ನ್ಯೂಸ್

ಚುನಾವಣೆ ನಿಗದಿಗೂ ಮುನ್ನವೇ ರಂಗೇರಿದ ಬೆಂಗಳೂರು ಗ್ರಾಮಾಂತರ ಕಣ

ಗಂಗಾಧರ್ ಬೈರಾಪಟ್ಟಣ ರಾಮನಗರ

ಚುನಾವಣೆ ಘೋಷಣೆಗೂ ಮುನ್ನವೇ ಲೋಕಸಭಾ ಕಣ ರಂಗು ಪಡೆಯುತ್ತಿದೆ. ಅದರಲ್ಲೂ ರಾಜ್ಯದ ಏಕೈಕ ಕಾಂಗ್ರೆಸ್ ಸಂಸದ ಇರುವ ಬೆಂಗಳೂರು

ಗ್ರಾಮಾಂತರದ ಮೇಲೆ ಎಲ್ಲರ ಕಣ್ಣು ನೆಟ್ಟಿದೆ.
ಕಾಂಗ್ರೆಸ್ ಪಾಲಿಗೆ ಬೆಂಗಳೂರು ಗ್ರಾಮಾಂತರ ಲೋಕಸಭೆ ಕ್ಷೇತ್ರವನ್ನು ಉಳಿಸಿಕೊಳ್ಳಲೇಬೇಕಾದ ಅನಿವಾರ್ಯತೆ ಇದ್ದರೆ, ಬಿಜೆಪಿ-ಜೆಡಿಎಸ್ ಮೈತ್ರಿಗೆ ಇದನ್ನು ಪಡೆಯುವ ತವಕ. ಈ ಹಿನ್ನೆಲೆಯಲ್ಲಿ ಈ ಕ್ಷೇತ್ರ ಹೈವೋಲ್ಟೇಜ್ ಕ್ಷೇತ್ರಗಳಲ್ಲಿ ಒಂದಾಗಿದ್ದು, ಅಭ್ಯರ್ಥಿಗಳ ಘೋಷಣೆ ಕುತೂಹಲಕ್ಕೆ ಕಾರಣವಾಗಿದೆ.

ವೈರಾಗ್ಯದ ನಡುವೆ ಸಿದ್ಧತೆ


ರಾಜಕೀಯದ ವೈರಾಗ್ಯದ ಮಾತುಗಳನ್ನು ಆಡುವ ಮೂಲಕ ಚುನಾವಣೆ ಕಣದಲ್ಲಿ ಉಳಿಯುವ ಬಗ್ಗೆ ಕಾರ್ಯಕರ್ತರಲ್ಲಿ ಗೊಂದಲ ಮೂಡಿಸಿದ್ದ ಹಾಲಿ ಸಂಸದ ಡಿ.ಕೆ.ಸುರೇಶ್, ಚುನಾವಣೆ ಹತ್ತಿರವಾಗುತ್ತಿದ್ದಂತೆ ಗ್ರಾಮೀಣ ಭಾಗದಲ್ಲಿ ಜನಸ್ಪಂದನಾ ಸಭೆ ನಡೆಸುವ ಮೂಲಕ ಎಲ್ಲ ಕಡೆಯೂ ತಲುಪುವ ಕೆಲಸ ಮಾಡುತ್ತಿದ್ದಾರೆ. ಕೆಲವು ತಿಂಗಳ ಹಿಂದೆ ರಾಜಕೀಯ ವ್ಯವಸ್ಥೆ ಬಗ್ಗೆ ಬೇಸರ ವ್ಯಕ್ತಪಡಿಸಿ ಡಿ.ಕೆ. ಸುರೇಶ್ ವೈರಾಗ್ಯದ ಮಾತನಾಡಿದ್ದರು. ಈಗ ಇದರಿಂದ ಹೊರ ಬಂದಂತೆ ಕಂಡಿರುವ ಅವರು, ಕಾಲಿಗೆ ಚಕ್ರ ಕಟ್ಟಿಕೊಂಡವರಂತೆ ಓಡಾಡುವ ಮೂಲಕ ಪಕ್ಷದ ಕಾರ್ಯಕರ್ತರನ್ನು ಚುನಾವಣೆಗೆ ಅಣಿಗೊಳಿಸುತ್ತಿದ್ದಾರೆ.

