ಅಬಕಾರಿ ಇಲಾಖೆ ಕೇಂದ್ರ ಕಚೇರಿ
- ಅಬಕಾರಿ ಇಲಾಖೆಯಲ್ಲಿ ‘ಕಾಸಿಗಾಗಿ ಪೋಸ್ಟಿಂಗ್’ ದಂಧೆ ಇನ್ನೂ ನಿಂತಿಲ್ಲ
- ನಿಯಮಬಾಹಿರವಾಗಿ 10 ಅಧಿಕಾರಿಗಳನ್ನು ಆಯಕಟ್ಟಿನ ಜಾಗಕ್ಕೆ ಎತ್ತಂಗಡಿ
- ಸರ್ಕಾರಿ ನೌಕರರ ಸಾರ್ವತ್ರಿಕ ವರ್ಗಾವಣೆ ಮುಗಿದಿದ್ದರೂ ಅಧಿಕಾರಿಗಳ ವರ್ಗ
ಬೆಂಗಳೂರು: ಅಬಕಾರಿ ಇಲಾಖೆಯಲ್ಲಿ ‘ಕಾಸಿಗಾಗಿ ಪೋಸ್ಟಿಂಗ್’ ದಂಧೆ (posting scam) ಇನ್ನೂ ನಿಂತಿಲ್ಲ.
ಸರ್ಕಾರಿ ನೌಕರರ ಸಾರ್ವತ್ರಿಕ ವರ್ಗಾವಣೆ ಅವಧಿ ಈಗಾಗಲೇ ಮುಗಿದಿದೆ. ಆದರೂ, ನಿಯಮಬಾಹಿರವಾಗಿ ಓರ್ವ ಜಂಟಿ ಆಯುಕ್ತ, 4 ಉಪ ಆಯುಕ್ತರು, 5 ಅಧೀಕಕ್ಷರನ್ನು ಆಯಕಟ್ಟಿನ ಹುದ್ದೆಗೆ ಎತ್ತಂಗಡಿಗೊಳಿಸಿ ಅ.10ರಂದು ಇಲಾಖೆ ಆದೇಶಿಸಿದೆ. ಪ್ರತಿ ಉಪ ಆಯುಕ್ತ, ಅಧೀಕ್ಷಕರ ಹುದ್ದೆಗೆ ಇಂತಿಷ್ಟು ಹಣ ಪಡೆದು ಆಯಕಟ್ಟಿನ ಜಾಗಕ್ಕೆ ವರ್ಗಾಯಿಸಲಾಗಿದೆ ಎಂದು ಹೆಸರಲೆಚ್ಚಿಸದ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.
2 ವರ್ಷಗಳಿಂದ ಇಲಾಖೆಯಲ್ಲಿ ನಡೆಯುತ್ತಿದ್ದ ವರ್ಗಾವಣೆ ದಂಧೆಯ ಬಗ್ಗೆ ‘ವಿಜಯವಾಣಿ’ ಹಲವು ವಿಶೇಷ ವರದಿ ಪ್ರಕಟಿಸಿ ಸರ್ಕಾರದ ಗಮನ ಸೆಳೆದಿತ್ತು. ಈ ವರದಿ ಪರಿಣಾಮ ಸಿಎಂ ಸಿದ್ದರಾಮಯ್ಯ ಪ್ರಸಕ್ತ ಸಾಲಿನ ಬಜೆಟ್‌ನಲ್ಲಿ ಗ್ರೂಪ್ ‘ಎ’ ವೃಂದದ ಅಬಕಾರಿ ಉಪ ಆಯುಕ್ತರು, ಗ್ರೂಪ್ ‘ಬಿ’ ವೃಂದದ ಅಧೀಕ್ಷಕ, ಉಪ ಅಧೀಕ್ಷಕ ಅಧಿಕಾರಿಗಳನ್ನು ಹೊರತುಪಡಿಸಿ ಗ್ರೂಪ್ ‘ಸಿ’ ವೃಂದದಲ್ಲಿ ಕಾರ್ಯನಿರ್ವಹಿಸುತ್ತಿರುವ ನಿರೀಕ್ಷಕರು, ಉಪ ನಿರೀಕ್ಷಕರು, ಮುಖ್ಯ ಪೇದೆ ಮತ್ತು ಪೇದೆಯನ್ನು ಕೌನ್ಸೆಲಿಂಗ್ ಮೂಲಕ ವರ್ಗಾವಣೆ ಮಾಡುವುದಾಗಿ ಘೋಷಿಸಿದ್ದರು.
