ನ್ಯೂಸ್

ಅಟಲ್​ ಬಿಹಾರಿ ವಾಜಪೇಯಿ ಪ್ರಧಾನಿಯಾಗಿದ್ದರೂ ತುರ್ತು ಪರಿಸ್ಥಿತಿ ಹೇರುತ್ತಿದ್ದರು; ಸಂಜಯ್​ ರಾವುತ್​​​​ ಹೀಗೆಳಿದ್ದೇಕೆ?

ಮುಂಬೈ: ಮೋದಿ ನೇತೃತ್ವದ ಬಿಜೆಪಿ ಸರ್ಕಾರವು ಜೂನ್​​ 25 ಅನ್ನು ಸಂವಿಧಾನ ಹತ್ಯೆ ದಿನ ಎಂದು ಆಚರಿಸಲಾಗುವುದು ಎಂದು ನಿರ್ಧರಿಸಿದೆ. ಕೇಂದ್ರದ ಈ ನಿರ್ಧಾರವನ್ನು ಶಿವಸೇನೆ (ಯುಬಿಟಿ) ನಾಯಕ ಸಂಜಯ್ ರಾವುತ್​​ ಲೇವಡಿ ಮಾಡಿದ್ದಾರೆ. ಭಾರತೀಯ ಜನತಾ ಪಕ್ಷಕ್ಕೆ (ಬಿಜೆಪಿ) ಯಾವುದೇ ಕೆಲಸ ಉಳಿದಿಲ್ಲ ಮತ್ತು ತಪ್ಪು ದಾರಿಗೆ ಎಳೆಯುವ ಪ್ರಯತ್ನ ಮಾಡುತ್ತಿದೆ. ಆ ಸಮಯದಲ್ಲಿ ಅಟಲ್ ಬಿಹಾರಿ ವಾಜಪೇಯಿ ಪ್ರಧಾನಿಯಾಗಿದ್ದರೂ ಸಹ ತುರ್ತು ಪರಿಸ್ಥಿತಿ ಹೇರುತ್ತಿದ್ದರು ಎಂದು ಹೇಳಿದ್ದಾರೆ.

ತುರ್ತು ಪರಿಸ್ಥಿತಿ ಹೇರಿ 50 ವರ್ಷಗಳು ಕಳೆದಿವೆ. ಜನತು ತುರ್ತು ಪರಿಸ್ಥಿತಿಯನ್ನು ಮರೆತಿದ್ದಾರೆ. ದೇಶದಲ್ಲಿ ತುರ್ತುಪರಿಸ್ಥಿತಿ ಹೇರಿದ್ದು ಏಕೆ? ಕೆಲವರು ದೇಶದಲ್ಲಿ ಅರಾಜಕತೆಯನ್ನು ಹರಡಲು ಬಯಸಿದ್ದರು. ರಾಮಲೀಲಾ ಮೈದಾನದಿಂದಲೇ ಬಹಿರಂಗ ಘೋಷಣೆ ಮಾಡಲಾಗಿತ್ತು. ಸರ್ಕಾರದ ಆದೇಶವನ್ನು ಪಾಲಿಸದಂತೆ ಪೊಲೀಸರು ಮತ್ತು ಸೇನೆಯನ್ನು ಪ್ರಚೋದಿಸಲಾಗುತ್ತಿತ್ತು. ದೇಶದಲ್ಲಿ ಕೆಲವರು ಬಾಂಬ್‌ಗಳನ್ನು ತಯಾರಿಸುತ್ತಿದ್ದರು ಮತ್ತು ವಿವಿಧೆಡೆ ಬಾಂಬ್‌ಗಳು ಸ್ಫೋಟಗೊಳ್ಳುತ್ತಿದ್ದವು. ಇದು ರಾಷ್ಟ್ರೀಯ ಭದ್ರತೆಯ ವಿಷಯವಾಗಿತ್ತು. ಆ ವೇಳೆ ತುರ್ತು ಪರಿಸ್ಥಿತಿ ಹೇರಲಾಯಿತು. ಆದ್ದರಿಂದ ಅಂತಹ ಪರಿಸ್ಥಿತಿಯಲ್ಲಿ ಅಟಲ್ ಬಿಹಾರಿ ವಾಜಪೇಯಿ ಅವರು ಪ್ರಧಾನಿಯಾಗಿದ್ದರೆ, ಅವರು ರಾಷ್ಟ್ರೀಯ ಭದ್ರತೆಯ ವಿಷಯವನ್ನು ಗಮನದಲ್ಲಿಟ್ಟುಕೊಂಡು ತುರ್ತು ಪರಿಸ್ಥಿತಿ ಹೇರುತ್ತಿದ್ದರು ಎಂದು ಹೇಳಿದ್ದಾರೆ.

ಆ ಸಮಯದಲ್ಲಿ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರಿಗೆ ಸಂವಿಧಾನದ ಕೊಲೆಯಾಗಿದೆ ಎಂದು ಅನಿಸಿರಲಿಲ್ಲ. ಶಿವಸೇನೆ ಸಂಸ್ಥಾಪಕ ಬಾಳಾಸಾಹೇಬ್ ಠಾಕ್ರೆ ಕೂಡ 1975 ರಲ್ಲಿ ಹೇರಲಾದ ತುರ್ತು ಪರಿಸ್ಥಿತಿಯನ್ನು ಬಹಿರಂಗವಾಗಿ ಬೆಂಬಲಿಸಿದ್ದರು. ದೇಶದಲ್ಲಿನ ಅರಾಜಕತೆಯನ್ನು ನಿಯಂತ್ರಿಸುವ ಅಗತ್ಯವಿದೆ ಎಂದು ಅವರು ಭಾವಿಸಿದ್ದರಿಂದ ತುರ್ತು ಪರಿಸ್ಥಿತಿಯನ್ನು ಬೆಂಬಲಿಸಿದರು. ಅದರಲ್ಲಿ ತಪ್ಪೇನಿದೆ ಎಂದು ಪ್ರಶ್ನಿಸಿದ್ದಾರೆ. ಕಳೆದ 10 ವರ್ಷಗಳ ಬಿಜೆಪಿಯಲ್ಲಿ ಏನಾಯಿತು ಎಂಬುದನ್ನು ಸಹ ನೆನಪಿಸಿಕೊಳ್ಳಲಾಗುತ್ತದೆ. ಅವರು ಸಂವಿಧಾನದ ರಕ್ಷಕರಲ್ಲ ಎಂದು ಬಿಜೆಪಿ ವಿರುದ್ಧ ಆರೋಪಿಸಿದರು.

ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಅಮಾನವೀಯ ನೋವನ್ನು ಅನುಭವಿಸಿದವರ ಅಪಾರ ಕೊಡುಗೆಯನ್ನು ಸ್ಮರಿಸಲು ಮೋದಿ ಸರ್ಕಾರವು ಜೂನ್ 25 ಅನ್ನು ಸಂವಿಧಾನ ಹತ್ಯೆ ದಿನ ಎಂದು ಆಚರಿಸುವುದಾಗಿ ಬಿಜೆಪಿ ಸರ್ಕಾರ ನಿರ್ಧರಿಸಿದೆ. (ಏಜೆನ್ಸೀಸ್​​)