ಕೈ ಅಭ್ಯರ್ಥಿ ಯಾರು?

ಬೆಂಗಳೂರು ಗ್ರಾಮಾಂತರ ಲೋಕಸಭೆ ಕ್ಷೇತ್ರದ ಅಭ್ಯರ್ಥಿ ಆಯ್ಕೆ ಸಂಬಂಧ ಅಭಿಪ್ರಾಯ ಸಂಗ್ರಹಿಸುವ ಜವಾಬ್ದಾರಿಯನ್ನು ಪಶು ಸಂಗೋಪನಾ ಸಚಿವ ವೆಂಕಟೇಶ್ ಅವರಿಗೆ ಕೆಪಿಸಿಸಿ ನೀಡಿತ್ತು. ಆದರೆ ಇದುವರೆಗೂ ಒಂದೇ ಒಂದು ಸಭೆಯನ್ನು ನಡೆಸದಿರುವುದು ಡಿ.ಕೆ.ಸುರೇಶ್ ಅವರೇ ಮತ್ತೊಮ್ಮೆ ಕಣಕ್ಕೆ ಇಳಿಯುವುದನ್ನು ಖಾತ್ರಿ ಪಡಿಸಿದೆ. ಆದರೆ ಸಂಸದರ ವೈರಾಗ್ಯದ ಮಾತುಗಳು ಹೊರ ಬಂದಾಗಲೆಲ್ಲ ಕಳೆದ ವಿಧಾನಸಭೆ ಚುನಾವಣೆಯಲ್ಲಿ ರಾಜರಾಜೇಶ್ವರಿ ನಗರ ಕ್ಷೇತ್ರದಲ್ಲಿ ಸೋತಿದ್ದ ಕುಸುಮಾ ಹೆಸರು ಚಾಲ್ತಿಗೆ ಬಂದಿತ್ತು. ಸದ್ಯಕ್ಕೆ ಅವರ ಓಡಾಟ ಅವರ ಸ್ವಕ್ಷೇತ್ರ ಹೊರತುಪಡಿಸಿ ಉಳಿದೆಡೆ ಕಾಣುತ್ತಿಲ್ಲ.

ಮೈತ್ರಿ ಹುರಿಯಾಳು ಯಾರು?


ಬಿಜೆಪಿ - ಜೆಡಿಎಸ್ ಮೈತ್ರಿ ಅಂತಿಮಗೊಂಡಿದೆ. ಆದರೆ, ಸೀಟು ಹಂಚಿಕೆ ಗೊಂದಲ ಇನ್ನೂ ಮುಗಿದಿಲ್ಲ. ಇದರಿಂದಾಗಿ ಬೆಂಗಳೂರು ಗ್ರಾಮಾಂತರ ಲೋಕಸಭೆ ಕ್ಷೇತ್ರ ಯಾವ ಪಕ್ಷದ ಪಾಲಾಗಲಿದೆ ಎನ್ನುವುದು ಖಾತ್ರಿ ಆಗಿಲ್ಲ. ಇದರ ಹೊರತಾಗಿಯೂ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಮಾಜಿ ಸಚಿವ ಸಿ.ಪಿ.ಯೋಗೇಶ್ವರ್ ಅವರ ಹೆಸರು ಕ್ಷೇತ್ರದಲ್ಲಿ ಚಾಲ್ತಿಯಲ್ಲಿದೆ. ಆದರೆ, ಇಬ್ಬರಲ್ಲಿ ಯಾರು ಸ್ಪರ್ಧೆ ಮಾಡಬೇಕು ಎನ್ನುವ ಸಂಬಂಧ ಹಗ್ಗ ಜಗ್ಗಾಟ ನಡೆದಿದೆ. ಇಬ್ಬರೂ ಸ್ಪರ್ಧೆ ಬಗ್ಗೆ ಅಷ್ಟೊಂದು ಆಸಕ್ತಿ ತೋರುತ್ತಿಲ್ಲ ಎನ್ನುವುದು ಆಪ್ತ ವಲಯದ ಮಾತು. ಇದು ಕಾರ್ಯಕರ್ತರ ಆತಂಕಕ್ಕೂ ಕಾರಣವಾಗಿದೆ.

