ನ್ಯೂಸ್

ಕುಸಿದ ಆಡಳಿತಕ್ಕೆ ನಿದರ್ಶನ: ತೇಜಸ್ವಿ ಸೂರ್ಯ ಟೀಕೆ | Election delay effect

ಬೆಂಗಳೂರು: ರಾಜಧಾನಿಯ ರಸ್ತೆ ಗುಂಡಿಗಳನ್ನು ಮುಚ್ಚುವ ಕಾಮಗಾರಿ ಡಿಸಿಎಂ ಡಿ.ಕೆ.ಶಿವಕುಮಾರ್ ಮೇಲ್ವಿಚಾರಣೆ, ಮುಖ್ಯ ಕಾರ್ಯದರ್ಶಿ ಡಾ.ಶಾಲಿನಿ ರಜನೀಶ್ ಖುದ್ದು ವೀಕ್ಷಿಸಿ ಸೂಚನೆ ನೀಡುತ್ತಿರುವುದು ಹೆಮ್ಮೆಪಡುವುದಲ್ಲ. ಪಾಲಿಕೆಗಳ ಕುಸಿದ ಆಡಳಿತಕ್ಕೆ ನಿದರ್ಶನವೆಂದು ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಕಟುವಾಗಿ ಟೀಕಿಸಿದ್ದಾರೆ.

ಸಾಮಾಜಿಕ ಜಾಲತಾಣದ ತಮ್ಮ ಖಾತೆಯಲ್ಲಿ ಈ ಕುರಿತು ಬುಧವಾರ ಸಂದೇಶ ಹಂಚಿಕೊಂಡಿರುವ ಅವರು, ಉಪಮುಖ್ಯಮಂತ್ರಿ ಹಾಗೂ ಮುಖ್ಯ ಕಾರ್ಯದರ್ಶಿಗೆ ರಾಜ್ಯಮಟ್ಟದ ಅನೇಕ ಮಹತ್ವದ ಜವಾಬ್ದಾರಿ, ಕೆಲಸಗಳಿರುತ್ತವೆ.

ಆದರೆ ಪಾಲಿಕೆ ಅಧಿಕಾರಿಗಳು ನಿರ್ವಹಿಸಬೇಕಾದ ಹೊಣೆಗಾರಿಕೆಯನ್ನು ಡಿಸಿಎಂ, ಸಿಎಸ್ ತಮ್ಮ ಹೆಗಲ ಮೇಲೆ ತೆಗೆದುಕೊಂಡಿದ್ದಾರೆ. ಬೆಂಗಳೂರು ಮಹಾನಗರ ಪಾಲಿಕೆಯು ಆರು ವರ್ಷಗಳಿಂದ ಚುನಾಯಿತ ಆಡಳಿತ ಮಂಡಳಿಯಿಲ್ಲದೆ ಇರುವುದು ಆಡಳಿತ ಕುಸಿತಕ್ಕೆ ಕಾರಣವೆಂದು ದೂರಿದ್ದಾರೆ.

ಆಯುಕ್ತರ ಪಾತ್ರ

ಕರ್ನಾಟಕದ ಭವಿಷ್ಯವನ್ನು ರೂಪಿಸಬೇಕಾದ ರಾಜ್ಯ ನಾಯಕರು ಆಯುಕ್ತರ ಪಾತ್ರ ನಿರ್ವಹಿಸುತ್ತಿದ್ದಾರೆ. ಗುಂಡಿಗಳು ಮುಚ್ಚುವುದನ್ನು ಮಿಷನ್ ಮೋಡ್‌ನಲ್ಲಿ ಮೇಲ್ವಿಚಾರಣೆ ಮಾಡುತ್ತಿದ್ದೇನೆ ಎಂದು ಡಿ.ಕೆ.ಶಿವಕುಮಾರ್ ತಿಳಿಸಿ, ಪ್ರತಿದಿನ ಒಂದು ಸಾವಿರ ಗುಂಡಿಗಳು ಮುಚ್ಚುವುದನ್ನು ಪ್ರಮುಖ ಸಾಧನೆ ಎಂದು ಹೇಳಿಕೊಳ್ಳುತ್ತಿದ್ದಾರೆ.

ನಿಯಮಿತವಾಗಿ ಚುನಾವಣೆ ನೆಸಿ ಹೊಣೆಗಾರಿಕೆ, ಅಧಿಕಾರ ನೀಡುವುದು ಅಷ್ಟೇ ಮುಖ್ಯವಾಗಿದೆ. ಇಲ್ಲದಿದ್ದರೆ ನಮ್ಮ ನಗರಗಳು ಅಭಿವೃದ್ಧಿ ಇಂಜಿನ್‌ಗಳಾಗಿ ಎಂದಿಗೂ ಬೆಳೆಯುವುದಿಲ್ಲ ಎಂದು ಸಂಸದ ತೇಜಸ್ವಿ ಸೂರ್ಯ ಕಳವಳ ವ್ಯಕ್ತಪಡಿಸಿದ್ದಾರೆ.