ಸಾಗರ: ಕನ್ನಡ ಭಾಷೆ, ನೆಲ, ಜಲದ ವಿಷಯ ಬಂದಾಗ ಎಲ್ಲರೂ ಒಟ್ಟಾಗಿ ನಿಲ್ಲಬೇಕು. ಕನ್ನಡ ನಾಡು, ನುಡಿ ಕಟ್ಟುವ ಕೆಲಸ ನಿರಂತರವಾಗಿ ಆಗಬೇಕು ಎಂದು ಶಾಸಕ ಗೋಪಾಲಕೃಷ್ಣ ಬೇಳೂರು ಹೇಳಿದರು.
ಕನ್ನಡ ರಾಜ್ಯೋತ್ಸವ ಅಂಗವಾಗಿ ಸಾಗರ ನಗರಸಭೆ ರಂಗಮಂದಿರದಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ, ನಗರಸಭೆಯಿಂದ ಆಯೋಜಿಸಿದ್ದ ಸಾಂಸ್ಕೃತಿಕ ವೈವಿಧ್ಯ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ವರ್ಷದ ಎಲ್ಲ ದಿನಗಳಲ್ಲಿ ಕನ್ನಡ ಭಾಷೆ ಉಳಿಸಿ ಬೆಳೆಸುವ ಕೆಲಸ ಆಗಬೇಕು. ಕರ್ನಾಟಕ ನಾಮಕರಣವಾಗಿ ಐದು ದಶಕ ಆಗಿರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ವಿಶೇಷ ಕಾರ್ಯಕ್ರಮ ಕೈಗೊಂಡಿದೆ ಎಂದು ತಿಳಿಸಿದರು.
ಕನ್ನಡ ಭಾಷೆಗೆ ಸಾವಿರಾರು ವರ್ಷಗಳ ಇತಿಹಾಸ ಇದ್ದು, ಕನ್ನಡತನ ಉಳಿಸುವ ಕೆಲಸ ಪ್ರತಿ ಮನೆಯಿಂದ ಆಗಬೇಕು. ರಾಜ್ಯದಲ್ಲಿ ಆಟೋ, ಟ್ಯಾಕ್ಸಿ ಚಾಲಕರು ಕನ್ನಡ ರಾಜ್ಯೋತ್ಸವವನ್ನು ವಿಶೇಷವಾಗಿ ಆಚರಿಸುತ್ತಾರೆ ಎಂದರು.
ಮನೆಗಳಲ್ಲಿ ಇಂಗ್ಲಿಷ್ ಮಾತನಾಡುವ ಅಭ್ಯಾಸ ಹೆಚ್ಚುತ್ತಿದೆ. ಇದು ಮುಂದಿನ ಪೀಳಿಗೆಗೆ ಕನ್ನಡ ಬೆಳೆಸಲು ಸಂಕಷ್ಟ ತಂದೊಡ್ಡುವ ಸಾಧ್ಯತೆ ಇದೆ. ನಾವೆಲ್ಲರೂ ಕನ್ನಡ ಉಳಿಸಿ ಬೆಳೆಸಲು ವಿಶೇಷ ಆಸಕ್ತಿ ವಹಿಸಬೇಕು. ಆರ್.ಯತೀಶ್ ಸಾಗರ ಎಸಿ
ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸಿರಿವಂತೆ ಚಂದ್ರಶೇಖರ್, ಸುವರ್ಣ ಸಂಭ್ರಮ ಕರ್ನಾಟಕ ಪ್ರಶಸ್ತಿ ಪುರಸ್ಕೃತೆ ನೊಮಿಟೋ ಕಾಮದಾರ್, ಜಾನಪದ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಟೀಕಪ್ಪ ಅವರನ್ನು ಸನ್ಮಾನಿಸಲಾಯಿತು. ವೃತ್ತಾಲಂಕಾರ ಮತ್ತು ಸ್ತಬ್ಧ ಚಿತ್ರದಲ್ಲಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು.
ಬಿಇಒ ಇ.ಪರಶುರಾಮಪ್ಪ, ನಗರಸಭೆ ಪರಿಸರ ವಿಭಾಗದ ಮದನ್, ಪೌರಾಯುಕ್ತ ಎಚ್.ಕೆ.ನಾಗಪ್ಪ, ಕಸಾಪ ತಾಲೂಕು ಅಧ್ಯಕ್ಷ ವಿ.ಟಿ.ಸ್ವಾಮಿ, ಡಾ. ಅನ್ನಪೂರ್ಣಾ, ಲೋಕೇಶ್‌ಕುಮಾರ್, ಸುಬ್ರಹ್ಮಣ್ಯ ಭಟ್ ಇತರರಿದ್ದರು.