ಸಾಹಿತ್ಯ ಗ್ರಾಮದಲ್ಲಿ ನಿವೃತ್ತ ಪ್ರಾಚಾರ್ಯ ಡಾ. ಎಚ್.ಟಿ.ಕೃಷ್ಣಮೂರ್ತಿ ಮಾತನಾಡಿದರು. ಪ್ರೊ. ಎಸ್.ಪಿ.ಪದ್ಮಪ್ರಸಾದ್, ಆರ್.ಕೆ.ಸಿದ್ದರಾಮಣ್ಣ, ಡಾ. ಪಿ.ಭಾರತೀದೇವಿ, ಗೋ. ರಮೇಶ್‌ಗೌಡ ಮಾತನಾಡಿದರು. 
ನ್ಯೂಸ್

ಕನ್ನಡದಲ್ಲಿ ಅಡಗಿದೆ ವಿಕಾಸವಾದ: ಆರ್.ಕೆ.ಸಿದ್ದರಾಮಣ್ಣ

ಶಿವಮೊಗ್ಗ: ಕನ್ನಡ ಕೇವಲ ಒಂದು ಭಾಷೆಯಲ್ಲ, ಅದೊಂದು ಸಂಸ್ಕೃತಿ. ಅನೇಕ ವರ್ಷಗಳ ವಿಕಾಸವಾದ ಅದರಲ್ಲಿ ಅಡಗಿದೆ ಎಂದು ವಿಧಾನ ಪರಿಷತ್ ಮಾಜಿ ಸದಸ್ಯ ಆರ್.ಕೆ.ಸಿದ್ದರಾಮಣ್ಣ ಹೇಳಿದರು.

