ನ್ಯೂಸ್

ಬೊಮ್ಮಾಯಿ ಕಸರತ್ತು; ತಿಳಿಯದಾಗಿದೆ ಬಿಜೆಪಿ ವರಿಷ್ಠರ ಹಕೀಕತ್ತು

ಮೃತ್ಯುಂಜಯ ಕಪಗಲ್

ಬೆಂಗಳೂರು: ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ದೆಹಲಿಯಲ್ಲಿ ಬಿಡಾರ ಹೂಡಿ, ವರಿಷ್ಠರ ಭೇಟಿಗೆ ಕಸರತ್ತು ನಡೆಸಿದ್ದಾರೆ. ಆದರೆ ರಾಜ್ಯ ಸಂಘಟನೆ ವಿಚಾರದಲ್ಲಿ ದೆಹಲಿ ನಾಯಕರ ಹಕೀಕತ್ತು ಏನಿದೆ ಎಂಬುದು ತಿಳಿಯದೆ ಪಕ್ಷದ ಎಲ್ಲ ಹಂತದ ರಾಜ್ಯ ನಾಯಕರು ನಿಗೂಢ ಮೌನಕ್ಕೆ ಶರಣಾಗಿದ್ದಾರೆ.

ಈ ನಡುವೆ ವರಿಷ್ಠರ ಬುಲಾವ್ ಮೇರೆಗೆ ಬೊಮ್ಮಾಯಿ ದೆಹಲಿಗೆ ತೆರಳಿದ್ದಾರೆ ಎನ್ನಲಾಗಿತ್ತು. ಸ್ವತಃ ಬೊಮ್ಮಾಯಿಯವರು ಇದನ್ನು ಅಲ್ಲಗಳೆದು, ಸಂಸದರ ಕೋರಿಕೆ ಮೇರೆಗೆ ಬಂದಿರುವೆ. ಮುಂದಿನ ಲೋಕಸಭೆ ಚುನಾವಣೆ ಕುರಿತು ಚರ್ಚೆಗೆ ಬಯಸಿರುವೆ ಎಂದು ಹೇಳುವ ಮೂಲಕ ವರಿಷ್ಠರು ಸದ್ಯ ರಾಜ್ಯದೆಡೆ ಕ್ಯಾರೆ ಎಂದಿಲ್ಲ ಎನ್ನುವುದು ದೃಢಪಟ್ಟಿದೆ.

ವಿಧಾನಮಂಡಲದ ಪ್ರತಿಪಕ್ಷ ನಾಯಕರ ಆಯ್ಕೆ, ಪಕ್ಷದ ರಾಜ್ಯ ಸಮಿತಿಗೆ ನೂತನ ಸಾರಥಿ ಆಯ್ಕೆ ಬಗ್ಗೆ ಮಾಹಿತಿ ಪಡೆದುಕೊಂಡಿದ್ದಾರೆ. ಹಲವು ನಾಯಕರ ಅಭಿಪ್ರಾಯವನ್ನು ಸಂಗ್ರಹಿಸಿದ್ದಾರೆ. ಆದರೆ ದೆಹಲಿಯಲ್ಲಿ ಬೀಡುಬಿಟ್ಟಿರುವ ಬೊಮ್ಮಾಯಿ ಭೇಟಿಗೆ ಅಮಿತ್ ಷಾ ಅಥವಾ ಜೆ.ಪಿ.ನಡ್ಡಾ ಇನ್ನೂ ಕಾಲಾವಕಾಶ ನೀಡದಿರುವುದು ಗಮನಾರ್ಹ.

ವಿಧಾನಸಭೆ ಚುನಾವಣೆಯಲ್ಲಿ ಸೋತ ನಂತರವೂ ಹುದ್ದೆಗಳಿಗಾಗಿ ತೆರೆಮರೆ ಲಾಬಿ, ಗೊಂದಲ, ಪರಸ್ಪರ ಕಾಲೆಳೆಯುವ, ಗುಂಪುಗಾರಿಕೆ ಚಟುವಟಿಕೆಗಳು ಮುಂದುವರಿದಿವೆ ಎಂಬ ಮಾಹಿತಿ ಪಡೆದ ವರಿಷ್ಠರು ತಟಸ್ಥರಾಗಿದ್ದಾರೆ. ಎಲ್ಲವೂ ತಿಳಿಯಾಗಿ, ವಸ್ತುಸ್ಥಿತಿ ಅರಿವಾಗಲಿ, ಕಾರ್ಯಕರ್ತರ ಪ್ರಶ್ನಿಸಲಿ ಎಂಬ ಕಾರಣಕ್ಕೆ ನಿರ್ಲಿಪ್ತ ನಿಲುವು ತಳೆದಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಕೇಂದ್ರ ಸಚಿವ ಸಂಪುಟ ಪುನರ್ ರಚನೆಗೆ ವರಿಷ್ಠರು ಬಯಸಿದ್ದಾರೆ. ಈ ಪ್ರಕ್ರಿಯೆ ಮುಗಿದ ನಂತರ ರಾಜ್ಯದ ಕಡೆಗೆ ಗಮನಹರಿಸಲಿದ್ದಾರೆ. ಲೋಕಸಭೆ ಚುನಾವಣೆಗೆ ಪೂರ್ವ ತಯಾರಿ ಅಗತ್ಯವಿರುವ ಕಾರಣಕ್ಕೆ ಸಂಘಟನೆ ಬಲವರ್ಧನೆಯತ್ತ ಗಮನನೀಡಲಿದ್ದಾರೆ.

ವಿಧಾನಸಭೆ ಚುನಾವಣೆಯಲ್ಲಿ ಸೋತ ನಂತರ ಬೊಮ್ಮಾಯಿ ಒಮ್ಮೆಯೂ ದೆಹಲಿಗೆ ತೆರಳಿ ವರಿಷ್ಠರನ್ನು ಭೇಟಿಯಾಗಲು ಪ್ರಯತ್ನಿಸಿಲ್ಲ. ಹಾಗೆಯೇ ದೆಹಲಿ ನಾಯಕರು ಕರೆದಿಲ್ಲವೆಂಬ ಚರ್ಚೆ ರಾಜ್ಯ ರಾಜಕೀಯದಲ್ಲಿ ಜೋರಾಗಿದೆ. ಇಂತಹ ಮಾತುಗಳಿಗೆ ತೆರೆ ಎಳೆಯಲೆಂದು ಬೊಮ್ಮಾಯಿ ಸ್ವಯಂಪ್ರೇರಿತವಾಗಿ ದೆಹಲಿಗೆ ಪ್ರಯಾಣ ಬೆಳೆಸಿರಬಹುದು ಎಂಬ ತರ್ಕವಿದೆ.