ಅಂಗ ಛೇದ ಆದರೂ ಪದಗಳು ಬೆಸೆದು ಅಂಗಚ್ಛೇದ 
ನ್ಯೂಸ್

ಅಂಗ ಛೇದ ಆದರೂ ಪದಗಳು ಬೆಸೆದು ಅಂಗಚ್ಛೇದ

ಕನ್ನಡ ಭಾಷೆಯಲ್ಲಾದರೆ ಸಂಧಿಗಳು ಮೂರೇ ಬಗೆ-- ಲೋಪ, ಆಗಮ ಮತ್ತು ಆದೇಶ. ಕಲಿಯಲಿಕ್ಕೂ ನೆನಪಿಡಲಿಕ್ಕೂ ಸುಲಭ. ಸಂಸ್ಕೃತದಲ್ಲಿ ಸ್ಥೂಲವಾಗಿ ಅವೇ ಮೂರು ವಿಧಗಳಾದರೂ ಉಪಪ್ರಕಾರಗಳಿಂದಾಗಿ, ಬೇರೆಬೇರೆ ರೀತಿಯ ವಿಂಗಡಣೆಯಿಂದಾಗಿ ಸಂಸ್ಕೃತ ಸಂಧಿಗಳ ಒಟ್ಟು ಸಂಖ್ಯೆ 25ಕ್ಕೂ ಹೆಚ್ಚು. ಅಂತಹದೊಂದು "ತುಗಾಗಮ' ಸಂಧಿ. ಅದರ ವ್ಯಾಖ್ಯೆ ಹೀಗಿದೆ-- ಪೂರ್ವಪದದ ಕೊನೆಯ ವ್ಯಂಜನವು ಅ/ಇ/ಉ/ಋ ಹ್ರಸ್ವಸ್ವರದೊಡನಿದ್ದು ಪರಪದವು ಛ ವ್ಯಂಜನದಿಂದ ಆರಂಭವಾಗಿದ್ದರೆ ಅಲ್ಲಿ ತ್‌ ಆಗಮವಾಗುತ್ತದೆ; ಆಮೇಲೆ ಶ್ಚುತ್ವ ಸಂಧಿಯಿಂದಾಗಿ ಅದು ಚ್‌ ಆಗುತ್ತದೆ. ಉದಾಹರಣೆಗೆ, ಅಂಗ ಮತ್ತು ಛೇದ ಎಂಬೆರಡು ಪದಗಳು ಸೇರಿದಾಗ, ಮೊದಲಿಗೆ ಅಂಗತ್‌+ಛೇದ ಎಂದಾಗಿ ಆಮೇಲೆ ಅಂಗಚ್‌+ಛೇದ ಎಂದಾಗುತ್ತದೆ. ಜೋಡಿಸಿ ಬರೆದಾಗ ಅಂಗಚ್ಛೇದ ಆಗುತ್ತದೆ. ಇದೇ ರೀತಿಯಲ್ಲಿ ವಿ+ಛಿನ್ನ = ವಿಚ್ಛಿನ್ನ, ವಿ+ಛೇದನ = ವಿಚ್ಛೇದನ, ಅನು+ಛೇದ = ಅನುಚ್ಛೇದ, ಮಾತೃ+ಛಾಯಾ = ಮಾತೃಚ್ಛಾಯಾ ಮುಂತಾದುವೂ ತುಗಾಗಮ ಸಂಧಿಯ ಉದಾಹರಣೆಗಳು. ಸಂಧಿಗಳ ಪರಿಚಯವು ಪದರಚನೆ ಅಭ್ಯಾಸ-ಅಧ್ಯಯನಗಳಿಗೆ ಒಳ್ಳೆಯದು; ಇಲ್ಲೀಗ ಇಷ್ಟು ವಿವರ ಸಾಕು.
