕ್ಕರ್ ಮತ್ತು ಕೆಲ ಬಿಯರ್ ಬಾಟಲ್‌ಗಳ ಮೇಲೆ ಸರಾಸರಿ 20-30 ರೂ.ಬೆಲೆ ಹೆಚ್ಚಳವಾಗಿತ್ತು. ಇದರಿಂದ ಇಲಾಖೆ ಮದ್ಯ ಮಾರಾಟದಿಂದ ಬರುತ್ತಿರುವ ಆದಾಯ ಜಾಸ್ತಿಯಾಗಿದೆ.

ಅಧಿಕಾರಿಗಳಿಗೆ ಆದಾಯ ಟಾರ್ಗೆಟ್

ಪ್ರಸಕ್ತ ಸಾಲಿನಲ್ಲಿ ಸರ್ಕಾರವು, ಇಲಾಖೆಗೆ ಬರೋಬ್ಬರಿ 45 ಸಾವಿರ ಕೋಟಿ ರೂ.ಆದಾಯ ಸಂಗ್ರಹದ ಗುರಿ ಕೊಟ್ಟಿದೆ. ಈ ಹಿನ್ನೆಲೆಯಲ್ಲಿ ಇಲಾಖೆಯ ಆಯುಕ್ತರು, ಉಪ ಆಯುಕ್ತರು, ಅಧೀಕ್ಷಕ, ಉಪ ಆಧೀಕ್ಷಕ, ನಿರೀಕ್ಷಕ, ಉಪ ನಿರೀಕ್ಷಕ, ಮುಖ್ಯ ಪೇದೆ ಮತ್ತು ಪೇದೆಗಳಿಗೆ ‘ಮದ್ಯ ಮಾರಾಟ’ ಮತ್ತು ‘ಕೇಸ್‌ಗಳ’ ಟಾರ್ಗೆಟ್ ನಿಗದಿಪಡಿಸಿದ್ದಾರೆ. ಪ್ರತಿ ಬಾರ್ ಅಂಗಡಿಗೆ ತಿಂಗಳಿಗೆ ಇಂತಿಷ್ಟು ಬಾಕ್ಸ್ ಐಎಂಎಲ್ ಪೂರೈಕೆಯಾಗಬೇಕು ಎಂದು ಕೇಳಹಂತದ ಅಧಿಕಾರಿಗಳಿಗೆ ಟಾರ್ಗೆಟ್ ನೀಡಲಾಗಿದೆ. ಯಾವುದೇ ಕಾರಣಕ್ಕೂ ಆ ಅಂಗಡಿಗೆ ನಿಗದಿಪಡಿಸಿರುವ ಬಾಕ್ಸ್‌ಗಳಕ್ಕಿಂತ ಕಡಿಮೆ ಪೂರೈಕೆಯಾಗುವಂತಿಲ್ಲ. ಗ್ರಾಮ, ಮಿಲಿಟರಿ ಹೋಟೆಲ್, ಕಿರಾಣಿ ಅಂಗಡಿಗಳಿಗೆ ಅನಧಿಕೃತವಾಗಿ ಮದ್ಯ ಮಾರಾಟವಾಗುತ್ತಿದೆ. ಇಲ್ಲಿಯೂ ಅಧಿಕವಾಗಿ ಮದ್ಯ ಮಾರಾಟ ಮಾಡುವಂತೆ ಕಿರಾಣಿ ಅಂಗಡಿಗಳಿಗೆ ಅಧಿಕಾರಿಗಳು ಕಿರುಕುಳ ಕೊಡುತ್ತಿದ್ದಾರೆ.

ಶೇ.70 ಮಂದಿ ಕಡಿಮೆ ಬೆಲೆಯ ಮದ್ಯ ಸೇವನೆ

ದೇಶಾದ್ಯಂತ 16 ಕೋಟಿ ಮದ್ಯ ವ್ಯಸನಿಗಳಿದ್ದಾರೆ.ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ (ಎನ್‌ಎ್ಎಚ್‌ಎಸ್) ಪ್ರಕಾರ 15-49 ವರ್ಷ ವಯಸ್ಸಿನ ಪುರುಷರಲ್ಲಿ ಶೇ.18.3 ಮತ್ತು ಮಹಿಳೆಯರಲ್ಲಿ ಶೇ.4.8 ಮದ್ಯ ಸೇವಿಸುತ್ತಿದ್ದಾರೆ. ನಗರ ಪ್ರದೇಶಗಳಕ್ಕಿಂತ ಗ್ರಾಮೀಣ ಪ್ರದೇಶಗಳಲ್ಲಿ ಮದ್ಯ ಸೇವಿಸುವ ಪ್ರಮಾಣ ಹೆಚ್ಚಾಗಿದೆ. ರಾಜ್ಯದಲ್ಲಿ ಒಟ್ಟು ಜನಸಂಖ್ಯೆಯಲ್ಲಿ ಅಂದಾಜು ಶೇ.11 ಜನರು ಮದ್ಯ ವ್ಯಸನಕ್ಕೆ ಸಿಲುಕಿದ್ದಾರೆ. 15 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನ ಪುರುಷರಲ್ಲಿ ಅಂದಾಜು ಶೇ.19 ಜನರು ಪ್ರಸ್ತುತ ಮದ್ಯ ಸೇವಿಸುತ್ತಿದ್ದಾರೆ. ಒಟ್ಟು ಮದ್ಯವ್ಯಸನಿಗಳ ಪೈಕಿ ಶೇ.70 ಮಂದಿ ಕಡಿಮೆ ಬೆಲೆಯ ಮದ್ಯವನ್ನು ಅಧಿಕವಾಗಿ ಸೇವಿಸುತ್ತಿದ್ದಾರೆ. ಅಲ್ಲದೆ, ದೇಶದಲ್ಲೇ ಅತಿ ಹೆಚ್ಚು ತಲಾವಾರು ಮದ್ಯ ಸೇವಿಸುವ ರಾಜ್ಯಗಳ ಪಟ್ಟಿಯಲ್ಲಿ ಕರ್ನಾಟಕ ಮುಂಚೂಣಿಯಲ್ಲಿದೆ. ದೇಶದ ಒಟ್ಟು ಮದ್ಯ ಮಾರಾಟದಲ್ಲಿ ಕರ್ನಾಟಕ ಸೇರಿ ದಕ್ಷಿಣ ಭಾರತದ 5 ರಾಜ್ಯಗಳ ಪಾಲು ಶೇ. 45ರಷ್ಟಿದೆ.