ನ್ಯೂಸ್

ಸರ್ಕಾರಕ್ಕೆ ಚಾಟಿ ಬೀಸಲು ಬಿಎಸ್‌ವೈ ಹುರುಪು; ಕೇಸರಿ ಪಡೆಗೆ ಹೊಳಪು

ಬೆಂಗಳೂರು: ಜನರಿಗೆ ಮಿಡಿಯುವ ಹಂಬಲ, ಹೋರಾಟದ ಛಲ, ಸಂಘಟನೆಗೆ ಬಲ ತುಂಬುವ ಗುರಿ ಸಾಧಿಸಲು ವಯಸ್ಸಿನ ಹಂಗಿಲ್ಲ. ಸರ್ಕಾರಕ್ಕೆ ಚಾಟಿ ಬೀಸಲು ನಾನಂತೂ ಬೀದಿಗೆ ಇಳಿಯಲು ತಯಾರು ಎಂದು ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಗುಟುರು ಹಾಕುತ್ತಿದ್ದಂತೆಯೇ ಆಡಳಿತ, ಸ್ವಪಕ್ಷ ಮೈಕೊಡವಿಕೊಂಡಿವೆ.

ಕಲಬುರಗಿಯಲ್ಲಿ ಬಿಡುವಿಲ್ಲದ ಕಾರ್ಯಕ್ರಮದ ನಡುವೆ ಸಿಎಂ ಸಿದ್ದರಾಮಯ್ಯ ಅವರು ಬಿಎಸ್‌ವೈ ನಿರ್ಧಾರಕ್ಕೆ ಕೂಡಲೇ ಪ್ರತಿಕ್ರಿಯಿಸಿದ್ದಾರೆ. ಆ ಮೂಲಕ ಬಿಎಸ್‌ವೈ ಹೋರಾಟದ ತೀವ್ರತೆ, ಜನರು ಸಿಟ್ಟು ಸರ್ಕಾರದತ್ತ ತಿರುಗುವುದನ್ನು ತಪ್ಪಿಸಲು ಪ್ರಯತ್ನಿಸಿದಂತಿದೆ. ಜನರ ಗಮನ ಬೇರೆಡೆ ಸೆಳೆಯುವ ಈ ಪ್ರಯತ್ನದಲ್ಲಿ ಕಾಂಗ್ರೆಸ್ ನಾಯಕರು ಮುಂದಿನ ದಿನಗಳಲ್ಲಿ ಸಾಥ್ ಸಿಎಂ ಗೆ ಸಾಥ್ ನೀಡಿದರೂ ಅಚ್ಚರಿಯಿಲ್ಲ.

ಬಿಎಸ್‌ವೈ ತೋರಿಸಿದ ಹುರುಪು ಕೇಸರಿ ಪಡೆಗೆ ಹೊಸ ಹೊಳಪು ನೀಡಿದೆ. ಪ್ರತಿಪಕ್ಷ ನಾಯಕನ ಅಯ್ಕೆಯಾಗಿಲ್ಲ, ರಾಜ್ಯ ಸಮಿತಿಗೆ ನೂತನ ಸಾರಥಿ ಇತ್ಯರ್ಥವಾಗಲಿಲ್ಲವೆಂಬ ಕೊರಗು ದೂರ ಸರಿಸಿ ಪಕ್ಷಕ್ಕಾಗಿ ದುಡಿಯಲು ಪ್ರೇರಣೆ ನೀಡಿದೆ. ಸರ್ಕಾರದ ಕಾರ್ಯವೈಖರಿ ವಿರುದ್ಧ ಹೇಳಿಕೆ, ಸಾಂಕೇತಿಕ ಹೋರಾಟಕ್ಕೆ ಸೀಮಿತರಾಗಿದ್ದ ನಾಯಕರು ಟೊಂಕ ಕಟ್ಟಿ ನಿಲ್ಲುವ ಅನಿವಾರ್ಯತೆ ಸೃಷ್ಟಿಯಾಗಿದೆ.

ಸಂಸತ್ತಿನ ಅಧಿವೇಶನದ ನಂತರ ಚಳವಳಿ ?

ಕೋಲಾರ ಜಿಲ್ಲೆಯ ಪ್ರಸಿದ್ಧ ಕುರುಡುಮಲೆ ಮಹಾಗಣಪತಿ ದೇವಸ್ಥಾನದಲ್ಲಿ ದಿನವೇ ವಿಶೇಷ ಪೂಜೆ ಸಲ್ಲಿಸಿ, ಚಳವಳಿಗೆ ಧುಮುಕಲು ಬಿಎಸ್‌ವೈ ಸನ್ನದ್ಧರಾಗಿದ್ದರು. ಆದರೆ ಕೇಂದ್ರ ಸಚಿವರು, ಸಂಸದರು ಪಾಲ್ಗೊಳ್ಳಲು ಉತ್ಸುಕರಾಗಿದ್ದರು. ಈ ಹಿನ್ನೆಲೆಯಲ್ಲಿ ರಾಜ್ಯ ನಾಯಕರೆಲ್ಲ ಸೇರಿ ಬಿಎಸ್‌ವೈರಿಂದ ಕಾಲಾವಕಾಶ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.

ಪೂರ್ವ ನಿರ್ಧಾರದಂತೆ ಕುರುಡುಮಲೆ ಮಹಾಗಣಪತಿ ದರ್ಶನ, ಪೂಜೆ ಹಾಗೂ ಕಾರ್ಯಕರ್ತರ ಸಂಘಟನಾ ಸಭೆ ಭಾನುವಾರ ನಡೆದಿವೆ. ಬಿಎಸ್‌ವೈ ನೇತೃತ್ವದಲ್ಲೇ ರಾಜ್ಯ ನಾಯಕರು ಸೇರಿಕೊಂಡು ಚಳವಳಿಗೆ ಇಳಿಯಲು ನಿರ್ಧರಿಸಿದ್ದು, ಸಂಸತ್ತಿನ ವಿಶೇಷ ಅಧಿವೇಶನ ಮುಗಿದ ನಂತರ ಹೋರಾಟ ಶುರುವಾಗುವ ಸಾಧ್ಯತೆಗಳಿವೆ ಎಂದು ಪಕ್ಷದ ಮೂಲಗಳು ತಿಳಿಸಿವೆ.