ಕಳೆದ ಸಲ ಕೇಳಿದ್ದ Amputate ಪದಕ್ಕೆ ಹೆಚ್ಚು ಸೂಕ್ತವೆನಿಸುವ, ಬಂದಿರುವ ಪ್ರವೇಶಿಕೆಗಳಲ್ಲಿ ಬಹುಜನರ ಆಯ್ಕೆಯೂ ಆಗಿರುವ, "ಅಂಗಚ್ಛೇದ' ಪದವನ್ನು ಗುರುತಿಸುವಾಗ ಈ ವಿವರಣೆ ಸಂದರ್ಭೋರ್ಚಿತವೆನಿಸಿತು. ಆದರೆ ತುಗಾಗಮ ಸಂಧಿಯ ಈ ನಿರ್ದಿಷ್ಟ ಉದಾಹರಣೆಯಲ್ಲೊಂದು ಗಮನಾರ್ಹ ವಿರೋಧಾಭಾಸವೂ ಇದೆ; ನಿಜಾರ್ಥದಲ್ಲಿ ಅವಯವಗಳನ್ನು ಕತ್ತರಿಸಿ ದೇಹದಿಂದ ಪ್ರತ್ಯೇಕಿಸುವುದು; ಭಾಷೆಯ ಬೆಡಗಿನಲ್ಲಿ ಸಂಧಿಕ್ರಿಯೆಯೆಂದು ಪದಗಳನ್ನು ಒಂದಕ್ಕೊಂದು ಬೆಸೆಯುವುದು! ನಿಘಂಟುಕಾರ ಜಿ. ವೆಂಕಟಸುಬ್ಬಯ್ಯನವರ ಪ್ರಿಸಂ ಇಂಗ್ಲಿಷ್‌-ಕನ್ನಡ ನಿಘಂಟಿನಲ್ಲಿ Amputate ಪದಕ್ಕೆ ಕೊಯ್ದುಹಾಕು, ಕತ್ತರಿಸಿಹಾಕು ಎಂಬ ಅರ್ಥಗಳೊಟ್ಟಿಗೆ ಅಂಗಚ್ಛೇದಮಾಡು ಸಹ ಕೊಟ್ಟಿದ್ದಾರೆ. ಇಂಗ್ಲಿಷ್‌ನಲ್ಲಿ Amputation ಎಂದು ನಾಮಪದವಾಗಿಸಿದರೆ "ಅಂಗಚ್ಛೇದನ' ಸರಿಹೊಂದುತ್ತದೆ. ಅಂಗಚ್ಛೇದ, ಅಂಗಚ್ಛೇದನ ಅಥವಾ ಅಂಗ ಛೇದನ ಎಂದು ಬಿಡಿಸಿ ಬರೆದವುಗಳನ್ನೂ ಪರಿಗಣಿಸಿದರೆ ನೂರಕ್ಕೂ ಹೆಚ್ಚು ಪ್ರವೇಶಿಕೆಗಳು ಬಂದಿವೆ. ವಿ.ಆರ್‌. ಮುರಲೀಧರ್‌, ಪ್ರಭಾ ಸುರೇಶ್‌, ನರಸಿಂಹಮೂರ್ತಿ ಮಯ್ಯ, ಅರ್ಚನಾ ಆಶೋಕ್‌, ಅನಂತಪದ್ಮನಾಭ ಸಿ.ಎನ್‌, ಶೋಭಾ ಪಿ.ಭಟ್ಟ, ಗುಂಡಾರ್ಪಿ ವೆಂಕಟೇಶ್‌, ಸಿ.ಆರ್‌. ಮೋಹನಕುಮಾರ್‌, ಕಾತ್ಯಾಯಿನಿ ಪಂಡಿತ್‌, ಯಮನಪ್ಪ ಕೊಟ್ನಿಕಲ್‌, ಎಚ್‌.ಆರ್‌. ಪ್ರಕಾಶ್‌, ಪುಷ್ಪಲತಾ ಕೆ.ಎನ್‌, ಪ್ರಸಾದ್‌ ಜಿ.ಎಸ್​., ಲೋಕೇಶಪ್ಪ ಹಿತ್ಲಮನೆ, ಸಿದ್ಧರಾಮ ಕರಜಗಿ, ಮುರಲೀಧರ ಸಿ.ಎಸ್​, ಶ್ರೀನಿವಾಸ ಚನ್ನೂರ, ಎನ್‌.ದತ್ತಾತ್ರೇಯ, ಗೀತಾ ಸಂಜೀವಮೂರ್ತಿ, ಡಾ.ವಿ.ಬಿ. ಹೊಸಪೇಟಿ, ಡಾ.ಜಿ.ಎಂ. ರಾಜಶೇಖರ, ಶ್ಯಾಮಸುಂದರ ಅತ್ರಿನಂದನ, ಕೆ.ಎಂ. ಮಧ್ವರಾಯ, ಭಾಗ್ಯಶ್ರೀ ಕೆಕ್ಕಾರ, ಗುರುರಾಜ್‌ ಗಲಗಲಿ, ಸುಜನಾ ನಿಟ್ಟೂರು, ಶೈಲಶ್ರೀ ರಾವ್ ಮುಂತಾದವರು.