ಸೋಲಿಸಲು ತಂತ್ರ

2019ರ ಲೋಕಸಭೆ ಚುನಾವಣೆಯಲ್ಲಿ ರಾಜ್ಯದಿಂದ ಆಯ್ಕೆಗೊಂಡ ಏಕೈಕ ಕಾಂಗ್ರೆಸ್ ಸಂಸದ ಡಿ.ಕೆ.ಸುರೇಶ್. ಇದರ ಫಲವಾಗಿಯೇ ಅವರು ಕಾಂಗ್ರೆಸ್‌ನಲ್ಲಿ ಪ್ರಭಾವ ಹೆಚ್ಚಿಸಿಕೊಳ್ಳಲು ಸಾಧ್ಯವಾಗಿದೆ. ಈಗ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿ ಇದೆ. ಇದರ ಜತೆಗೆ ಕೆಪಿಸಿಸಿ ಅಧ್ಯಕ್ಷ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಸಹೋದರರಾದ ಡಿ.ಕೆ.ಸುರೇಶ್ ಅವರನ್ನು ಸೋಲಿಸಿದರೆ ಬಹುತೇಕ ಕಾಂಗ್ರೆಸ್ ಪಾಳಯಕ್ಕೆ ಬಿಸಿ ಮುಟ್ಟಿಸಿದಂತೆ ಎನ್ನುವ ಲೆಕ್ಕಾಚಾರದಲ್ಲಿರುವ ಸ್ಥಳೀಯ ಬಿಜೆಪಿ ಮತ್ತು ಜೆಡಿಎಸ್ ನಾಯಕರು ಇದಕ್ಕಾಗಿ ತಂತ್ರಗಾರಿಕೆಯಲ್ಲಿ ನಿರತರಾಗಿದ್ದಾರೆ. ಜೆೆೆಡಿಎಸ್ - ಬಿಜೆಪಿ ನಾಯಕರು ತಮ್ಮದೇ ರೀತಿ ವ್ಯಾಖ್ಯಾನ ಮಾಡುವ ಜತೆಗೆ ಕಾಂಗ್ರೆಸ್ ವಿರುದ್ಧ ಸಂಘಟಿತರಾಗಿ ಹೋರಾಟ ಮಾಡುವ ಮೂಲಕ ಕಾಂಗ್ರೆಸ್‌ಗೆ ಚಿಂತೆ ಹೆಚ್ಚಾಗುವಂತೆ ಮಾಡುತ್ತಿದ್ದಾರೆ.

ಬಿಜೆಪಿ ಸ್ಪರ್ಧಿಸಿದರೆ ಫೈಟ್


ಕ್ಷೇತ್ರದಿಂದ ಈ ಬಾರಿ ಕಾಂಗ್ರೆಸ್ ಪ್ರಬಲ ಎದುರಾಳಿ ಆಗುವ ಶಕ್ತಿ ಇರುವುದು ಬಿಜೆಪಿಗೆ ಮಾತ್ರ ಎನ್ನಲಾಗುತ್ತಿದೆ. ಕ್ಷೇತ್ರ ವ್ಯಾಪ್ತಿಯಲ್ಲಿ ಅತಿ ಹೆಚ್ಚು ಮತದಾರರನ್ನು ಹೊಂದಿರುವ ಬೆಂಗಳೂರು ದಕ್ಷಿಣ ವಿಧಾನಸಭೆ ಕ್ಷೇತ್ರ ಮತ್ತು ರಾಜರಾಜೇಶ್ವರಿ ನಗರ ಕ್ಷೇತ್ರಗಳು ಬಿಜೆಪಿ ತೆಕ್ಕೆಯಲ್ಲಿದ್ದರೆ, ಚನ್ನಪಟ್ಟಣದಲ್ಲಿಯೂ ಬಿಜೆಪಿ ಪ್ರಾಬಲ್ಯವಿದೆ. ಲೋಕಸಭೆ ಚುಣಾವಣೆ ಕಾರಣಕ್ಕೆ ಜನತೆ ಪ್ರಧಾನಿ ಮೋದಿಗಾಗಿಯೇ ಬಿಜೆಪಿಗೆ ಮತ ಹಾಕುತ್ತಾರೆ ಎನ್ನುವ ಲೆಕ್ಕಚಾರವೂ ಇದೆ.
ಇಷ್ಟೇ ಅಲ್ಲದೆ, ಚನ್ನಪಟ್ಟಣ ಹೊರತುಪಡಿಸಿ ಉಳಿದ 7 ವಿಧಾನಸಭೆ ಕ್ಷೇತ್ರಗಳಲ್ಲಿ 2ರಲ್ಲಿ ಬಿಜೆಪಿ ಇದ್ದರೆ, 5 ಕ್ಷೇತ್ರಗಳು ಕಾಂಗ್ರೆಸ್ ಪಾಲಾಗಿವೆ. ಇದರ ಹೊರತಾಗಿಯೂ ಜೆಡಿಎಸ್ ರಾಮನಗರ ಜಿಲ್ಲೆಯಲ್ಲಿ ಪ್ರಾಬಲ್ಯವಿರುವ ಕಾರಣ ಸುರೇಶ್ ಅವರನ್ನು ಸೋಲಿಸಬಹುದು ಎನ್ನುವ ಲೆಕ್ಕಾಚಾರವೂ ಇದೆ.

