ನ್ಯೂಸ್

ಕರೊನಾ ವಿರುದ್ಧದ ಸಮರದಲ್ಲಿ ಭಾರತದ ಪ್ರತಿ ಪ್ರಜೆಯೂ ಸೈನಿಕನೇ; ಮನ್​ ಕೀ ಬಾತ್​ನಲ್ಲಿ ಭವಿಷ್ಯದ ಬಗ್ಗೆ ಪ್ರಧಾನಿ ಭರವಸೆ

ವಿಶ್ವದ ಬೇರೆ ರಾಷ್ಟ್ರಗಳ ಸ್ಥಿತಿ ಮತ್ತು ಅಲ್ಲಿನ ಬೆಳವಣಿಗೆಗಳನ್ನು ಗಮನಿಸಿದರೆ ಭಾರತ ಕರೊನಾ ಸೋಂಕು ಪ್ರಸರಣದ ವೇಗವನ್ನು ತಗ್ಗಿಸುವಲ್ಲಿ ಸಫಲವಾಗಿದೆ. ಹಾಗೆಂದ ಮಾತ್ರಕ್ಕೆ ಸಮಾಧಾನ ಪಟ್ಟುಕೊಳ್ಳುವಂತಿಲ್ಲ. ‘ಅಪಾಯ ಪ್ರದೇಶ’ಗಳ ಸಂಖ್ಯೆ ಹೆಚ್ಚುತ್ತಿರುವುದು ಎಚ್ಚರಿಕೆಯ ಗಂಟೆಯೇ. ಆದರೆ, ಭಾರತ ಲಾಕ್​ಡೌನ್ ಘೋಷಣೆ ಮಾಡದೆ ಹೋಗಿದ್ದಲ್ಲಿ ಪರಿಸ್ಥಿತಿ ಭಾರಿ ಭಯಾನಕವಾಗಿ ಇರುತ್ತಿತ್ತು ಎಂಬುದನ್ನು ಆರೋಗ್ಯ ಸಚಿವಾಲಯವೇ ಸ್ಪಷ್ಟಪಡಿಸಿದೆ. ಅಂದರೆ, ಸೋಂಕು ನಿಯಂತ್ರಣದ ನಿಟ್ಟಿನಲ್ಲಿ ಸರ್ಕಾರ ಸಾರಿದ ಲಾಕ್​ಡೌನ್ ಎಂಬ ಹೋರಾಟ ಯಶಸ್ವಿಯಾಗಿದೆ. ಆದರೆ, 130 ಕೋಟಿ ಜನಸಂಖ್ಯೆಯ ಬೃಹತ್ ರಾಷ್ಟ್ರವಾದ ಭಾರತದಲ್ಲಿ ದಿಗ್ಬಂಧನವನ್ನು ಹೆಚ್ಚು ಕಾಲ ಮುಂದುವರಿಸಲು ಸಾಧ್ಯವಿಲ್ಲ ಎಂಬುದು ಗೊತ್ತಿರುವ ಸಂಗತಿಯೇ. ಹಾಗಾದರೆ, ಮುಂದೇನು ಎಂಬ ಪ್ರಶ್ನೆಗೆ ಭಾನುವಾರ ಪ್ರಧಾನ ಮಂತ್ರಿ ನರೇಂದ್ರ ಮೋದಿ ‘ಮನ್ ಕೀ ಬಾತ್’ ಕಾರ್ಯಕ್ರಮದಲ್ಲಿ ಸಮರ್ಪಕವಾದ ಉತ್ತರ ನೀಡಿದ್ದಾರೆ. ಇದನ್ನು ದೇಶ ಗಂಭೀರವಾಗಿ ಪರಿಗಣಿಸಿ, ಅಳವಡಿಸಿಕೊಳ್ಳಬೇಕಿದೆ.

ಪ್ರಸಕ್ತ ಕರೊನಾ ವಿರುದ್ಧದ ಹೋರಾಟ ಜನರಿಂದಲೇ ನಡೆಯುತ್ತಿದ್ದು, ಮುಂದೆಯೂ ಜನರೇ ಇದನ್ನು ನಿರ್ವಹಿಸಬೇಕಾದ ಅವಶ್ಯಕತೆಯನ್ನು ಪ್ರಧಾನಿ ಒತ್ತಿ ಹೇಳಿದ್ದಾರೆ. ‘ಕರೊನಾ ವಿರುದ್ಧದ ಸಮರದಲ್ಲಿ ಭಾರತದ ಪ್ರತಿ ಪ್ರಜೆಯೂ ಸೈನಿಕನೇ. ಜನರಿಂದಲೇ ನಡೆಯುತ್ತಿರುವ ಹೋರಾಟದ ಜತೆಗೆ ಸರ್ಕಾರ ನಿಂತುಕೊಂಡಿದೆ. ಭವಿಷ್ಯದ ಬಗ್ಗೆ ನನಗೆ ಭರವಸೆ ಇದೆ. ಇಡೀ ದೇಶವು ಒಂದೇ ಗುರಿ, ಒಂದೇ ಹಾದಿಯಲ್ಲಿ ಸಾಗುತ್ತಿದೆ. ಇಡೀ ದೇಶ ಒಂದು ತಂಡವಾಗಿ ಕಾರ್ಯನಿರ್ವಹಿಸುತ್ತಿದೆ’ ಎಂಬ ಪ್ರಶಂಸೆಯ ಜತೆಗೆ ಪಾಲಿಸಬೇಕಾದ ನಿಯಮಗಳ ಬಗ್ಗೆಯೂ ಸ್ಪಷ್ಟವಾಗಿ ಉಲ್ಲೇಖಿಸಿದ್ದಾರೆ. ಮನೆಯಿಂದ ಹೊರ ಹೋಗಬೇಕಾದರೆ ಕಡ್ಡಾಯವಾಗಿ ಮಾಸ್ಕ್ ಧರಿಸಲೇ ಬೇಕು, ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು, ಎಲ್ಲೆಂದರಲ್ಲಿ ಉಗಿಯುವ ದುರಾಭ್ಯಾಸವನ್ನು ಬಿಡಬೇಕು ಎಂಬ ಮೋದಿ ಮಾತುಗಳು ಜನರ ಜವಾಬ್ದಾರಿಯನ್ನು ನೆನಪಿಸಿಕೊಟ್ಟಿವೆ.