ಸಂಧಿಗಳ ಬಗ್ಗೆ ತಲೆಕೆಡಿಸಿಕೊಳ್ಳದೆ, ಪ್ರಾಸಬದ್ಧವಾಗಿ "ಅಂಗಭಂಗ' ಆದೀತಲ್ಲವೇ ಎಂದಿದ್ದಾರೆ ಅನಿಲ್ ಕುಸುಗಲ್‌, ಪಿ.ಜೆ. ರಾವೇಂದ್ರ, ಪ್ರಭುಪ್ರಸಾದ್ ನಡುತೋಟ, ಆರ್‌.ವಿ. ಮೂರ್ತಿ. ಭಂಗ ಎಂದರೆ ಬೇರ್ಪಡಿಸುವುದು ಎಂಬರ್ಥವೂ ಇರುವುದರಿಂದ ಇದೂ ಮಾನ್ಯವೇ. ಆದರೆ ಶಿಷ್ಟ ಬರೆವಣಿಗೆಯಲ್ಲಿ ಅಥವಾ ಮಾತಿನ ಸಂದರ್ಭಗಳಲ್ಲಿ ಗಾಂಭೀರ್ಯಕ್ಕೆ ಕಡಿಮೆಯಾದೀತು. ಅಚ್ಚಕನ್ನಡದಲ್ಲಿ "ಮೆಯ್ಕೊಯ್‌' (ಮೆಯ್‌ ಅಂದರೆ ಶರೀರ, ಕೊಯ್‌ ಅಂದರೆ ತುಂಡರಿಸು) ಎನ್ನೋಣವೆಂದ ಅನಂತಕೃಷ್ಣ ಶಿವಮೊಗ್ಗ ಅವರ ಸಲಹೆಯೂ ಮೆಚ್ಚುವಂಥದ್ದೇ. ಅಂದಹಾಗೆ ಇಂಗ್ಲಿಷ್‌ನಲ್ಲಿ Amputation ಪದ Cut off the body ಅರ್ಥದಲ್ಲಿ, ಈಗ ಹೆಚ್ಚಾಗಿ ಮನುಷ್ಯದೇಹಕ್ಕೆ ಸಂಬಂಧಿಸಿದಂತೆ ಬಳಸುವುದಾದರೂ ಗಿಡಮರಗಳ ಬೆಳೆವಣಿಗೆಗೋಸ್ಕರ ಚಿಗುರು/ಕೊಂಬೆ ಕತ್ತರಿಸುವುದಕ್ಕೂ Pruning ಎಂಬರ್ಥದಲ್ಲಿ ಬಳಕೆಯಾಗುತ್ತಿತ್ತು. ಲ್ಯಾಟಿನ್ ಮೂಲದಲ್ಲಿ Amputation ಪದಕ್ಕೆ ಅದೇ ಅರ್ಥವಿದ್ದದ್ದೂ ಕಾರಣವಿರಬಹುದು. ಆ ದೃಷ್ಟಿಯಿಂದ "ಕೊಯ್ತೆಗೆ' (ಭಾರತಿ ಆರ್‌.ಭಟ್‌, ರೂಪಕಲ ಸದಾನಂದ, ವಸಂತಕುಮಾರ್ ಕಲ್ಯಾಣಿ, ಚಿಕ್ಕಬಳ್ಳಾಪುರ ರುಪತಿ, ಸುಜಾತ ಕುರ್ಪಾಡ್‌, ಭವಾನಿ ಜೋಶಿ ಮತ್ತಿತರರು) ಸಹ ಪರಿಗಣನೆಗೆ ಯೋಗ್ಯ. "ಸಕ್ಕರೆಕಾಯಿಲೆ ಉಲ್ಬಣವಾಗಿ ಕಾಲ್ಬೆರಳುಗಳನ್ನು ಕೊಯ್ತೆಗೆಯಬೇಕಾಯ್ತೆಂದು ವೈದ್ಯರು ತಿಳಿಸಿದ್ದಾರೆ' ರೀತಿಯಲ್ಲಿ ಬಳಕೆ.
