ಈ ಜಗತ್ತಿನ ಹೆಚ್ಚಿನವರೆಲ್ಲ ಮಾನಸಿಕ ತುಮುಲದಲ್ಲಿ ಸಿಲುಕಿ ಸಮಾಧಾನ, ಮನಃಶಾಂತಿಗಳನ್ನು ಕಳೆದುಕೊಂಡು ಅಲೆಯುತ್ತಿರುವುದನ್ನು ಕಾಣುತ್ತೇವೆ. ಆದರೆ ಪರಮಹಂಸರು ತಮ್ಮ ಬಳಿ ಬರುತ್ತಿದ್ದ ಭಕ್ತರಿಗೆಲ್ಲ ಈ ತೆರನಾದ ಬೋಧನೆ ನೀಡುತ್ತ ಸಾಧನೆಯ ಮಾರ್ಗದಲ್ಲಿ ಮುಂದುವರಿಯುವಂತೆ ಮಾರ್ಗದರ್ಶನ ನೀಡುತ್ತಿರುತ್ತಾರೆ. ಅನೇಕ ಬಾರಿ ಭಕ್ತರು ತಮ್ಮ ಅಳಲನ್ನು ನೇರವಾಗಿ ಪರಮಹಂಸರ ಬಳಿ ನಿವೇದಿಸುತ್ತಿದ್ದರು. ಸಮಸ್ತ ಸಾಧಕರಿಗೂ ಪರಮಹಂಸರು ತಾಳ್ಮೆಯಿಂದ ಸಂತೈಸುತ್ತ ಉತ್ತರಿಸುತ್ತಿದ್ದರು. ಪರಮಹಂಸರ ಬಳಿ ಬರುತ್ತಿದ್ದ ಸಾಧಾರಣ, ಶುದ್ಧ ಮನಸ್ಕರು ಕೇವಲ ಭಗವಂತನ ಸಾಕ್ಷಾತ್ಕಾರವೇ ತಮ್ಮ ಗುರಿ ಎಂದರಿತು ಸಾಧನಾಪಥದಲ್ಲಿ ಸಾಗುತ್ತಿದ್ದರು.
ಶ್ರೀರಾಮಕೃಷ್ಣ ಪರಮಹಂಸರು ಕೇವಲ ಒಣಪಾಂಡಿತ್ಯವನ್ನು ಸಹಿಸುತ್ತಿರಲಿಲ್ಲ. ಅವರ ಮಾತಿನಲ್ಲಿಯೇ ತಿಳಿಸುವುದಾದರೆ; ಕೇವಲ ಪಾಂಡಿತ್ಯ ಯಾವುದಕ್ಕೂ ಬಾರದು. ಒಬ್ಬ ಸಾಧುವಿನ ಹತ್ತಿರ ಒಂದು ಪುಸ್ತಕವಿತ್ತು. ಅದರಲ್ಲಿ ಏನು ಬರೆದಿದೆ ಎಂದು ಕೇಳಲಾಗಿ ಆತ ಅದನ್ನು ಪೂರ್ಣ ತೆರೆದು ತೋರಿಸಿದ. ಪ್ರತಿಯೊಂದು ಹಾಳೆಯಲ್ಲಿಯೂ ‘ಓಂ ರಾಮಃ ಓಂ ರಾಮಃ’ ಎಂದು ಬರೆದಿತ್ತು. ಈ ನಾಮವನ್ನು ಶ್ರದ್ಧೆಯಿಂದ ಜಪಿಸಿ, ಸ್ಮರಿಸಿ, ಚಿಂತಿಸಿ, ಚಿಂತನ-ಮಂಥನ ನಿರಂತರವಾಗಿ ನಡೆಸಿದ್ದೇ ಆದಲ್ಲಿ ಫಲ ಕಟ್ಟಿಟ್ಟ ಬುತ್ತಿ. ಕೇವಲ ಪಾಂಡಿತ್ಯ, ವಿದ್ವತ್ ವಿಚಾರ ಮಾಡುತ್ತಿದ್ದರೆ ಗುರಿಯಿಲ್ಲದೆ ಗೊಂಡಾರಣ್ಯದಲ್ಲಿ ವೃಥಾ ಸುತ್ತಿದಂತಾಗುತ್ತದೆ. ಬದಲಾಗಿ ಒಂದು ಅಂಶವನ್ನು ಪರಿಪೂರ್ಣವಾಗಿ ಅರಿತು ಅದನ್ನೇ ಶ್ರದ್ಧೆಯಿಂದ, ಭಕ್ತಿಯಿಂದ, ಏಕಾಗ್ರತೆಯಿಂದ ತದೇಕ ಮನಸ್ಸಿನಿಂದ ಧ್ಯಾನಿಸಿದ್ದೇ ಆದರೆ ಪ್ರತಿಫಲ ದೊರೆತೇ ದೊರೆಯುತ್ತದೆ. ಒಬ್ಬ ಸಾಮಾನ್ಯ ವ್ಯಕ್ತಿ, ರಾಮ ಎನ್ನಲೂ ತೀವ್ರ ಕಷ್ಟಪಡುತ್ತಿದ್ದಾಗ ನಾರದರು ಹೋಗಲಿ - ಅಲ್ಲಿರುವ ಮರವನ್ನು ತೋರಿಸಿ ಅದೇನು ಎಂದಾಗ ಮರಾ ಎಂದು ತೊದಲಿದ. ಈ ವ್ಯಕ್ತಿ ಇಡೀ ವಿಶ್ವದಲ್ಲಿಯೇ ಅಪ್ರತಿಮ ದಾರ್ಶನಿಕನಾಗಿ, ಕವಿಯಾಗಿ, ಇಪ್ಪತ್ತನಾಲ್ಕು ಸಾವಿರ ಶ್ಲೋಕಗಳ ರಾಮಾಯಣ ಮಹಾಕಾವ್ಯವನ್ನು ರಚಿಸಿದ. ಈ ಶಕ್ತಿ ಎಲ್ಲಿಂದ ಬಂದಿತು? ಕೇವಲ ರಾಮ ಎಂಬ ಎರಡಕ್ಷರದ ಮೇಲೆ ಅವನು ಇಟ್ಟಿದ್ದ ಶ್ರದ್ಧೆ, ಭಕ್ತಿ, ಪೂರ್ಣ ನಂಬಿಕೆ.