ದಿಗ್ಬಂಧನ ವಿಷಯವಾಗಿ ಹಂತಹಂತವಾಗಿ ಕೆಲ ವಿನಾಯ್ತಿಗಳನ್ನು ಘೋಷಿಸಲಾಗುತ್ತಿದೆ. ಆದರೆ, ಕರೊನಾ ವಿರುದ್ಧದ ಸಮರ ಇಷ್ಟರಲ್ಲೇ ಮುಗಿಯುವುದಿಲ್ಲ ಎಂಬ ಕಹಿಸತ್ಯವನ್ನು ಎಲ್ಲರೂ ಅರಗಿಸಿಕೊಳ್ಳಬೇಕಿದೆ. ಆರೋಗ್ಯ ತಜ್ಞರ ಪ್ರಕಾರ, 2022ರವರೆಗೂ ಈ ಸೋಂಕು ನಮ್ಮ ನಡುವೆ ಇರಲಿದ್ದು, ಹೋರಾಟ ನಡೆಸುವುದು ಅನಿವಾರ್ಯವಾಗಲಿದೆ. ಅಂದರೆ, ಮುಂದಿನ ದಿನಗಳು ಮತ್ತಷ್ಟು ಸವಾಲಿನಿಂದ ಕೂಡಿರಲಿವೆ ಎಂಬುದರಲ್ಲಿ ಅನುಮಾನವೇ ಇಲ್ಲ. ವೈಯಕ್ತಿಕ, ಸಾಮೂಹಿಕ ಸ್ವಚ್ಛತೆಗೆ ಆದ್ಯತೆ ನೀಡಿ, ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳುವ ಜತೆಗೆ, ಇತರರ ಆರೋಗ್ಯವನ್ನೂ ರಕ್ಷಿಸಬೇಕಿದೆ. ಮೈಮರೆತರೆ ನಾವೇ ಅಪಾಯವನ್ನು ಆಹ್ವಾನಿಸಿಕೊಂಡಂತೆ. ಜನರು ಜಾಗೃತರಾಗಿ ಅವರ ಜವಾಬ್ದಾರಿಗಳನ್ನು ಅರಿತುಕೊಂಡರೆ, ಹೊಣೆಗಾರಿಕೆಯನ್ನು ಸಮರ್ಪಕವಾಗಿ ನಿರ್ವಹಿಸಿದರೆ ಸೋಂಕಿನ ವಿರುದ್ಧದ ಹೋರಾಟದಲ್ಲಿ ಗೆಲುವು ನಮ್ಮದಾಗಲಿದೆ.

ರಾಜ್ಯ ಸರ್ಕಾರಗಳ ಪಾತ್ರವನ್ನೂ ಪ್ರಧಾನಿ ಶ್ಲಾಘಿಸಿದ್ದು, ಕರೊನಾ ವಿರುದ್ಧ ಹೋರಾಡುತ್ತಿರುವ ಸೇನಾನಿಗಳ ರಕ್ಷಣೆಗಾಗಿ ತಂದಿರುವ ಸುಗ್ರೀವಾಜ್ಞೆ ಬಗ್ಗೆಯೂ ಪ್ರಸ್ತಾಪಿಸಿದ್ದಾರೆ. ಸರ್ಕಾರ ಮಾಡಬೇಕಾದ ಕೆಲಸ ಮಾಡುತ್ತಿದೆ. ವೈದ್ಯಕೀಯ ಸೌಲಭ್ಯಗಳನ್ನೂ ಹೆಚ್ಚಿಸುತ್ತಿದೆ. ಆದರೆ, ಇದು ಬರೀ ಸರ್ಕಾರದ ಕರ್ತವ್ಯ ಎಂದುಕೊಂಡು ಸುಮ್ಮನಾಗದೆ ಜನರು ತಮ್ಮ ಹೊಣೆಗಾರಿಕೆ ಅರಿತುಕೊಂಡರೆ ಬರಲಿರುವ ನಾಳೆಗಳು ಮತ್ತೆ ಭರವಸೆ ಮೂಡಿಸಬಲ್ಲವು.