ಕಳೆದ ಸಲ ಕೇಳಿದ್ದ ಎರಡನೆಯ ಪದ Grid, ಇಂಗ್ಲಿಷ್‌ನಲ್ಲಿ ನೂರಿನ್ನೂರು ವರ್ಷಗಳಿಂದೀಚೆಗಷ್ಟೇ ಬಳಕೆಯಲ್ಲಿರುವುದು. ಮೂಲತಃ ಇದು Grating ಅಥವಾ Gridiron ಪದಗಳ ಮೊಟಕುಗೊಳಿಸಿದ ರೂಪ. ನಡುನಡುವೆ ಸ್ಥಳ ಬಿಟ್ಟು ಜೋಡಿಸಿದ ಸಮಾಂತರ ಸರಳುಗಳ ಚೌಕಟ್ಟು ಎಂದು ಅರ್ಥ. ಅಡುಗೆಗೆ, ಮಾಂಸ ಅಥವಾ ತರಕಾರಿಗಳನ್ನು ಕೆಂಡದ ಮೇಲೆ ಸುಡುವಾಗ ಉಪಯೋಗಿಸುವ ಸರಳುಗಳ ಚೌಕಟ್ಟು ಅಥವಾ ಸುಡುಚೌಕಟ್ಟು. ಕ್ರಮೇಣ ಇದೇ ಪದವನ್ನು ವಿದ್ಯುತ್‌ ತಂತಿಗಳ ಜಾಲ, ಭೂಪಟದಲ್ಲಿ ಅಕ್ಷಾಂಶ ರೇಖಾಂಶಗಳ ಜಾಲ, ದೊಡ್ಡದೊಡ್ಡ ನಗರಗಳಲ್ಲಿ ಅಡ್ಡ/ಉದ್ದ ರಸ್ತೆಗಳಿಂದಾದ ಜಾಲ ಮುಂತಾದುವಕ್ಕೂ ಬಳಸಲಾಯಿತು. ನಗರಗಳಲ್ಲಿ ಆಗಾಗ ಉಂಟಾಗುವ ಸಂಚಾರದಟ್ಟಣೆಯನ್ನು ಇಂಗ್ಲಿಷ್‌ನಲ್ಲಿ Gridlock ಎನ್ನುವುದು ಇದೇ ಕಾರಣಕ್ಕೆ. ಗಮನಿಸಬೇಕಾದ್ದೇನೆಂದರೆ Grid ಬಹುಮಟ್ಟಿಗೆ ರೇಖೆಗಳು, ಸರಳುಗಳು, ರಸ್ತೆಗಳು ಲಂಬಕೋನದಲ್ಲಿ ಸಂಧಿಸಿ ರಚನೆಯಾಗಿರುತ್ತದೆ. ಅದು ಅಡ್ಡಾದಿಡ್ಡಿ ಬಲೆ ಅಲ್ಲ. ಅಲ್ಲೊಂದು ಅಚ್ಚುಕಟ್ಟುತನ ಇರುತ್ತದೆ, ನೋಡಲಿಕ್ಕೆ ಒಪ್ಪಓರಣವಾಗಿರುತ್ತದೆ. ಆದ್ದರಿಂದ "ಓರಣಬಲೆ' ಚೆನ್ನಾಗಿದೆ. ಸೂಚಿಸಿದವರು- ವಿಶ್ವಜ್ಯೋತಿ ಶಿವಮೊಗ್ಗ, ಬಿ.ಆರ್ ಚಂದ್ರಮೌಳಿ, ಸುರೇಂದ್ರ ಪೈ, ಉಮೇಶ ಪ್ರಭು, ಪರಮೇಶ್ವರ ಶರ್ಮ, ಕಂಪಲಾಪುರ ಎಸ್‌.ಮೂರ್ತಿ ಮತ್ತು ನಿಹಾರಿಕಾ ನಯನ.
