ನ್ಯೂಸ್

ಎಲ್ಲರೂ ಸಮಾನರು

ಸುದೀಪ್​ ವಿ.ಎನ್​

ಪರಮಾತ್ಮನ ಸೃಷ್ಟಿಯಲ್ಲಿ ಎಲ್ಲರೂ ಸಮಾನರು. ಸಂಸ್ಕಾರ ಬಲದಿಂದ ಸಂಸ್ಕೃತಿಯ ಪರಿಪಾಲನೆಯಿಂದ ಜೀವನದಲ್ಲಿ ಉನ್ನತಿ ಹೊಂದಲು ಸಾಧ್ಯ. ಪ್ರತಿಯೊಂದರ ಬೆಲೆ ತಿಳಿಯುವುದು ಎರಡು ಬಾರಿ ಮಾತ್ರ. ಅದನ್ನು ಪಡೆಯುವ ಮೊದಲು ಹಾಗೂ ಅದನ್ನು ಕಳೆದುಕೊಂಡಾಗ. ದೀಪ ರಾಜನ ಅರಮನೆಯಲ್ಲಿ ಎಷ್ಟು ಬೆಳಕು ನೀಡುವುದೋ ಬಡವನ ಗುಡಿಸಲಲ್ಲೂ ಅಷ್ಟೇ ಬೆಳಕು ನೀಡುತ್ತದೆ. ಜ್ಞಾನವೆಂಬುದು ಡಬ್ಬಿಯಲ್ಲಿರುವ ಬಣ್ಣದಂತೆ. ಬಣ್ಣವನ್ನು ಗೋಡೆಗೆ ಹಚ್ಚಿದ ಮೇಲಷ್ಟೇ ಅದರ ಅಂದ ತಿಳಿಯುತ್ತದೆ.

ಹಾಗೆಯೇ ಜ್ಞಾನವನ್ನು ಹಂಚಿದಾಗಲೇ ಅದು ವೃದ್ಧಿಯಾಗುತ್ತದೆ. ಬೇರೆಯವರಿಗೆ ಗಂಧ ಹಚ್ಚಲು ಪ್ರಯತ್ನಿಸಿದರೆ ಮೊದಲು ನಮ್ಮ ಕೈ ಗಂಧವಾಗುತ್ತದೆ. ಬೇರೆಯವರಿಗೆ ಕೆಸರು ಹಚ್ಚಲು ಪ್ರಯತ್ನಿಸಿದರೆ ಮೊದಲು ನಮ್ಮ ಕೈ ಕೆಸರಾಗುತ್ತದೆ. ಯಾವುದನ್ನು ಹಚ್ಚಬೇಕೆಂದು ನಿರ್ಧಾರ ಕೈಗೊಳ್ಳುವುದು ಅವರವರಿಗೆ ಬಿಟ್ಟಿದ್ದು. ಒಂದು ಕಲ್ಲು ಒಮ್ಮೆ ಮಂದಿರಕ್ಕೆ ಹೋಗುತ್ತದೆ. ನಂತರ ಸಂಸ್ಕಾರ ಪಡೆದು ದೇವರಾಗಿ ಬಿಡುತ್ತದೆ. ಆದರೆ ಮಾನವರು ನಿತ್ಯ ಮಂದಿರಕ್ಕೆ ಹೋದರೂ ಸಂಸ್ಕಾರ ಇಲ್ಲದೇ ಕಲ್ಲಾಗಿಯೇ ಇರುತ್ತಾರೆ. ಒಳ್ಳೆಯತನಕ್ಕೆ ಬೆಲೆ ಇಲ್ಲ ಅನ್ನುವುದು ಎಷ್ಟು ಸತ್ಯವೋ ಆ ಒಳ್ಳೆಯತನ ನಮ್ಮನ್ನು ಕೈ ಬಿಡಲ್ಲ ಅನ್ನುವುದೂ ಅಷ್ಟೇ ಸತ್ಯ. ಲೋಕವನ್ನು ಮೆಚ್ಚಿಸಲು ಲೋಕ ರಕ್ಷಕನಿಂದಲೂ ಸಾಧ್ಯವಿಲ್ಲ. ಆದ್ದರಿಂದ ನಿಯೋಜಿತ ಕೆಲಸವನ್ನು ಆತ್ಮಸಾಕ್ಷಿಗೆ ಅನುಗುಣವಾಗಿ ನಿರ್ವಹಿಸಿಕೊಂಡು ಹೋಗುವುದರೆಡೆಗೆ ಗಮನಹರಿಸಬೇಕು.

ಮುಖದ ಸೌಂದರ್ಯ ಜನರ ಗಮನ ಸೆಳೆಯಬಹುದು. ಆದರೆ ಮನದ ಸೌಂದರ್ಯ ಜಗತ್ತನ್ನೇ ಗೆಲ್ಲುತ್ತದೆ. ಗಾಳಿಯನ್ನು ಗುದ್ದಿದರೆ ಮೈ ನೋವಾಗುವುದೇ ಹೊರತೂ ಇನ್ನೇನೂ ಉಪಯೋಗವಿಲ್ಲ. ಮೂಲ ಸತ್ವವನ್ನು ಮರೆತ ಸಾಹಸಗಳು ಕೂಡಾ ವ್ಯರ್ಥವಾಗುತ್ತವೆ. ಆನೆ ಅನ್ನ ಆಹಾರದ ರಾಶಿ ಸವಿಯುವಾಗ ಒಂದಗಳು ಅನ್ನ ಕೆಳಗೆ ಬಿದ್ದು ಹೋದರೆ ಅದನ್ನು ಯೋಚಿಸದು. ಅದೇ ಒಂದು ಅಗಳು ಪುಟ್ಟ ಇರುವೆಗೆ ಸಿಕ್ಕರೆ ಬದುಕಿಕೊಳ್ಳುತ್ತದೆ. ಅಲ್ಪ ಧನವು ಶ್ರೀಮಂತರಿಗೆ ನಗಣ್ಯವಾಗಿದ್ದರೂ ಬಡವರಿಗೆ ಆಧಾರವಾಗಿರುತ್ತದೆ.