ಭಾರತವನ್ನು ಧ್ವಂಸಗೊಳಿಸಲು ಜಾಗತಿಕವಾಗಿ ದುಷ್ಟ ಶಕ್ತಿಗಳು ಯತ್ನಿಸುತ್ತಿವೆ ಎಂದು ಮೋಹನ್ ಭಾಗವತ್ ಆರೋಪ
ಆಡಳಿತ ಬದಲಾವಣೆ ಕಾರ್ಯಾಚರಣೆಗಳ ಹಿಂದೆ ಕೆಲ ಅಧಿಕಾರದಾಹಿ ನಾಯಕರ ಕೈವಾಡವಿದೆ
ಫ್ರಾನ್ಸ್, ಅಲ್ಬೇನಿಯಾ, ಬಾಂಗ್ಲಾದೇಶ ಹಾಗೂ ನೇಪಾಳದಲ್ಲಿನಅಶಾಂತಿಯ ಬಗ್ಗೆ ಪ್ರಸ್ತಾಪ
ನಾಗ್ಪುರ: 'ಭಾರತ, ಹಿಂದೂಗಳು ಮತ್ತು ಸಂಘವನ್ನು ಯಾವ ರೀತಿಯಲ್ಲಿ ಧ್ವಂಸಗೊಳಿಸಬಹುದು ಎನ್ನುವ ಆಲೋಚನೆಯನ್ನು ದುಷ್ಟ ಶಕ್ತಿಗಳು ಮಾಡುತ್ತಿವೆ. ಅದಕ್ಕೆ ತಕ್ಕಂತೆ ಯೋಜನೆಯನ್ನು ಸಹ ರೂಪಿಸಿಕೊಳ್ಳುತ್ತಿವೆ.ಕೆಲವರು ತಮಗೆ ಬೇಕಾದಂತೆ ಈ ಪ್ರಯತ್ನಕ್ಕೆ ಸಹಾಯ ಮಾಡುತ್ತಿದ್ದಾರೆ. ಸ್ವಾರ್ಥ ರಾಜಕೀಯ ಹಿತಾಸಕ್ತಿಗಳು ಮತ್ತು ವಿವೇಚನೆಯ ಕೊರತೆಯಿಂದಾಗಿ, ಕೆಲವು ಮಹತ್ವಾಕಾಂಕ್ಷಿ ನಾಯಕರೂ ಸಹ ಇದರಲ್ಲಿ ಭಾಗಿಯಾಗುತ್ತಾರೆ' ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಮುಖ್ಯಸ್ಥ ಮೋಹನ್ ಭಾಗವತ್ ಆರೋಪಿಸಿದರು.
ನಾಗಪುರದಲ್ಲಿ ನಡೆದ ಆರ್ಎಸ್ಎಸ್ ವಿಜಯದಶಮಿ ಉತ್ಸವದಲ್ಲಿ ಮಾತನಾಡಿದ ಅವರು ಭಾರತವನ್ನು ದುರ್ಬಲಗೊಳಿಸಲು ಜಾಗತಿಕ ಶಕ್ತಿಗಳು ಗುರಿಯಾಗಿಸಿಕೊಂಡಿವೆ. ಅಂತಹ ಪ್ರಯತ್ನಗಳು ಭಾರತದಲ್ಲಿಯೂ ನಡೆಯುತ್ತಿದ್ದು, ಅಧಿಕಾರದಾಹಿ ಮಹತ್ವಾಕಾಂಕ್ಷಿ ನಾಯಕರು ಇದಕ್ಕೆ ಬೆಂಬಲ ನೀಡುತ್ತಿದ್ದಾರೆ ಎಂದು ಅವರು ಹೇಳಿದರು.
ಫ್ರಾನ್ಸ್, ಅಲ್ಬೇನಿಯಾ, ಬಾಂಗ್ಲಾದೇಶ ಮತ್ತು ನೇಪಾಳದಲ್ಲಿನ ಹಿಂಸಾಚಾರಾತ್ಮಕ ಪ್ರತಿಭಟನೆಗಳ ಬಗ್ಗೆ ಉಲ್ಲೇಖಿಸಿದ ಅವರು, ಆದರೆ, ಪ್ರತಿಭಟನೆಗಳು ಸಂವಿಧಾನ ಮತ್ತು ಕಾನೂನಿನ ಚೌಕಟ್ಟಿನೊಳಗೇ ನಡೆಯಬೇಕು ಎಂದು ಹೇಳಿದರು.