ಗೋಜಲುಗೋಜಲಾದ ಅಥವಾ ಸಿಕ್ಕುಸಿಕ್ಕಾದ ಜಾಲವಲ್ಲ ನಮ್ಮ ಅನುಕೂಲಕ್ಕಾಗಿ ನಾವೇ ಮಾಡಿಕೊಂಡ ಅಚ್ಚುಕಟ್ಟಾದ ಜಾಲವಾದ್ದರಿಂದ Grid ಅಂದರೆ "ಸಿದ್ಧಜಾಲ' ಎಂದು ಡಾ.ಜಿ.ಎಸ್ ಉಮೇಶಬಾಬು ಅವರ ತರ್ಕ. "ಜಾಲರಿ' ಎಂದು ಸೂಚಿಸಿದ್ದಾರೆ ಡಾ.ಆದಿಮೂರ್ತಿ ಮೇಡಾ, ವಿಜಯಕುಮಾರ ಪಿ.ಕುಲಕರ್ಣಿ, ನಳಿನಿ ಜಿ.ಭಟ್‌, ನಂದಾ ಕುಲಕರ್ಣಿ, ನಂದಿನಿ ಹಾಸನ, ವಸುಪ್ರದಾ ಮಂಜುನಾಥ, ಷಡರಮುನಿ ಸ್ವಾಮೀಜಿ, ಡಾ.ಎಚ್‌.ಎಸ್ ಸುರೇಶ್‌, ವನಮಾಲಾ ಬೀಜಾಡಿ, ಎನ್‌.ಟಿ ಹೆಗಡೆ, ಸಾವಿತ್ರಿ ಬೇಡಕಿಹಾಳ, ಗಂಗಾ ಹೆಗಡೆ, ಪೂರ್ಣಿಮಾ ಭಟ್‌, ಸೀತಾ ವ್ಯಾಸಮುದ್ರಿ, ಯು.ಎನ್ ಸಂಗನಾಳಮಠ, ಜಯಲಕ್ಷ್ಮಿ ಅಡಿಗ, ಜಯಶ್ರೀ ಮನೋಹರ ಕುಲಕರ್ಣಿ, ಪದ್ಮಾವತಿ ಅಯ್ಯರ್ ಮುಂತಾದವರು. "ಜಾಳಿಗೆ' ಎಂದವರು ಸಿ.ನರೇಂದ್ರ, ನಿತ್ಯಾನಂದ ಬ್ರಹ್ಮಾವರ, ಮತ್ತು ಎಂ.ಟಿ ಉಪಾಧ್ಯ. ಅದರ ತತ್ಸಮರೂಪ "ಜಾಲಕ' ಸೂಚಿಸಿದವರು ಜಿ.ಕೆ. ಲಕ್ಷ್ಮಿನರಸಿಂಹಯ್ಯ. "ಹೆಣಿಗೆ' ಎಂದು ಕೂಡ ಕೆಲವು ಪ್ರವೇಶಿಕೆಗಳಲ್ಲಿದೆ. ಶಕುಂತಲಾ ಹೊನ್ನಾಳಿ, ರಶ್ಮಿ ರಾಜೇಂದ್ರ, ಶಂಭು ಇರಾಣಿ, ಉಷಾಕಿರಣ ಅತ್ತಾವರ, ಎನ್‌.ವಿ ಶಂಕರ್‌, ಉಮಾ ಪ್ರಭು, ಎಂ.