ಚಾಲುಕ್ಯ ನಗರದ ಸಾಹಿತ್ಯ ಗ್ರಾಮದಲ್ಲಿ ಶುಕ್ರವಾರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ನ 18ನೇ ಜಿಲ್ಲಾ ಸಮ್ಮೇಳನದಲ್ಲಿ ಕನ್ನಡ-ಬೇಗುದಿಗಳು ಕುರಿತ ಗೋಷ್ಠಿಯ ಅಧ್ಯಕ್ಷತೆ ವಹಿಸಿ ಮಾತನಾಡಿ, ನಮ್ಮಲ್ಲಿ ಯಾವುದೆಲ್ಲ ಬಳಕೆ ಮಾಡುತ್ತೇವೆಯೋ ಅದು ಮಾತ್ರ ಉಳಿಯುತ್ತದೆ. ಹಾಗಾಗಿ ಕನ್ನಡವನ್ನು ಎಲ್ಲೆಲ್ಲಿ ಬಳಸಲು ಅವಕಾಶವಿದೆ ಎಂಬುದನ್ನು ತಿಳಿಯಬೇಕು. ಕರ್ನಾಟಕದಲ್ಲಿ ಮಾತ್ರ ಕನ್ನಡ ಬಳಕೆಗೆ ಅವಕಾಶವಿದ್ದು ಅದನ್ನರಿತು ಕನ್ನಡ ಬಳಸಬೇಕಿದೆ ಎಂದರು.
ಪುಸ್ತಕದಲ್ಲಿರುವ ಮಾಹಿತಿ ಶಿಕ್ಷಣವಲ್ಲ. ಯಾವುದು ಸರಿ, ಯಾವುದು ತಪ್ಪು ಎಂದು ತಿಳಿಯುವ ಜ್ಞಾನ ಬೇಕಿದೆ. ಜ್ಞಾನ, ವಿಜ್ಞಾನ ಹೋಗಿ ತಂತ್ರಜ್ಞಾನ ಬಂದಿದೆ. ಅದು ಹೋಗಿ ಇದೀಗ ಕೃತಕ ಬುದ್ಧಿಮತ್ತೆ ಬಂದಿದೆ. ಕೆಳ ಹಂತದ ನ್ಯಾಯಾಲಯದಲ್ಲಿ ಕನ್ನಡ ಬಳಕೆಯಾಗುತ್ತಿದೆ. ಆದರೆ ಹೈಕೋರ್ಟ್‌ನಲ್ಲ್ಲಿ ಬಳಕೆಯಾಗುತ್ತಿಲ್ಲ. ಅದು ಜಾರಿಯಾಗಬೇಕಿದೆ. ಕಾರ್ಯಾಂಗ, ಶಾಸಕಾಂಗದಲ್ಲಿ ಕನ್ನಡ ಬಳಕೆಯಾಗುತ್ತಿದೆ. ಅದನ್ನು ಮತ್ತಷ್ಟು ಪರಿಣಾಮಕಾರಿಯಾಗಿ ಮಾಡಬೇಕಿದೆ ಎಂದರು.
ಒಕ್ಕೂಟ ಸರ್ಕಾರದಲ್ಲಿ ಕನ್ನಡ ಸ್ಥಾನಮಾನ ಕುರಿತು ಮಾತನಾಡಿದ ನಿವೃತ್ತ ಪ್ರಾಚಾರ್ಯ ಡಾ. ಎಚ್.ಟಿ.ಕೃಷ್ಣಮೂರ್ತಿ, ಒಕ್ಕೂಟ ವ್ಯವಸ್ಥೆಯಲ್ಲಿ ರಾಜ್ಯ ಬಲಿಷ್ಠವಾದರೆ ಒಕ್ಕೂಟವೂ ಬಲಿಷ್ಠವಾಗಲಿದೆ. ನಾವೆಲ್ಲ ಸಂಕುಚಿತವಾದ ರಾಷ್ಟ್ರೀಯತೆಯ ಭಾವನೆಯ ಭ್ರಮೆಯಲ್ಲಿದ್ದೇವೆ. ಭ್ರಮಾಲೋಕದಿಂದ ಹೊರಬಂದು ವಾಸ್ತವತೆ ಬಗ್ಗೆ ಆಲೋಚಿಸಬೇಕಿದೆ. ಕರ್ನಾಟಕದಲ್ಲಿರುವ 70 ಭಾಷೆಗಳನ್ನು ಪೋಷಿಸಬೇಕಿದೆ. ಒಂದು ಜಾತಿ, ಧರ್ಮ, ಲಿಂಗದಿಂದ ಭಾರತ ಬಲಿಷ್ಠವಾಗುವುದಿಲ್ಲ. ಬಹುತ್ವ, ವೈವಿಧ್ಯವೇ ಒಕ್ಕೂಟ ಸರ್ಕಾರ. ಇಲ್ಲಿ ಪ್ರಧಾನಿ ಶ್ರೇಷ್ಠ, ಮುಖ್ಯಮಂತ್ರಿ ಕನಿಷ್ಠ , ಗ್ರಾಪಂ ಸದಸ್ಯ ಅದಕ್ಕಿಂತ ಕನಿಷ್ಠ ಎಂದಿಲ್ಲ. ಎಲ್ಲರಿಗೂ ಸಮಾನ ಗೌರವವಿದೆ ಎಂಬುದನ್ನು ಅರ್ಥಮಾಡಿಕೊಳ್ಳಬೇಕಿದೆ ಎಂದರು.
ಶಿಕ್ಷಣದಲ್ಲಿ ಕನ್ನಡ ಕುರಿತು ಮಾತನಾಡಿದ ಹೊಳೆಹೊನ್ನೂರು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಧ್ಯಾಪಕಿ ಡಾ. ಪಿ.ಭಾರತೀದೇವಿ, ಕನ್ನಡ ಮಾತೃ ಭಾಷೆಯಲ್ಲಿ ಶಿಕ್ಷಣ ನೀಡುವುದರ ಜತೆಗೆ ಇತರ ಸಮುದಾಯದವರ ಮಾತೃ ಭಾಷೆಯ ಬಗ್ಗೆಯೂ ಚಿಂತಿಸಬೇಕಿದೆ. ಮಕ್ಕಳು ಶಾಲೆ ಕಾಲೇಜುಗಳನ್ನು ಬಿಡಲು ಭಾಷಾ ಮಾಧ್ಯಮದ ಕೊಡುಗೆಯೂ ಇದೆ. ಪ್ರಾಥಮಿಕ ಶಿಕ್ಷಣವನ್ನು ಮಾತೃಭಾಷೆಯಲ್ಲಿಯೇ ನೀಡಬೇಕೆಂಬುದನ್ನು ಭಾಷಾ ವಿಜ್ಞಾನಿಗಳು ಹೇಳಿದ್ದಾರೆ. ಕೊಠಾರಿ ಆಯೋಗ ಕೂಡ ಮಾತೃ ಭಾಷೆಯ ಶಿಕ್ಷಣದ ಬಗ್ಗೆ ಹೇಳಿದೆ. ಸಮಾನ ಶಿಕ್ಷಣ ಬಂದಾಗ ಮಾತ್ರ ಸರ್ಕಾರಿ ಶಾಲೆಗಳು ಅಭಿವೃದ್ಧಿಯಾಗುತ್ತವೆ. ಐಸಿಎಸ್‌ಇ, ಸಿಬಿಎಸ್‌ಇ, ಕೇಂದ್ರೀಯ ಈ ರೀತಿಯ ಶಾಲೆಗಳು ಇರಬಾರದು. ಮಾತೃಭಾಷೆ ಜತೆಗೆ ಇತರ ಭಾಷೆಗಳನ್ನು ಕಲಿಸಬೇಕಿದೆ ಎಂದರು.
ಕನ್ನಡ ಪರಹೋರಾಟಗಾರ ಗೋ. ರಮೇಶ್ ಗೌಡ ವ್ಯವಹಾರದಲ್ಲಿ ಕನ್ನಡ ಕುರಿತು ಮಾತನಾಡಿದರು. ಸಮ್ಮೇಳನದ ಸರ್ವಾಧ್ಯಕ್ಷ ಪ್ರೊ. ಎಸ್.ಪಿ.ಪದ್ಮಪ್ರಸಾದ್ ಉಪಸ್ಥಿತರಿದ್ದರು.