ಪಾಶ್ಚಿಮಾತ್ಯ ದೇಶಗಳಿಂದ ಬಿರುಗಾಳಿಯೊಂದು ವ್ಯವಸ್ಥೆ, ಸಂಸ್ಕೃತಿ ಮತ್ತು ಮಾನವೀಯ ಮೌಲ್ಯಗಳನ್ನು ವಿರೋಧಿಸುತ್ತಾ, ನಾಶಪಡಿಸಲು ಯತ್ನಿಸುತ್ತಿದೆ. ಅಭಿವೃದ್ಧಿ ಹೊಂದಿದ ರಾಷ್ಟ್ರಗಳು ಸಹ ಇದರಿಂದ ಬಾಧಿತರು. ಬಾಂಗ್ಲಾದೇಶ ಮತ್ತು ನೇಪಾಳ, ಫ್ರಾನ್ಸ್, ಅಲ್ವೇನಿಯಾದಲ್ಲಿ ಹಿಂಸಾಚಾರಾತ್ಮಕ ಪ್ರತಿಭಟನೆಗಳನ್ನು ಗಮನಿಸಿ, ನಮ್ಮ ದೇಶವು ಇನ್ನೂ ಅಭಿವೃದ್ಧಿಶೀಲ ಹಂತದಲ್ಲಿದೆ. ಹೀಗಾಗಿ ಸವಾಲುಗಳು ಸಾಮಾನ್ಯ ಎಂದು ಉಲ್ಲೇಖಿಸಿದರು
'ಆಡಳಿತ ಬದಲಾವಣೆಯಿಂದ ಪರಿಸ್ಥಿತಿ ಬದಲಾಗುತ್ತದೆ ಎಂದು ಅವರು ಹೇಳುತ್ತಾರೆ, ಆದರೆ ಹಿಂದೆಂದೂ ಹಾಗೆ ಆಗಿಲ್ಲ, ಈಗಲೂ ಆಗುತ್ತಿಲ್ಲ. ತಮ್ಮದೇ ಆದ ಸ್ವಾರ್ಥ ಹಿತಾಸಕ್ತಿಗಳನ್ನು ಮತ್ತು ಪ್ರಾಬಲ್ಯದಲ್ಲಿಟ್ಟುಕೊಳ್ಳಲು ವಿಶ್ವದಾದ್ಯಂತ ಇಂತಹ ಕಾರ್ಯಾಚರಣೆಗಳನ್ನು ನಡೆಸಲಾಗುತ್ತದೆ. ದೇಶದ ಬಲವಾದ ನೀತಿಗಳು ಮತ್ತು ದೃಢವಾದ ನಾಯಕತ್ವವು ಇಂತಹ ಶಕ್ತಿಗಳಿಗೆ ತಕ್ಕ ಉತ್ತರ ನೀಡುತ್ತಿದ್ದು, ಭಾರತವನ್ನು ಗುರಿಯಾಗಿಸಿ ವಿವಿಧ ಕೃತ್ಯಗಳನ್ನು ಎಸಗಲು ಸಂಚು ರೂಪಿಸಲಾಗುತ್ತಿದೆ ಎಂದು ಎಚ್ಚರಿಕೆ ಕೊಟ್ಟರು.
'ಪ್ರತಿಭಟನಾಕಾರರು, ರಾಜಕೀಯ ನಾಯಕರು ಯಾರೇ ಆದರೂ ಸರಿ, ಅವರ ಯಾವುದೇ ಕ್ರಮವು ನಮ್ಮ ಒಗ್ಗಟ್ಟಿನ ಸಮಾಜದಲ್ಲಿ ಸಂಘರ್ಷ, ದ್ವೇಷ ಅಥವಾ ವಿಭಜನೆಗೆ ಎಡೆಮಾಡಿಕೊಡಬಾರದು. ಪ್ರತಿಭಟನೆ ಎಷ್ಟೇ ತೀವ್ರತೆಯಿಂದ ಕೂಡಿದ್ದರೂ ಸಹ, ನಮ್ಮ ನಡೆ-ನುಡಿಗಳು ಸಂವಿಧಾನ, ಕಾನೂನು ಮಿತಿಯೊಳಗೇ ಇರಬೇಕು ಎಂದು ಸಲಹೆ ಕೊಟ್ಟರು
ನಮ್ಮ ದೇಶವು ವಿದೇಶಿ ಆಕ್ರಮಣಕಾರರ ದಾಳಿಗೆ ಸಿಲುಕಿ ನರಳುತ್ತಿದ್ದಾಗ, 'ಸ್ವಧರ್ಮ' ಪಾಲಕರ ಮೇಲೆ ಭಯೋತ್ಪಾದನೆ ನಡೆಸುತ್ತಿದ್ದಾಗ, ಸಂತ ರಾವಿದಾಸರು 'ಸ್ವಧರ್ಮ ನಿಷ್ಠೆ', ಸಾಮಾಜಿಕ ಸೌಹಾರ್ದತೆ ಮತ್ತು ಭಕ್ತಿಯ ಸಂದೇಶವನ್ನು ಸಾರಿದರು. ತಮ್ಮ ಸ್ವಂತ ಜೀವನದ ಮೂಲಕ ಅಂದಿನ ಸಮಾಜಕ್ಕೆ ಧೈರ್ಯ ತುಂಬಿ ಅವರ ನೈತಿಕತೆಯನ್ನು ಹೆಚ್ಚಿಸಿದರು..." ಎಂದು ಸ್ಮರಿಸಿದರು.
'ನಾವು ಭಾರತೀಯರೆಲ್ಲರೂ ಒಂದಾಗಿದ್ದೇವೆ ಮತ್ತು ನಮ್ಮ ಐಕ್ಯತೆಯು ಆಂತರಿಕವಾದದ್ದು, ಅದು ಯಾವುದೇ ಒಪ್ಪಂದವಲ್ಲ. ನಮಗೆ ಭಾರತದಿಂದ ಏನಾದರೂ ಸಿಕ್ಕರೆ ಮಾತ್ರ ಕೊಡುಗೆ ನೀಡುತ್ತೇವೆ ಎನ್ನುವ ಮನೋಭಾವನೆ ಬೇಡ. ಭಾರತ ನಮಗೆ ಏನಾದರೂ ನೀಡಲಿ ಅಥವಾ ನೀಡದಿರಲಿ, ನಮ್ಮ ಸರ್ವಸ್ವವೂ ಭಾರತಕ್ಕೆ ಸೇರಿದೆ ಎನ್ನುವ ಭಾವನೆ ನಮ್ಮಲ್ಲಿರಬೇಕು' ಎಂದರು, (ಏಜೆನ್ಸೀಸ್).