ಸಾಗರ: ಅಂಬಾರಗೋಡ್ಲು-ಕಳಸವಳ್ಳಿ ಸೇತುವೆ ಉದ್ಘಾಟನಾ ಕಾರ್ಯಕ್ರಮವನ್ನು ಶರಾವತಿ ಹಿನ್ನೀರಿನ ಜನ ಹಬ್ಬದ ರೀತಿ ನಡೆಸಲಿದ್ದಾರೆ. ಇಡೀ ಸೇತುವೆಯನ್ನು ತಳಿರು ತೋರಣಗಳಿಂದ ಸಿಂಗರಿಸಲಿದ್ದಾರೆ ಎಂದು ಸಿಗಂದೂರು ಚೌಡೇಶ್ವರಿ ದೇವಸ್ಥಾನದ ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ರವಿಕುಮಾರ್ ಹೇಳಿದರು.
ಸಾಗರ ತಾಲೂಕಿನ ಕುದುರೂರು ಗ್ರಾಪಂ ವ್ಯಾಪ್ತಿಯ ಹಾರಿಗೆಯಲ್ಲಿ ಗುರುವಾರ ಏರ್ಪಡಿಸಿದ್ದ ಸೇತುವೆ ಲೋಕಾರ್ಪಣೆ ಕುರಿತ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು.
ನಮ್ಮ ಎಷ್ಟೋ ದಶಕದ ಕನಸು ಈಗ ಸಾಕಾರಗೊಳ್ಳುತ್ತಿದೆ. ಇಂಥದ್ದೊಂದು ಅಪರೂಪದ ಕ್ಷಣಕ್ಕಾಗಿ ಹಲವು ದಶಕಗಳಿಂದ ನಾವು ಕಾಯುತ್ತಿದ್ದೇವೆ. ನಮ್ಮ ಭಾಗದ ಜನರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು. ಭಾಗವಹಿಸುವುದು ನಮ್ಮೆಲ್ಲರ ಕರ್ತವ್ಯ. ಬರುವ ದಿನಗಳಲ್ಲಿ. ನಮ್ಮ ಪ್ರದೇಶಕ್ಕೆ ಸಾಕಷ್ಟು ಅಭಿವೃದ್ಧಿ ಕೆಲಸಗಳಾಗಬೇಕಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರದ ಚುನಾಯಿತ ಪ್ರತಿನಿಧಿಗಳಲ್ಲಿ ಮನವಿ ಮಾಡಿ ಹಂತದ ಹಂತವಾಗಿ ಕ್ಷೇತ್ರದ ಅಭಿವೃದ್ಧಿಯತ್ತ ಎಲ್ಲರೂ ಗಮನ ಹರಿಸೋಣ. ಸೋಮವಾರ ಶಾಲೆಗೆ ವಿಶೇಷವಾಗಿ ರಜೆ ನೀಡುವಂತೆ ಶಿಕ್ಷಣ ಇಲಾಖೆಯನ್ನು ಕೋರೋಣ ಎಂದರು.
ಸೇತುವೆ ಹೋರಾಟ ಸಮಿತಿ ಸಂಚಾಲಕ ಪ್ರಸನ್ನ ಕೆರೆಕೈ ಮಾತನಾಡಿ, ಇದೊಂದು ಐತಿಹಾಸಿಕ ಸಮಯ. ನರೇಂದ್ರ ಮೋದಿ ನೇತೃತ್ವದ ಸರ್ಕಾರ ಸೇತುವೆ ನಿರ್ಮಿಸಿಕೊಟ್ಟು ನಮ್ಮನ್ನು ಸಂಕಷ್ಟದಿಂದ ಮುಕ್ತಗೊಳಿಸಿದೆ. ಸೇತುವೆಯ ಮೇಲೆ ಎಲ್ಲ ವಾಹನಗಳು ಅಂದು ಬೆಳಗ್ಗೆ ಸಾಗರಕ್ಕೆ ತೆರಳುವಂತೆ ವ್ಯವಸ್ಥೆ ಮಾಡಲಾಗುತ್ತಿದೆ. ಇಲ್ಲಿ ಪ್ರವಾಸಿಗರನ್ನೇ ನಂಬಿ ಬದುಕುತ್ತಿರುವ ಲಾಂಚಿನ ನೌಕರರು ಮತ್ತು ಟ್ಯಾಕ್ಸಿ ವಾಹನ ಚಾಲಕರಿಗೆ ಜೀವನ ನಿರ್ವಹಣೆಗೆ ವ್ಯವಸ್ಥೆ ಮಾಡಬೇಕಾಗಿದೆ. ಆ ನಿಟ್ಟಿನಲ್ಲಿ ಸರ್ಕಾರ ಮತ್ತು ಚುನಾಯಿತ ಪ್ರತಿನಿಧಿಗಳು ಚಿಂತನೆ ಮಾಡಬೇಕಿದೆ ಎಂದು ತಿಳಿಸಿದರು.
ನಾಗರಾಜ್, ಎಂ.ಎನ್.ವಿಜಯೇಂದ್ರ, ಎಚ್.ಎಂ.ದೇವರಾಜ್ ಜೈನ್, ಬಿ.ಜೆ.ಮಹಾವೀರ್ ಜೈನ್, ಗಣಪತಿ, ಮೋಹನ್‌ಕುಮಾರ್, ರವಿಕುಮಾರ್, ಮಂಜಯ್ಯ ಜೈನ್, ಸುಧೀಂದ್ರ ಇತರರಿದ್ದರು.