ಪರಮಹಂಸರಿಗೆ ಕೇವಲ ಒಣಪಾಂಡಿತ್ಯ ಹಾಗೂ ವಿದ್ವತ್ ತೋರ್ಪಡಿಕೆ ಕಿಂಚಿತ್ತೂ ಇಷ್ಟವಾಗುತ್ತಿರಲಿಲ್ಲ. ಆದರೆ ಅವರು ಎಂತಹ ಪಂಡಿತೋತ್ತಮನಿಗೂ ಅಚ್ಚರಿಯಾಗುವಂತಹ ವಿಚಾರ ತಿಳಿಸುತ್ತಾರೆ. ‘ಗೀತೆಯ ಸಂಚಿತಾರ್ಥವೇನು? ಹತ್ತು ಸಲ ‘‘ಗೀತೆ, ಗೀತೆ’’ ಎಂದು ಉಚ್ಚರಿಸಿದರೆ ಅದು ಏನಾಗಿ ಕೇಳಿಬರುತ್ತದೋ ಅದೇ ಗೀತೆಯ ಸಾರ. ಅಂದರೆ ಅದು ‘‘ತ್ಯಾಗಿ, ತ್ಯಾಗಿ’’ ಎಂಬುದಾಗಿ ಕೇಳಿಬರುತ್ತದೆ. ಎಂದರೆ ಗೀತೆಯ ಉಪದೇಶ: ‘ಹೇ ಜೀವ, ಎಲ್ಲವನ್ನೂ ತ್ಯಾಗ ಮಾಡಿ ಭಗವಂತನ ಸಾಕ್ಷಾತ್ಕಾರಕ್ಕೆ ಪ್ರಯತ್ನಿಸು’ ಎಂಬರ್ಥ. ಸಾಧುವೇ ಆಗಲಿ, ಸಂಸಾರಿಯೇ ಆಗಲಿ, ಎಲ್ಲರೂ ಆಸಕ್ತಿಗಳನ್ನು ಮನಸ್ಸಿನಿಂದ ತೊಡೆದುಹಾಕಬೇಕು.’
ಬೇರೊಂದು ದಿನ ಪರಮಹಂಸರು ಹೇಳಿದ್ದರು; ‘ಭಗವಂತನಲ್ಲಿ ಶುದ್ಧಭಕ್ತಿ ಗಳಿಸಿಕೊಳ್ಳದೆ ಇದ್ದರೆ, ಮುಕ್ತಿ ದೊರಕುವ ಹಾಗೆಯೇ ಇಲ್ಲ. ಭಗವಂತನ ಸಾಕ್ಷಾತ್ಕಾರ ಪಡೆದು ಸಂಸಾರದಲ್ಲಿದ್ದರೆ ಹೆದರಬೇಕಾಗಿಲ್ಲ. ಆಗಾಗ ನಿರ್ಜನ ಪ್ರದೇಶದಲ್ಲಿದ್ದು ಸಾಧನೆ ಮಾಡಿ ಶುದ್ಧಭಕ್ತಿ ಗಳಿಸಿಕೊಂಡದ್ದೇ ಆದರೆ, ಸಂಸಾರದಲ್ಲಿದ್ದರೂ ಹೆದರಿಕೊಳ್ಳಬೇಕಾಗಿಲ್ಲ. ಚೈತನ್ಯದೇವನಿಗೆ ಸಂಸಾರಸ್ಥ ಭಕ್ತರೂ ಇದ್ದರು. ಅವರು ಸಂಸಾರದಲ್ಲಿ ಹೆಸರಿಗೆ ಮಾತ್ರ ಇರುತ್ತಿದ್ದರು, ಅನಾಸಕ್ತರಾಗಿ ಇರುತ್ತಿದ್ದರು.’
ಪ್ರಾಪಂಚಿಕತೆಯ ಬೇಗೆಯಲ್ಲಿ ನೊಂದು ಬಸವಳಿದ ಜನರಿಗೆ ಭಗವಾನ್ ಶ್ರೀರಾಮಕೃಷ್ಣ ಪರಮಹಂಸರು ಈ ರೀತಿ ಭರವಸೆಯ ಮೂಲಕ ಶಕ್ತಿ ತುಂಬುತ್ತಿದ್ದರು. ಜಗತ್ತಿನಲ್ಲಿ ಯಾರು ಬೇಕಾದರೂ ಭಗವದ್ದರ್ಶನ ಪಡೆಯಬಹುದು ಹಾಗೂ ಜೀವನವನ್ನು ಪಾವನ ಮಾಡಿಕೊಳ್ಳಬಹುದು ಎಂಬುದನ್ನು ಸಾರಿ ಸಾರಿ ಹೇಳುತ್ತಿದ್ದರು.