ಕೆ ರಮೇಶ್‌, ರೇಖಾ ರಾಮಕೃಷ್ಣ, ಸಿದ್ದನಗೌಡ ಮುದಿಗೌಡ್ರ ಮುಂತಾದವರು. Grid ಒಂದು ರೀತಿಯ ಹೆಣಿಗೆಯೇ ಹೌದಾದರೂ ಸಾಮಾನ್ಯವಾಗಿ ಹೆಣಿಗೆ ಪದ ಬಳಕೆಯಾಗುವುದು ಕಸೂತಿ ನೇಯ್ಗೆ ಸಂದರ್ಭದಲ್ಲಿ. ಅಲ್ಲಿ ಅಡ್ಡ-ಉದ್ದ ನೂಲುಗಳು ಒತ್ತೊತ್ತಾಗಿ ಇರಬೇಕಾಗುತ್ತದೆ. Gridನಲ್ಲಿ ರೇಖೆಗಳು ಒತ್ತೊತ್ತಾಗಿ ಇರುವುದಿಲ್ಲ, ನಡುವೆ ಜಾಗ ಇರಲೇಬೇಕು. ಇಲ್ಲವಾದರೆ ಪದಬಂಧದಲ್ಲಿ ಅಕ್ಷರಗಳನ್ನು ತುಂಬುವುದೆಂತು?
ಕೊನೆಯಲ್ಲಿ Turbulence. ಇದರದ್ದೂ ಒಂದು ಸ್ವಾರಸ್ಯವಿದೆ.
ಈಗ ಬಹುಮಟ್ಟಿಗೆ ವಿಮಾನಯಾನ ಸಂದರ್ಭದಲ್ಲೇ ಈ ಪದದ ಬಳಕೆ. ನಾಗರಿಕ ವಿಮಾನಸೌಲಭ್ಯ ಆರಂಭವಾದದ್ದು 20ನೆಯ ಶತಮಾನದ ಆರಂಭದಲ್ಲಷ್ಟೇ. ಆದರೆ ಇಂಗ್ಲಿಷ್‌ನಲ್ಲಿ ಇದು 15ನೆಯ ಶತಮಾನದಿಂದಲೂ ಬಳಕೆಯಲ್ಲಿದೆ, Stiff to Turbulence; ಅಡಚಣೆಯೆಂಬರ್ಥದಲ್ಲಿ, ಲ್ಯಾಟಿನ್ ಮೂಲದ Turbulentus ಪದದ ಆಧಾರದಲ್ಲಿ. ನೌಕೆಗಳೂ ಬಿರುಗಾಳಿಯ ಹೊಡೆತಕ್ಕೆ ಒಳಗಾಗುತ್ತಿದ್ದುದರಿಂದ Turbulence ಎನ್ನುತ್ತಿದ್ದರೇನೊ. ಭಾಷಾಸ್ಮೂತೆಯಿಂದ ನೋಡಿದರೆ ಇಂಗ್ಲಿಷ್‌ನ Disturbance, Turbid, Turbinate ಮುಂತಾದುವೂ ಸಂಬಂಧವುಳ್ಳವೇ. ವಿಮಾನಯಾನದ Turbulence ಮಟ್ಟಿಗೇ ಬಳಸುವುದಾದರೆ ಕನ್ನಡದಲ್ಲಿ "ಹೊಯ್ದಾಟ' ಸೂಕ್ತವೆನಿಸುತ್ತದೆ ಎಂದಿದ್ದಾರೆ ವಿದ್ಯಾಶಂಕರ ಶರ್ಮ, ನಾಗೇಶ ಫಾಟಕ್‌, ಮಮತಾ ಕುಂದಾಪುರ, ಕುಶಲ್ ಭಾರದ್ವಾಜ್‌, ಡಾ.