ನ್ಯೂಸ್

ರಾಜ್ಯ ಸರ್ಕಾರದ ವಿರುದ್ಧ ಕಹಳೆ; ಪ್ರವಾಸಕ್ಕೆ ಧುಮುಕಲಿರುವ ಮಾಜಿ ಸಿಎಂ ಬಿಎಸ್‌ವೈ

ಬೆಂಗಳೂರು: ಬಿಜೆಪಿಗೆ ಬಲಿಷ್ಠ ಕಾರ್ಯಕರ್ತರ ಪಡೆಯಿದೆ ಎಂದು ಬೀಗುತ್ತಾ ಕುಳಿತರೆ ಸಾಲದು. ವಿಧಾನಸಭೆ ಚುನಾವಣೆ ಸೋಲಿನ ಬಳಿಕ ಘಾಸಿಗೊಂಡಿರುವ ಕಾರ್ಯಕರ್ತರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ಪ್ರಯತ್ನವಾಗಬೇಕು ಎಂದಿದ್ದ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಈ ದಿಸೆಯಲ್ಲಿ ಒಂದು ಹೆಜ್ಜೆ ಮುಂದಿಟ್ಟಿದ್ದಾರೆ.

ರಾಜ್ಯ ಸರ್ಕಾರದ ವೈಲ್ಯ ಖಂಡಿಸಿ ಜನರಲ್ಲಿ ಜಾಗೃತಿ, ಪಕ್ಷದ ಕಾರ್ಯಕರ್ತರಲ್ಲಿ ಹುರುಪು ತುಂಬಲು ಸಂಘಟನಾ ಸಭೆಗಳು ನಡೆಯಲಿವೆ. ಪಕ್ಷ ಬಲಪಡಿಸುವುದಕ್ಕಾಗಿ 80ರ ಹರೆಯದ ಬಿಎಸ್‌ವೈ, ಸಂಘಟನಾ ಪ್ರವಾಸ ಕೈಗೊಳ್ಳಲಿದ್ದಾರೆ.

ಕೋಲಾರ ಜಿಲ್ಲೆಯ ಮುಳುಬಾಗಿಲು ತಾಲೂಕಿನ ಪ್ರಸಿದ್ಧ ಕುರುಡುಮಲೆ ಮಹಾಗಣಪತಿ ದೇವಸ್ಥಾನದಲ್ಲಿ ಭಾನುವಾರ ಬೆಳಗ್ಗೆ 11ಕ್ಕೆ ದರ್ಶನ ಪಡೆದು, ಪೂಜೆ ಸಲ್ಲಿಸುವ ಮೂಲಕ ಬಿಎಸ್‌ವೈ ಸಂಘಟನಾ ಪ್ರವಾಸ ಚಾಲನೆ ಪಡೆಯಲಿದೆ.

ಇದೇ ಸಂದರ್ಭದಲ್ಲಿ ದೇವಸ್ಥಾನದ ಸಮೀಪ ಆಯೋಜಿಸಿರುವ ಕಾರ್ಯಕರ್ತರ ಸಭೆಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಸಂಘಟನಾ ಪ್ರವಾಸದ ಉದ್ದೇಶವನ್ನು ವಿವರಿಸಿ, ಮುಖಂಡರು ಮತ್ತು ಕಾರ್ಯಕರ್ತರು ಮುಂದೇನು ಮಾಡಬೇಕು ಎಂದು ತಿಳಿಸಲಿದ್ದಾರೆ.

ಕಾರ್ಯಕ್ರಮದಲ್ಲಿ ಮಾಜಿ ಸಿಎಂಗಳಾದ ಬಸವರಾಜ ಬೊಮ್ಮಾಯಿ, ಡಿ.ವಿ.ಸದಾನಂದಗೌಡ, ಕೇಂದ್ರ ಸಚಿವ ಪ್ರಲ್ಹಾದ ಜೋಶಿ, ಪಕ್ಷದ ರಾಜ್ಯಾಧ್ಯಕ್ಷ, ಮಾಜಿ ಸಚಿವರಾದ ಸಿ.ಟಿ.ರವಿ, ಗೋವಿಂದ ಕಾರಜೋಳ, ಕೆ.ಎಸ್.ಈಶ್ವರಪ್ಪ ಬಿ.ಶ್ರೀರಾಮುಲು, ಆರ್.ಅಶೋಕ್, ಡಾ.ಸಿ.ಎನ್.ಅಶ್ವತ್ಥ ನಾರಾಯಣ, ಸಂಸದ-ಶಾಸಕರು, ಪಕ್ಷದ ಪದಾಧಿಕಾರಿಗಳು ಭಾಗವಹಿಸಲಿದ್ದಾರೆ.

ಬರ ಪರಿಹಾರ, ಕಾವೇರಿ ವ್ಯಾಜ್ಯ ಸಮರ್ಪಕ ನಿರ್ವಹಣೆಯಲ್ಲಿ ಕಾಂಗ್ರೆಸ್ ಸರ್ಕಾರ ವಿಲವಾಗಿದೆ. ವಿದ್ಯುತ್ ಅಭಾವ ಉಲ್ಬಣಿಸಿದ್ದರೆ, ಬೆಲೆ ಏರಿಕೆಯಿಂದ ಜನರು ತತ್ತರಿಸಿದ್ದಾರೆ. ಈ ಎಲ್ಲ ವಿಚಾರ ಜನರ ಮುಂದಿಟ್ಟು ಜಾಗೃತಿ ಮೂಡಿಸಲಿದ್ದು, ಪ್ರವಾಸದ ದಿನಗಳನ್ನು ಶೀಘ್ರವೇ ಪ್ರಕಟಿಸಲಾಗುವುದು ಎಂದು ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್.ರವಿಕುಮಾರ್ ತಿಳಿಸಿದ್ದಾರೆ.