ಹುಣಸೂರು: ಪಟ್ಟಣದಲ್ಲಿ ಮುಸ್ಲಿಮರು ಈದ್ ಮಿಲಾದ್‌ನ್ನು ಗುರುವಾರ ಸಂಭ್ರಮದಿಂದ ಆಚರಿಸಿದರು.
ಪಟ್ಟಣದ ಶಬ್ಬೀರ್‌ನಗರ ಬಡಾವಣೆಯಿಂದ ಮೆರವಣಿಗೆಯಲ್ಲಿ ಹೊರಟು ನಗರದ ಬಸ್‌ನಿಲ್ದಾಣದ ರಸ್ತೆ, ಬಜಾರ್ ರಸ್ತೆ, ಜೆ.ಎಲ್.ಬಿ.ರಸ್ತೆ, ಎಸ್.ಜೆ.ರಸ್ತೆ, ಸೇತುವೆ ಮೂಲಕ ಪ್ರವಾಸಿ ಮಂದಿರವನ್ನು ತಲುಪಿ ಅಲ್ಲಿಂದ ಮರಳಿ ಈದ್ಗಾ ಮೈದಾನವನ್ನು ಸೇರಿಕೊಂಡರು.
ಶಬ್ಬೀರ್ ನಗರದಲ್ಲಿ ವಿವಿಧ ಮಸೀದಿಗಳ ಮೌಲ್ವಿಗಳು ಮಹಮ್ಮದ್ ಪೈಗಂಬರ್ ಅವರ ಜನ್ಮದಿನದ ಶುಭಾಶಯ ವಿನಿಮಯ ಮಾಡಿಕೊಂಡರು. ಮಾಜಿ ಶಾಸಕ ಎಚ್.ಪಿ.ಮಂಜುನಾಥ್ ಮೆರವಣಿಗೆಯಲ್ಲಿ ಪಾಲ್ಗೊಂಡು ಮುಸ್ಲಿಮರಿಗೆ ಶುಭ ಕೋರಿದರು. ಮುಸ್ಲಿಂ ಮುಖಂಡರಾದ ಹಜರತ್ ಜಾನ್, ರಿಜ್ಞಾನ್ ಪಾಷ, ನಗರಸಭೆ ಸದಸ್ಯ ಮಾಲಿಕ್ ಪಾಷಾ, ಸಿರಾಜ್, ಪರ್ವೀನ್ ತಾಜ್, ಬಷೀರ್ ಅಹಮದ್ ಇತರರು ಹಾಜರಿದ್ದರು.
ಗುರುಪುರ ಗ್ರಾಮದ ಮಸೀದಿಯ ವಿದ್ಯಾರ್ಥಿಗಳು ದಫ್ ಹಾಡಿಗೆ ಹೆಜ್ಜೆ ಹಾಕಿ ಸಂಭ್ರಮಿಸಿದರು. ಮೆಕ್ಕಾ ಮದೀನದಲ್ಲಿನ ಮಸೀದಿಗಳ ಪ್ರತಿರೂಪಗಳನ್ನು ವಾಹನದಲ್ಲಿರಿಸಿ ಮೆರವಣಿಗೆಯಲ್ಲಿ ತರಲಾಯಿತು.