ದಯಾನಂದ ಭಟ್ಟ ಮತ್ತಿತರರು. "ಮುಂಬೈಯಿಂದ ಲಂಡನ್‌ಗೆ ಹೊರಟ ವಿಮಾನ ನಡುದಾರಿಯಲ್ಲಿ ಜೋರಾದ ಹೊಯ್ದಾಟಕ್ಕೆ ಈಡಾಯಿತು', ಅಥವಾ 'ಫುಕೆಟ್‌ನಿಂದ ದಿಲ್ಲಿಗೆ ಬರುತ್ತಿದ್ದ ಏರ್‌ಇಂಡಿಯಾ ವಿಮಾನ ಏಕಾಏಕಿ 300 ಅಡಿಗಳಷ್ಟು ಧುಮುಕುವುದಕ್ಕೆ ಹೊಯ್ದಾಟ ಕಾರಣವಿರಲಾರದು' ಎನ್ನುವಾಗ ಹೊಯ್ದಾಟ ಅರ್ಥಬದ್ಧವಾಗುತ್ತದೆ.
"ಪ್ರುಬ್ಧತೆ' (ರಂಗನಾಥ ಟಿ.ಕೆ, ರಾಜೇಶ್ವರಿ ಶಿವಮೊಗ್ಗ, ಸರಿತಾ ಸಂಗಂ, ಹೊನ್ನಿ ಭಟ್ಟ, ಎನ್‌.ಆರ್ ರಮೇಶ್‌, ಶ್ರೀನಾಥ್‌ ಕೆ.ಟಿ, ಶಿವಕುಮಾರ್ ಸಿಂಗಟಗೆರೆ, ಜಿ.ಎಚ್ ಸಂಕಪ್ಪ, ಮಂಜುನಾಥ ಜಾಲವಾದಿ, ನಟರಾಜು ಬಿ.ಎಸ್‌, ಅಂಜಲಿ ಭರವೆ, ಕೆ.ಅಮರ್‌, ಸಂಜೀವ ಮತ್ತಿಕೊಪ್ಪ, ಜಿ.ನಾರಾಯಣ ರಾವ್‌, ಅಶೋಕಕುಮಾರ್ ಕಿಣಿ, ಆನಂದರಾಮ ಮಡಿ, ಡಾ.ಎನ್‌.ಎಂ ತುಳಪುಳೆ, ಡಾ.ರಂಗನಾಥ ಕಟ್ಟಿ, ಎನ್‌.ಎಸ್ ಭುಜಂಗರಾವ್‌, ಶ್ಯಾಮರಾಜ ಉಡುಪ ಮುಂತಾದವರು) ಸಹ Turbulenceಗೆ ಸಂವಾದಿಯಾಗಿ ಬಳಸಬಹುದಾದ ಪದ. "ಅಲ್ಲೋಲಕಲ್ಲೋಲ' (ನಾಗಮಣಿ ಎನ್‌.ಶಾಂಪುರ್‌, ಪ್ರಮೋದಕುಮಾರ್ ಜೋಶಿ, ಕೆ.ಎ ಭಟ್‌, ಎಚ್‌.ಎಸ್ ಮಂಜುನಾಥ, ಯಶೋದಾ ಎಂ.ಗೋಪಿ ಮುಂತಾದವರು) ಕೂಡ ಸೂಕ್ತವಾಗಿ ಬಳಸಬಹುದು. ಸಂಸ್ಕೃತದಲ್ಲಿ ಉಲ್ಲೋಲ ಅಂದರೆ ದೊಡ್ಡ ಅಲೆ, ಬಹಳ ಚಂಚಲವಾದ, ಅತಿಯಾಗಿ ಅಲುಗಾಡುವ ಎಂದರ್ಥ. ಕನ್ನಡಕ್ಕೆ ಬಂದಾಗ ಅಲ್ಲೋಲ ಆಗಿದೆ, ಜತೆಯಲ್ಲಿ ಜೋಡಿಪದವಾಗಿ ಕಲ್ಲೋಲ ಸೇರಿಕೊಂಡಿದೆ. "ಅಲ್ಲಕಲ್ಲೋಲ' ಎಂಬ ರೂಪದಲ್ಲೂ ಬಳಕೆಯಿದೆ. "ಏರುಪೇರು' (ಅನಂತರಾಜ ಮೇಲಾಂಟ, ದೇವೇಂದ್ರ ಕಡೂರು, ಚ.