ಒಂದು ಚಿತ್ರದ ಬಳಿಕ ಹೊಸ ಹೊಸ ಶೀರ್ಷಿಕೆ ಹುಡುಕಿ, ಕಂಟೆಂಟ್ ಬಗ್ಗೆ ಪ್ರಚಾರ ಮಾಡಿ, ಜನರನ್ನು ಸೆಳೆಯುವುದು ಕಷ್ಟದ ಕೆಲಸ. ಇನ್ನು ಪ್ರತಿ ಬಾರಿ ಹೊಸ ಕಥೆ, ಶೀರ್ಷಿಕೆ, ತಾರಾಗಣ, ತಂತ್ರಜ್ಞರನ್ನು ಸೇರಿಸಿ ಸಿನಿಮಾ ಮಾಡುವುದು ಸವಾಲೇ ಸರಿ. ಆದರೆ, ಒಂದು ಸಿನಿಮಾ ಹಿಟ್ ಆದ ಬಳಿಕ, ಅದೇ ಟೈಟಲ್ನಲ್ಲಿ ಇನ್ನೊಂದು ಸಿನಿಮಾ ಮಾಡಿದರೆ, ಚಿತ್ರತಂಡಕ್ಕೆ ಸ್ವಲ್ಪ ಒತ್ತಡ ಕಡಿಮೆಯಾಗುತ್ತದೆ. ಹೀಗಾಗಿಯೇ ಇತ್ತೀಚಿನ ವರ್ಷಗಳಲ್ಲಿ ಸೀಕ್ವೆಲ್ಗಳು ಹೆಚ್ಚಾಗಿವೆ. ಕೆಲವರು ಮೊದಲೇ ಕಥೆಯನ್ನು ಎರಡು, ಮೂರು ಭಾಗಗಳಲ್ಲಿ ಪ್ಲಾ$್ಯನ್ ಮಾಡಿಕೊಂಡಿದ್ದರೆ, ಕೆಲವರು ಎರಡು, ಮೂರು ಕಥೆಗಳನ್ನು ಒಂದೆಡೆ ಸೇರಿಸಿ ಯೂನಿವರ್ಸ್ ಸೃಷ್ಟಿಸುವ ಸಾಹಸದಲ್ಲಿದ್ದಾರೆ. ಇನ್ನು ಕೆಲವರು ಹಳೆಯ ಶೀರ್ಷಿಕೆಗೇ 1, 2, 3 ಎಂದು ಭಾಗಗಳನ್ನು ಸೇರಿಸುತ್ತಾ, ಹೊಸ ಹೊಸ ಕಥೆಗಳನ್ನು ಹೇಳುತ್ತಾ ಸಾಗಿದ್ದಾರೆ. ಅಂದಹಾಗೆ, ಈ ಪ್ಲ್ಯಾನ್ ಬಾಲಿವುಡ್ನಲ್ಲಿ ದೊಡ್ಡ ಮಟ್ಟದಲ್ಲಿ ವರ್ಕೌಟ್ ಆಗುತ್ತಿದೆ.
ಮುಂದುವರಿದ ಕಥೆಗಳು...
ಈ ವರ್ಷ ಇದುವರೆಗೆ 70 ಹಿಂದಿ ಸಿನಿಮಾಗಳು ತೆರೆಗೆ ಬಂದಿವೆ. ಅವುಗಳಲ್ಲಿ "ಧುರಂಧರ್ 2 & ದ ರಿವೆಂಜ್' ಬಾಕ್ಸಾಫಿಸಿನಲ್ಲಿ ಹೊಸ ದಾಖಲೆ ನಿರ್ಮಿಸಿದ್ದು, "ಬಾರ್ಡರ್ 2', "ಮರ್ದಾನಿ 3', "ಪತಿ ಪತ್ನಿ ಔರ್ ವೋಹ್ ದೋ', "ದ ಕೇರಳ ಸ್ಟೋರಿ 2' 2026ರ ಟಾಪ್ 10 ಚಿತ್ರಗಳಲ್ಲಿ ಸ್ಥಾನ ಪಡೆದಿವೆ. ಅರ್ಥಾತ್ ಇದುವರೆಗೆ ಅತಿ ಹೆಚ್ಚು ಗಳಿಕೆ ಮಾಡಿಕೊಂಡ ಶೇಕಡ 50ರಷ್ಟು ಸಿನಿಮಾಗಳು ಸೀಕ್ವೆಲ್ಗಳು ಎಂಬುದು ವಿಶೇಷ. ಅಲ್ಲದೇ "ವಧ್ 2', "ಗಿನ್ನಿ ವೆಡ್ಸ್ ಸನ್ನಿ 2', "ಹಾಂಟೆಡ್ 3ಡಿ - ಎಕೋಸ್ ಆಫ್ ದ ಪಾಸ್ಟ್' ಕೂಡ ಈಗಾಗಲೇ ಬಿಡುಗಡೆಯಾಗಿರುವ ಇತರೆ ಸೀಕ್ವೆಲ್ಗಳು. ಇನ್ನು ನಾಳೆ ಶಾಹಿದ್ ಕಪೂರ್, ರಶ್ಮಿಕಾ ಮಂದಣ್ಣ ಮತ್ತು ಕೃತಿ ಸನನ್ ನಟಿಸಿರುವ "ಕಾಕ್ಟೇಲ್ 2' ತೆರೆಗೆ ಬರಲಿದ್ದು, "ವೆಲ್ಕಮ್ ಟು ದ ಜಂಗಲ್', "ಧಮಾಲ್ 4', "ಆವಾರಾಪನ್ 2', "ಖೋಸ್ಲಾ ಕಾ ಘೋಸ್ಲಾ 2', "ದೃಶ್ಯಂ 3', "ಲಕಡ್ಬಗ್ಗಾ 2 & ದ ಮಂಕಿ ಬಿಜಿನೆಸ್' ಕೂಡ ಇನ್ನು ಆರು ತಿಂಗಳಲ್ಲಿ ತೆರೆಗೆ ಬರಲಿವೆ. ಅಲ್ಲಿಗೆ ಈ ವರ್ಷ ಬರೋಬ್ಬರಿ 18 ಸೀಕ್ವೆಲ್ಗಳು ರಿಲೀಸ್ ಆಗಲಿವೆ ಎನ್ನಲಾಗಿದೆ.
ಇತ್ತೀಚೆಗೆ, ಗಣನೀಯ ಏರಿಕೆ!
ಇತ್ತೀಚಿನ ವರ್ಷಗಳಲ್ಲಿ ಸೀಕ್ವೆಲ್ಗಳ ಸಂಖ್ಯೆ ವರ್ಷದಿಂದ ವರ್ಷಕ್ಕೆ ಗಣನೀಯವಾಗಿ ಏರಿಕೆ ಕಂಡಿದೆ. 2023ರ ಟಾಪ್ 10 ಚಿತ್ರಗಳಲ್ಲಿ "ಗದರ್ 2', "ಟೈಗರ್ 3', "ಓ ಮೈ ಗಾಡ್ 2' ಸ್ಥಾನ ಗಳಿಸಿದ್ದವು. 2024ರಲ್ಲಿ ಅತಿಹೆಚ್ಚು ಗಳಿಕೆ ಮಾಡಿಕೊಂಡ ಟಾಪ್ ಮೂರು ಸಿನಿಮಾಗಳು "ಸ್ತ್ರೀ 2', "ಭೂಲ್ ಭುಲಯ್ಯಾ 3' ಹಾಗೂ "ಸಿಂಂ ಅಗೇನ್' ಸೀಕ್ವೆಲ್ಗಳಾಗಿದ್ದವು. ಹಾಗೇ ಆ ವರ್ಷ ರಿಲೀಸ್ ಆದ ಎಂಟು ಸೀಕ್ವೆಲ್ಗಳ ಪೈಕಿ ನಾಲ್ಕು ಟಾಪ್ ಹತ್ತು ಗಳಿಕೆ ಮಾಡಿಕೊಂಡ ಚಿತ್ರಗಳ ಸಾಲಿನಲ್ಲಿದ್ದವು. ಹೀಗಾಗಿ 2025ರಲ್ಲಿ ಮತ್ತಷ್ಟು ಸೀಕ್ವೆಲ್ಗಳು ತೆರೆಗೆ ಬಂದವು. "ವಾರ್ 2', "ರೇಡ್ 2' ಮತ್ತು "ಹೌಸ್ುಲ್ 5' ಹೀಗೆ ಮೂರು ಸೀಕ್ವೆಲ್ಗಳು 2025ರ ಟಾಪ್ 10 ಸಿನಿಮಾಗಳಲ್ಲಿ ಸ್ಥಾನ ಪಡೆದಿದ್ದವು. ಹಾಗೇ ಕಳೆದ ವರ್ಷ ರಿಲೀಸ್ ಆದ 135 ಚಿತ್ರಗಳ ಪೈಕಿ "ಛೋರಿ 2', "ಕೇಸರಿ 2', "ರೋಮಿಯೋ 3', "ಮೆಟ್ರೋ ಇನ್ ದಿನೋ', "ಧಡಕ್ 2', "ಸನ್ ಆ್ ಸರ್ದಾರ್ 2', "ಅಂದಾಜ್ 2', "ಬಾಘೀ 4', "ಜಾಲಿ ಎಲ್ಎಲ್ಬಿ 3', "ದೇ ದೇ ಪ್ಯಾರ್ ದೇ 2', "ನಿಶಾಂಚಿ 2', "ಮಸ್ತೀ 4', "ಕಿಸ್ ಕಿಸ್ ಕೋ ಪ್ಯಾರ್ ಕರೂ 2'... ಹೀಗೆ 16 ಸೀಕ್ವೆಲ್ಗಳಾಗಿದ್ದವು. ಅರ್ಥಾತ್ ಶೇಕಡಾ 12ರಷ್ಟು ಸಿನಿಮಾಗಳು ಮುಂದುವರಿದ ಭಾಗವಾಗಿದ್ದವು.
