ನ್ಯೂಸ್

ಕುಶಾನರ ಕಾಲದ ಪಟ್ಟಣದ ಉತ್ಖನನ: 2000 ಸಾವಿರ ವರ್ಷ ಹಿಂದಿನ ಇಟ್ಟಿಗೆ ಗೋಡೆಗಳು ಗೋಚರ..

ಪಟನಾ: ಭಾರತೀಯ ಪುರಾತತ್ವ ಸರ್ವೆಕ್ಷಣಾಲಯ (ಎಎಸ್​ಐ) ಬಿಹಾರದ ರಾಜಧಾನಿ ಪಟನಾದ ಕುಮ್ರಹಾರ್ ಪ್ರದೇಶದಲ್ಲಿ ಕೈಗೊಂಡ ಉತ್ಖನನದ ವೇಳೆ ಎರಡು ಸಾವಿರ ವರ್ಷಗಳ ಹಿಂದಿನ ಪಟ್ಟಣದ ಕುರುಹುಗಳು ಪತ್ತೆಯಾಗಿವೆ. ಇದು ಕುಶಾನರ ಅವಧಿಯ ನಗರ ಇರಬಹುದು ಎಂದು ಅಂದಾಜಿಸಲಾಗಿದೆ.

ಪಟನಾ ರೈಲ್ವೆ ನಿಲ್ದಾಣದ ಪೂರ್ವಕ್ಕೆ 6 ಕಿ.ಮೀ ದೂರದ ಕುಮ್ರಹಾರ್ ಪ್ರದೇಶದಲ್ಲಿ ಕೊಳದ ಪುನರುಜ್ಜೀವನದ ಕಾಮಗಾರಿ ಸಂದರ್ಭದಲ್ಲಿ ಹಳೆಯದಾದ ಇಟ್ಟಿಗೆ ಗೋಡೆಯ ಅವಶೇಷಗಳು ಗೋಚರಿಸಿದವು. ನಂತರ ಉತ್ಖನನವನ್ನು ಮುಂದುವರಿಸಿದಾಗ. ಎರಡು ಸಹಸ್ರಮಾನದ ಹಿಂದಿನ ಪಟ್ಟಣದ ಗೋಡೆಯಂತಹ ರಚನೆಗಳು ಕಂಡುಬಂದವು ಎಂದು ಎಎಸ್​ಐ ಪಟನಾ ವೃತ್ತದ ಅಧೀಕ್ಷಕ ಪುರಾತತ್ತ್ವ ಶಾಸ್ತ್ರಜ್ಞೆ ಗೌತಮಿ ಭಟ್ಟಾಚಾರ್ಯ ಹೇಳಿದ್ದಾರೆ.

ಕೊಳದ ಒಳಗಿನ ಇಟ್ಟಿಗೆ ಗೋಡೆಗಳು ಗಮರ್ನಾಹವಾದ ಸಂಶೋಧನೆಯಾಗಿದೆ. ಉತ್ತರ ಭಾರತದಲ್ಲಿ ಆಳ್ವಿಕೆ ನಡೆಸಿದ ಕುಶಾನರ ಕಾಲದಲ್ಲಿ ಈ ಪಟ್ಟಣ ನಿರ್ಮಾಣ ಆಗಿರಬಹುದು ಎಂದು ತೋರುತ್ತದೆ. ವಿವರವಾದ ವಿಶ್ಲೇಷಣೆ ನಂತರವೇ ನಿರ್ದಿಷ್ಟ ತೀರ್ವನಕ್ಕೆ ಬರಲು ಸಾಧ್ಯ ಎಂದು ಅವರು ಹೇಳಿದ್ದಾರೆ. ಕೇಂದ್ರ ಸರ್ಕಾರದ ಮಿಷನ್ ಅಮೃತ್ ಸರೋವರ್ ಉಪಕ್ರಮದ ಭಾಗವಾಗಿ ಭಾರತೀಯ ಪುರಾತತ್ವ ಸರ್ವೆಕ್ಷಣಾ ಇಲಾಖೆ ಪಟನಾದ ಹನ್ನೊಂದು ಕೊಳಗಳನ್ನು ಪುನರ್​ಜ್ಜೀವಗೊಳಿಸುತ್ತಿದೆ.

ಇದೇ ಪ್ರದೇಶದಲ್ಲಿ ಈ ಹಿಂದೆ ನಡೆದ ಉತ್ಖನನದ ವೇಳೆ ಮೌರ್ಯ ಸಾಮ್ರಾಜ್ಯಕ್ಕೆ ಸಂಬಂಧಿಸಿದ ಅವಶೇಷಗಳು ಪತ್ತೆಯಾಗಿದ್ದವು. ಪಟನಾದ ಹಿಂದಿನ ಹೆಸರು ಪಾಟಲೀಪುತ್ರವಾಗಿತ್ತು ಎನ್ನಲಾಗಿದ್ದು, ದಶಕಗಳ ಹಿಂದೆ ಉತ್ಖನನದ ವೇಳೆ ಸುಮಾರು 600 ಗೋಪುರಗಳು, 64 ಹೆಬ್ಬಾಗಿಲು, ಮರದ ಗೋಡೆಗಳನ್ನು ಹೊಂದಿದ್ದ ಮನೆಗಳು ಕಂಡು ಬಂದಿದ್ದವು.