ರು ಶಂಕರರಾವ್‌), "ಅಯೋಮಯ' (ಸಿಂಹ ಕೆ.ಎಸ್‌, ವಿಜಯಕಲ ವಿಟ್ಲ), "ವಿಪ್ಲವ' (ಆನಂದ ಗೋಡಸೆ), "ಕದಡಿಕೆ' (ನರೇಂದ್ರನಾಥ ಎಚ್‌.ಎಂ) ಮತ್ತು ಅನುಕರಣ ಶಬ್ದದಂತೆ ಕಂಡರೂ "ದಡಬಡ' (ಎನ್‌.ಸುಬ್ರಾಯ ಭಟ್‌) ಇವೂ Turbulenceನ ಚಿತ್ರಣ ತರುವಲ್ಲಿ ಯಶಸ್ವಿಯಾಗುತ್ತವೆ.

ಈ ವಾರದ ಮೂರು ಪದಗಳು

Brittle: ಸುಲಭವಾಗಿ ಒಡೆಯುವ, ಚೂರುಚೂರಾಗುವ, ಮುರಿದುಹೋಗಬಹುದಾದ ವಸ್ತುವನ್ನು ನಾಜೂಕಾಗಿ ನೋಡಿಕೊಳ್ಳಬೇಕಾಗುತ್ತದೆ.
Disposable: ಒಮ್ಮೆ ಉಪಯೋಗಿಸಿದ ಬಳಿಕ ಆಮೇಲೆ ಅಗತ್ಯವಾಗಲೀ ಬಳಕೆಯಾಗಲೀ ಇಲ್ಲದೆ ವಿಲೇವಾರಿ ಮಾಡಬಹುದಾದ ವಸ್ತು.
Turnkey: ಚಾವಿ ಅಥವಾ ಬೀಗದಕೈ ತಿರುಗಿಸು ಎಂಬ ವಾಚ್ಯಾರ್ಥ ಅನುವಾದ ಸರಿಯೆನಿಸದು, ಆದರೆ ಅಂತಿಮವಾಗಿ ಧ್ವನ್ಯಾರ್ಥ ಅದೇ.
ಓದುಗರು ಪ್ರತಿಯೊಂದು ಆಂಗ್ಲ ಪದಕ್ಕೆ ತಲಾ ಒಂದರಂತೆ ಕನ್ನಡ ಪದ ತಿಳಿಸಬೇಕು. ತಮ್ಮ ಹೆಸರು ಮತ್ತು ಊರಿನ ಹೆಸರನ್ನೂ ಕನ್ನಡದಲ್ಲಿ ಬರೆಯಬೇಕು. ಪದಗಳನ್ನು ಕಳುಹಿಸಲಿಕ್ಕೆ ಗಡುವು: ಮುಂದಿನ ಶನಿವಾರ ಸಂಜೆ 6 ಗಂಟೆಯೊಳಗೆ. ವಾಟ್ಸ್‌ಆ್ಯಪ್‌ ಸಂಖ್ಯೆ: +12404010945