ಡಾ. ಮಂಜುನಾಥ್ ಸ್ಪರ್ಧಿಸುವರೇ?

ಇದೆಲ್ಲರದ ನಡುವೆ ಅಚ್ಚರಿ ಎನ್ನುವಂತೆ ಜಯದೇವ ಹೃದ್ರೋಗ ಸಂಸ್ಥೆಯ ನಿರ್ದೇಶಕರಾಗಿ ಜನ ಮಾನಸದಲ್ಲಿ ಉಳಿದುಕೊಂಡಿರುವ ನಿರ್ಗಮಿತ ನಿರ್ದೇಶಕ ಡಾ.ಸಿ.ಎನ್.ಮಂಜುನಾಥ್ ಅವರನ್ನು ಬೆಂಗಳೂರು ಗ್ರಾಮಾಂತರ ಲೋಕಸಭೆ ಕ್ಷೇತ್ರದಲ್ಲಿ ಬಿಜೆಪಿ - ಜೆಡಿಎಸ್ ಮೈತ್ರಿ ಅಭ್ಯರ್ಥಿ ಆಗಿ ಕಣಕ್ಕೆ ಇಳಿಸುವ ಸಂಬಂಧವೂ ಚರ್ಚೆಗಳು ನಡೆದಿವೆ. ಈ ಸಂಬಂಧ ಸಾಮಾಜಿಕ ಜಾಲತಾಣಗಳಲ್ಲಿ ಮಂಜುನಾಥ್ ಅವರೇ ಸೂಕ್ತ ಅಭ್ಯರ್ಥಿ ಎನ್ನುವ ರೀತಿಯಲ್ಲಿ ಪೋಸ್ಟ್ ಹಾಕುತ್ತಿದ್ದಾರೆ. ಆದರೆ ಮಾಜಿ ಪ್ರಧಾನಿ ಅಳಿಯರಾದರೂ ರಾಜಕಾರಣದಿಂದ ಬಹುತೇಕ ಅಂತರ ಕಾಯ್ದುಕೊಂಡು ಬಂದಿರುವ ಡಾ. ಸಿ.ಎನ್. ಮಂಜುನಾಥ್ ಅವರು ಕಣಕ್ಕೆ ಇಳಿಯುವರೇ ಎನ್ನುವುದೇ ದೊಡ್ಡ ಪ್ರಶ್ನೆ. ಒಂದು ವೇಳೆ ಅವರು ಕಣಕ್ಕೆ ಇಳಿಯಲು ಒಪ್ಪಿದರೆ ಅದು ಕಾಂಗ್ರೆಸ್ ಪಾಲಿಗೆ ಆಘಾತದ ಸುದ್ದಿ ಆಗುವುದರರಲ್ಲಿ ಅನುಮಾನವೇ ಇಲ್ಲ.