ಕನ್ನಡದ ಸೀಕ್ವೆಲ್ಗಳು
ಕನ್ನಡದಲ್ಲೂ "ಕೆಜಿಎ್', "ಕಾಂತಾರ' ಸರಣಿಗಳು ದಾಖಲೆ ಗಳಿಕೆ ಮಾಡಿಕೊಂಡಿವೆ. ಆ ಚಿತ್ರಗಳಿಗೆ ಹೋಲಿಸಿದರೆ ಕಡಿಮೆ ಬಜೆಟ್ನಲ್ಲಿ ಮೂಡಿಬಂದಿದ್ದರೂ "ಲವ್ ಮಾಕ್ಟೇಲ್' ಸರಣಿಯ ಮೂರು ಚಿತ್ರಗಳು ಬಾಕ್ಸಾಫಿಸಿನಲ್ಲಿ ಗೆದ್ದು ಬೀಗಿವೆ. ಈ ವರ್ಷ "ಲವ್ ಮಾಕ್ಟೇಲ್ 3', "ಸೆಕೆಂಡ್ ಕೇಸ್ ಆಫ್ ಸೀತಾರಾಮ್' ಗೆಲುವಿನ ನಗೆ ಬೀರಿದ್ದು, ಜತೆಗೆ "ಮೆಜೆಸ್ಟಿಕ್ 2', "ಶ್ರೀ ಜಗನ್ನಾಥ ದಾಸರು 2' ಕೂಡ ರಿಲೀಸ್ ಆಗಿವೆ.
ಒಂದು ಕಥೆ, ಒಂದು ಸಿನಿಮಾ ಮಾಡುವುದು ಈಜಿ. ಆದರೆ, ಅದರ ಮುಂದುವರಿದ ಕಥೆ ಮಾಡುವುದು ತುಂಬ ಕಷ್ಟ. ಏಕೆಂದರೆ, ಪ್ರಚಾರದ ವಿಷಯದಲ್ಲಿ ಸೀಕ್ವೆಲ್ ಪ್ಲಸ್ ಆದರೂ, ಮೇಕಿಂಗ್ ವಿಷಯದಲ್ಲಿ ಸವಾಲಾಗಲಿದೆ. "ಲವ್ ಮಾಕ್ಟೇಲ್' ಮೊದಲ ಕಥೆ ಮಾಡಲು ಕೇವಲ 19 ದಿನ ತೆಗೆದುಕೊಂಡಿದ್ದೆ, "ಲವ್ ಮಾಕ್ಟೇಲ್ 2'ಗೆ ಆರು ತಿಂಗಳು ಬೇಕಾಯಿತು. ಇನ್ನು ಮೂರನೇ ಭಾಗಕ್ಕೆ ಬರೋಬ್ಬರಿ ಮೂರೂವರೆ ವರ್ಷ ಬೇಕಾದವು. ಸಿನಿಮಾದಿಂದ ಸಿನಿಮಾಗೆ ಆ ಕಥೆ, ಪಾತ್ರದ ಕುರಿತು ಹೇಳಬಹುದಾದ ಇಂಟರೆಸ್ಟಿಂಗ್ ವಿಷಯಗಳು ಕಡಿಮೆಯಾಗುತ್ತವೆ. - ಡಾರ್ಲಿಂಗ್ ಕೃಷ್ಣ, ನಟ, ನಿರ್ದೇಶಕ