ಕರ್ನಾಟಕ ನಾಗರಿಕ ಸೇವೆಗಳ (ಅಬಕಾರಿ ಇಲಾಖೆ ಅಧಿಕಾರಿಗಳು ಮತ್ತು ಅಧಿಕಾರಿಗೆ ವರ್ಗಾವಣೆ) ನಿಯಮ ಜಾರಿಗೆ ತರಲಾಯಿತು. ಕಳೆದ ಸಾರ್ವತ್ರಿಕ ವರ್ಗಾವಣೆಯಲ್ಲಿ 151 ನಿರೀಕ್ಷಕರು, 114 ಉಪ ನಿರೀಕ್ಷಕರು, 7 ಮುಖ್ಯ ಪೇದೆ ಮತ್ತು 415 ಪೇದೆ ಸೇರಿ ಒಟ್ಟು 687 ಅಧಿಕಾರಿಗಳನ್ನು ಕೌನ್ಸೆಲಿಂಗ್ ಮೂಲಕ ವರ್ಗಾಯಿಸಲಾಯಿತು.
ಇಲಾಖೆಯಲ್ಲಿ ಅಬಕಾರಿ ಹೆಚ್ಚುವರಿ ಆಯುಕ್ತ, ಜಂಟಿ ಆಯುಕ್ತ, ಉಪ ಆಯುಕ್ತ, ಅಧೀಕ್ಷಕ, ಉಪ ಆಧೀಕ್ಷಕ ಹುದ್ದೆಗೆ ಹೆಚ್ಚಿನ ಬೇಡಿಕೆ ಇದೆ. ಪ್ರತಿ ಬಾರಿ ವರ್ಗಾವಣೆ ಸಂದರ್ಭದಲ್ಲಿ ಮೆಗಾ ಹರಾಜಿನಂತೆ ಅತಿ ಹೆಚ್ಚು ಹಣ ಕೊಡುವ ಅಧಿಕಾರಿಗೆ ಆಯಕಟ್ಟಿನ ಹುದ್ದೆಯನ್ನು ಹಂಚಿಕೆ ಮಾಡಲಾಗುತ್ತದೆ. ಅಬಕಾರಿ ಉಪ ಆಯುಕ್ತರು ಒಂದು ಸ್ಥಳಕ್ಕೆ ವರ್ಗಾವಣೆಗೊಂಡರೆ ಅದೇ ಸ್ಥಳದಲ್ಲಿ ನಿಯಮದಂತೆ 2 ವರ್ಷವರೆಗೆ ಕಾರ್ಯನಿರ್ವಸಬಹುದು. ಆದರೆ, ಕೆಲಉಪ ಆಯುಕ್ತರನ್ನು ಒಂದೇ ವರ್ಷದಲ್ಲಿ 3 ಬಾರಿ ವರ್ಗಾಯಿಸಲಾಗಿದೆ. ಕೆಲ ಉಪ ಆಯುಕ್ತರನ್ನು ಪ್ರಿ ಮಚ್ಯೂರ್( ಅವಧಿ ಪೂರ್ವ ಮುನ್ನ) ವರ್ಗಾವಣೆ ಮಾಡಲಾಗಿದೆ. ಇಲಾಖೆಯಲ್ಲಿ ಈವರೆಗೆ ವಿವಿಧ ವೃಂದದ ಒಟ್ಟು 400 ಅಧಿಕಾರಿಗಳನ್ನು ವರ್ಗಾವಣೆ ಮಾಡಲಾಗಿತ್ತು. ಇದರಲ್ಲಿ ಅಂದಾಜು 200 ಅಧಿಕಾರಿಗಳು ಅವಧಿ ಪೂರ್ವ ಮುನ್ನ ಎತ್ತಂಗಡಿ ಮಾಡಲಾಗಿತ್ತು.