ನ್ಯೂಸ್

ಮಾಜಿ ಮುಖ್ಯಮಂತ್ರಿಗೆ ವಕ್ಕರಿಸಿದ ಕರೊನಾ ಸೋಂಕು: ಕಾಂಗ್ರೆಸ್​ ಸಚಿವರಲ್ಲಿ ಎರಡನೇ ಕೇಸ್​!

ಮುಂಬೈ: ಮಹಾರಾಷ್ಟ್ರದಲ್ಲಿ ಕರೊನಾ ಸೋಂಕು ಕೇಕೇ ಹಾಕುತ್ತಿದೆ. ಮುಂಬೈನಿಂದ ಕರ್ನಾಟಕಕ್ಕೆ ಬಂದಿರುವ ನೂರಾರು ಮಂದಿಯಲ್ಲಿ ಸೋಂಕು ಪತ್ತೆಯಾಗಿರುವ ಬೆನ್ನಲ್ಲೇ ಇದೀಗ ಮಹಾರಾಷ್ಟ್ರದ ಗಣ್ಯರಲ್ಲಿಯೂ ಸೋಂಕು ಕಾಣಿಸಿಕೊಳ್ಳಲು ಆರಂಭವಾಗಿದೆ.

ಕೆಲ ದಿನಗಳ ಹಿಂದಷ್ಟೇ ವಸತಿ ಸಚಿವ ಜಿತೇಂದ್ರ ಅಹ್ವಾಡ್ ಕೊರೋನ ವೈರಸ್ ಸೋಂಕಿಗೆ ಗುರಿಯಾಗಿದ್ದರು. ಇದೀಗ ಮತ್ತೊಬ್ಬ ಸಚಿವರ ಸರದಿ. ಮಾಜಿ ಮುಖ್ಯಮಂತ್ರಿ ಹಾಗೂ ಹಾಲಿ ಸಚಿವ ಕಾಂಗ್ರೆಸ್​ನ ಅಶೋಕ್​ ಚವ್ಹಾಣ್​ ಅವರಿಗೆ ಕರೊನಾ ಸೋಂಕು ದೃಢಪಟ್ಟಿದೆ. ಆತಂಕದ ವಿಷಯವೆಂದರೆ ಚವ್ಹಾಣ್​​ ಅವರು ಮುಂಬೈನಿಂದ ಮರಾಠವಾಡದಲ್ಲಿರುವ ತಮ್ಮ ಮನೆಗೆ ಆಗಾಗ್ಗೆ ಸಂಚರಿಸುತ್ತಿದ್ದರು ಎಂಬ ಮಾಹಿತಿ ಲಭ್ಯವಾಗಿದೆ; ಇದರಿಂದ ಎಲ್ಲರನ್ನೂ ಈಗ ಚಿಕಿತ್ಸೆಗೆ ಒಳಪಡಿಸಬೇಕಿದೆ.

ಲೋಕೋಪಯೋಗಿ ಸಚಿವರಾಗಿರುವ ಚವ್ಹಾಣ್​​, ಇದೀಗ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 2008ರಲ್ಲಿ ಮುಂಬೈ ಮೇಲೆ ದಾಳಿ ನಡೆದ ಸಂದರ್ಭದಲ್ಲಿ ಇವರು ಕಾಂಗ್ರೆಸ್​ ಪಕ್ಷದಿಂದ ಮುಖ್ಯಮಂತ್ರಿಯ ಗದ್ದುಗೆಗೆ ಏರಿದ್ದರು. ಆದರೆ ಆದರ್ಶ ಹೌಸಿಂಗ್​ ಸೊಸೈಟಿ ಹಗರಣದಲ್ಲಿ ಸಿಲುಕಿದ ನಂತರ ಅವರನ್ನು 2010ರಲ್ಲಿ ಒತ್ತಾಯಪೂರ್ವಕಾಗಿ ರಾಜೀನಾಮೆ ನೀಡಬೇಕಾಗಿ ಬಂದಿತ್ತು.

ಅಂದಹಾಗೆ, ಮಹಾರಾಷ್ಟ್ರದಲ್ಲಿ ಇಂದು ಬೆಳಗ್ಗೆಯವರೆಗೆ 50,231 ಕರೊನಾ ಸೋಂಕು ಪ್ರಕರಣ ಪತ್ತೆಯಾಗಿದೆ. 1,635 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. (ಏಜೆನ್ಸೀಸ್​)