ಬೆಂಗಳೂರು: ರಾಜ್ಯದಲ್ಲಿ 2025-26ನೇ ಸಾಲಿನಲ್ಲಿ ರಾಜ್ಯ ಪಠ್ಯಕ್ರಮ ವ್ಯಾಸಂಗ ಮಾಡುವ ಒಂದನೇ ತರಗತಿ ವಿದ್ಯಾರ್ಥಿಗಳಿಗೆ ವಯೋಮಿತಿ ಸಡಿಲಿಸಲಾಗಿದೆ. ಒಂದನೇ ತರಗತಿಗೆ ಪ್ರವೇಶಕ್ಕೆ ನಿಗದಿಯಾಗಿದ್ದ 6 ವರ್ಷಗಳ ಕನಿಷ್ಠ ವಯೋಮಿತಿಯನ್ನು 5.5 ವರ್ಷಕ್ಕೆ ಇಳಿಸಲಾಗಿದೆ. ಈ ನಿಯಮವು ಕೇವಲ ಈ ವರ್ಷಕ್ಕೆ ಮಾತ್ರ ಸೀಮಿತವಾಗಿದೆ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಮಧು ಬಂಗಾರಪ್ಪ ತಿಳಿಸಿದರು.
ಸಮಗ್ರ ಶಿಕ್ಷಣ ಕರ್ನಾಟಕ ಕಚೇರಿಯಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 2022ರಲ್ಲಿ ಒಂದನೇ ತರಗತಿಗೆ ವಯೋಮಿತಿ ನಿಗದಿ ಮಾಡುವ ವೇಳೆಗೆ ಪ್ರೀಕೆಜಿಗೆ ಮಕ್ಕಳನ್ನು ದಾಖಲಿಸಿದ್ದ ಪಾಲಕರಿಗೆ ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ಈ ವರ್ಷಕ್ಕೆ ಮಾತ್ರ ಸೀಮಿತಗೊಳಿಸಿ 7 ತಿಂಗಳ ವಯೋಮಿತಿ ಸಡಿಲಿಸಲಾಗಿದೆ ಎಂದು ಸ್ಪಷ್ಟಪಡಿಸಿದರು.
ಎಸ್‌ಇಪಿ ಪ್ರಕಾರ ಮುಂದಿನ ವರ್ಷ ಜಾರಿ:
ರಾಜ್ಯ ಶಿಕ್ಷಣ ನೀತಿ (ಎಸ್‌ಇಪಿ) ಅಭಿಪ್ರಾಯ ಹಾಗೂ ಇಲಾಖೆ ಅಧಿಕಾರಿಗಳ ಹಂತದಲ್ಲಿ ಚರ್ಚಿಸಿ ನಿಯಮ ಸಡಿಲಗೊಳಿಸಲಾಗಿದೆ. 2026-27ನೇ ಸಾಲಿನಲ್ಲಿ ಕೂಡ ಯಾವ ನಿಯಮವನ್ನು ಪಾಲನೆ ಮಾಡಬೇಕೆಂಬುದನ್ನು ಎಸ್‌ಇಪಿ ತಿಳಿಸಲಿದೆ. ಅದರ ಪ್ರಕಾರವೇ ಪಾಲನೆ ಮಾಡಲಾಗುತ್ತದೆ. ಈ ವರ್ಷದ ನಿಯವವು ತಾತ್ಕಾಲಿಕ ಪರಿಹಾರವಾಗಿದೆ ಎಂದು ತಿಳಿಸಿದರು.
ಷರತ್ತುಗಳೇನು?
- ಒಂದನೇ ತರಗತಿ ಪ್ರವೇಶಕ್ಕೆ 5.5 ವರ್ಷಕ್ಕೆ ದಾಖಲಿಸಿಕೊಳ್ಳಬೇಕಾದರೆ ಮಗುವು ಯುಕೆಜಿ ಮುಗಿಸಿರಬೇಕು
- ಅಂಗನವಾಡಿಯಲ್ಲಿ ಮೂರು ವರ್ಷ ಕಲಿತರಬೇಕು
- ಒಂದು ವೇಳೆ ನೇರವಾಗಿ ಒಂದನೇ ತರಗತಿಗೆ ಸೇರಿಸಬೇಕಾದರಲ್ಲಿ ಮಗುವಿಗೆ ಕಡ್ಡಾಯವಾಗಿ 6 ವರ್ಷತುಂಬಿರಬೇಕು. ಪೂರ್ವ ಪ್ರಾಥಮಿಕ ತರಗತಿ ವ್ಯಾಸಂಗ ಮಾಡದ ಮಗುವು 5.5 ವರ್ಷದ ವಯೋಮಿತಿಗೆ ಅರ್ಹರಾಗಿರುವುದಿಲ್ಲ