ಬೆಂಗಳೂರು: ಲೋಕಸಭೆ ಚುನಾವಣೆ ಪೂರ್ವ ಜೆಡಿಎಸ್ ಜತೆಗೆ ಬಿಜೆಪಿ ಮೈತ್ರಿ ವಿಚಾರ ರಾಜಕೀಯ ಅಂಗಳದಲ್ಲಿ ಬಿಸಿ ಚರ್ಚೆ ಹುಟ್ಟಿ ಹಾಕಿದೆ. ಕಾಂಗ್ರೆಸ್ ವ್ಯಂಗ್ಯಕ್ಕೆ ಬಿಜೆಪಿ ತಿರುಗೇಟು ನೀಡುತ್ತಿದ್ದರೆ, ಜೆಡಿಎಸ್ ಹಾಗೂ ಬಿಜೆಪಿ ಹಿರಿಯ ನಾಯಕರು ಈ ವಿಷಯದಲ್ಲಿ ಸುದೀರ್ಘ ಮಾತುಕತೆ ಅಗತ್ಯವಿದೆ ಎಂದು ಪ್ರತಿಪಾದಿಸುತ್ತಿದ್ದಾರೆ. ಈ ನಡುವೆ ಬಿಜೆಪಿ ಸಂಸದೀಯ ಮಂಡಳಿ ಸದಸ್ಯರೂ ಆದ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಬುಧವಾರ ದೆಹಲಿಗೆ ತೆರಳುವ ಸಾಧ್ಯತೆಗಳಿವೆ.
ಮುಖ್ಯವಾಗಿ ಮೈತ್ರಿ ಕುರಿತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರೊಂದಿಗೆ ಚರ್ಚಿಸಲೆಂದು ತೆರಳುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಇದೇ ಸಂದರ್ಭದಲ್ಲಿ ಪ್ರತಿಪಕ್ಷ ನಾಯಕ ಹಾಗೂ ಪಕ್ಷದ ರಾಜ್ಯಾಧ್ಯಕ್ಷ ಹುದ್ದೆಗಳ ಭರ್ತಿಯೂ ಪ್ರಸ್ತಾಪವಾಗಬಹುದು ಎಂದು ಮೂಲಗಳು ತಿಳಿಸಿವೆ.
ದೆಹಲಿ ಪ್ರವಾಸದ ಕುರಿತು ಡಾಲರ್ಸ್ ಕಾಲೊನಿಯ ಧವಳಗಿರಿ ನಿವಾಸದ ಬಳಿ ಸುದ್ದಿಗಾರರಿಗೆ ಮಂಗಳವಾರ ಪ್ರತಿಕ್ರಿಯಿಸಿದ ಅವರು ಸದ್ಯಕ್ಕೆ ದೆಹಲಿಗೆ ತೆರಳುವ ಬಗ್ಗೆ ಯೋಚಿಸಿಲ್ಲವೆಂದರೆ, ಬಿಜೆಪಿ ರಾಜ್ಯ ಕಚೇರಿ ಬಳಿ ಸುದ್ದಿಗಾರರಿಂದ ಮತ್ತೊಮ್ಮೆ ಎದುರಾದ ಇದೇ ಪ್ರಶ್ನೆಗೆ ನಾಳೆ ದೆಹಲಿಗೆ ಹೋಗುತ್ತೇನೆ. ಅಮಿತ್ ಶಾ ಭೇಟಿ ಮಾಡುತ್ತೇನೆ ಎಂದು ಉತ್ತರಿಸಿದ್ದಾರೆ.