ಬೀರೂರು: ಪಟ್ಟಣದಲ್ಲಿ ಯುಜಿಡಿ ಸಮಸ್ಯೆಗೆ ಪರಿಹಾರವೇ ಇಲ್ಲದಂತಾಗಿದೆ. ಪ್ರತಿ ಮಳೆಗಾಲದಲ್ಲಿ ಕೊಳಚೆ ನೀರು ಮ್ಯಾನ್‌ಹೋಲ್‌ನಿಂದ ಉಕ್ಕಿಹರಿಯುತ್ತದೆ. ಮಳೆ ಜೋರಾದಾಗ ಯುಜಿಡಿ ನೀರು ಸೇರ್ಪಡೆಯಾಗಿ ಜನ ಅನಿವಾರ್ಯವಾಗಿ ಅದರಲ್ಲೇ ಓಡಾಡುವಂತಾಗಿದೆ.
ಪಟ್ಟಣದ ಲಿಂಗದಹಳ್ಳಿ ರಸ್ತೆಯಲ್ಲಿ ಯುಜಿಡಿ ಉಕ್ಕಿ ಹರಿಯುತ್ತಿದ್ದರೂ ಪುರಸಭೆ ಮಾತ್ರ ಗಮನಹರಿಸಿಲ್ಲ. ಕೇಂದ್ರ ಮತ್ತು ರಾಜ್ಯ ಸರ್ಕಾರದ ಸಹಯೋಗದಲ್ಲಿ ಒಳಚರಂಡಿ ಮಂಡಳಿ 2015ರಲ್ಲಿ 23.90 ಕೋಟಿ ರೂ. ವೆಚ್ಚದಲ್ಲಿ ಆರಂಭಿಸಿದ ಯುಜಿಡಿ ಕಾಮಗಾರಿ ಜನರಿಗೆ ಶಾಪವಾಗಿ ಪರಿಣಮಿಸಿದೆ.
ಯುಜಿಡಿ ಸಮಸ್ಯೆ ಒಂದು ರಸ್ತೆ ಅಥವಾ ಒಂದು ವಾರ್ಡ್‌ಗೆ ಸೀಮಿತವಾಗಿಲ್ಲ. ಯುಜಿಡಿ ಸಂಪರ್ಕ ಇರುವ ಎಲ್ಲ ವಾರ್ಡ್‌ಗಳಲ್ಲೂ ಏನಾದರೊಂದು ಸಮಸ್ಯೆ ಇದ್ದೇ ಇದೆ. ಇತ್ತೀಚೆಗಷ್ಟೆ ಅಜ್ಜಂಪುರ ರಸ್ತೆಯಲ್ಲಿದ್ದ 27 ಯುಜಿಡಿ ಮ್ಯಾನ್‌ಹೋಲ್‌ಗಳನ್ನು ಪುರಸಭೆ ಅನುದಾನದಲ್ಲಿ 16 ಲಕ್ಷ ರೂ. ವೆಚ್ಚದಲ್ಲಿ ದುರಸ್ತಿಪಡಿಸಿ ಕೊಳಚೆ ನೀರು ಸುಗಮವಾಗಿ ಹರಿಯಲು ಅನುವು ಮಾಡಿಕೊಟ್ಟಿತ್ತು.
ಮಾರ್ಗದಕ್ಯಾಂಪ್, ಅಶೋಕನಗರ, ಬಳ್ಳಾರಿ ಕ್ಯಾಂಪ್, ಹೊಸಳಮ್ಮ ಬಡಾವಣೆ, ಇಂದಿರಾನಗರ, ಉಪ್ಪಾರ ಕ್ಯಾಂಪ್ ಇತರ ಬಡಾವಣೆಗಳು ಪಟ್ಟಣಕ್ಕಿಂತಲೂ ಮೇಲ್ಭಾಗದಲ್ಲಿವೆ. ಇಲ್ಲಿಂದ ಹರಿದುಹೋದ ಕೊಳಚೆ ಅಜ್ಜಂಪುರ ರಸ್ತೆ ಮಾರ್ಗವಾಗಿ ಹರಿದು ಯಗಟಿ ರಸ್ತೆಯ ಟ್ರೀಟ್‌ಮೆಂಟ್ ಪ್ಲಾಂಟ್ ತಲುಪಬೇಕಿದೆ. ಆದರೆ ಸಮರ್ಪಕ ಪೈಪ್‌ಲೈನ್ ಆಗಿದೆಯೇ ಎನ್ನುವುದನ್ನು ಪರಿಶೀಲಿಸಬೇಕಿದೆ. ಏಕೆಂದರೆ ಈ ಮೊದಲೇ ಅಜ್ಜಂಪುರ ರಸ್ತೆಯಲ್ಲಿ ಯುಜಿಡಿ ಸಮಸ್ಯೆ ಉಂಟಾಗಿ ಇತ್ತೀಚೆಗಷ್ಟೆ ದುರಸ್ತಿ ಮಾಡಲಾಗಿದೆ. ಸದ್ಯ ಲಿಂಗದಹಳ್ಳಿ ರಸ್ತೆಯಲ್ಲಿ ಮ್ಯಾನ್‌ಹೋಲ್‌ಗಳು ಉಕ್ಕಿ ಹರಿಯುತ್ತಿವೆ.
ಪಟ್ಟಣದಲ್ಲಿ ಬಹಳಷ್ಟು ಜನರು ಯುಜಿಡಿ ಸಂಪರ್ಕ ಪಡೆದಿಲ್ಲ. ಸಾಕಷ್ಟು ಪ್ರದೇಶಗಳಲ್ಲಿ ಮ್ಯಾನ್‌ಹೋಲ್ ತುಂಬಿ ಹರಿಯುತ್ತಿರುವ ದೂರುಗಳು ವರದಿಯಾಗುತ್ತಲೇ ಇವೆ. ಪ್ರತಿ ಮಳೆಗಾಲದಲ್ಲಿಯೂ ಇಂಥ ಸಮಸ್ಯೆ ಎದುರಾಗುತ್ತಲೇ ಇದೆ. ಇನ್ನೂ ಎಲ್ಲ ಮನೆಗಳು ಯುಜಿಡಿ ಸಂಪರ್ಕ ಪಡೆದರೆ ನಿರ್ವಹಣೆ ಹೇಗೆ ಎನ್ನುವುದು ಪ್ರಶ್ನೆ. ಆದರೆ ಪುರಸಭೆ ಹೆಚ್ಚು ಗಮನಹರಿಸುತ್ತಿಲ್ಲ. ಈ ಬಗ್ಗೆ ಪುರಸಭೆ ಪರಿಸರ ಅಭಿಯಂತ ನೂರುದ್ದೀನ್ ಪ್ರತಿಕ್ರಿಯಿಸಿ, ಲಿಂಗದಹಳ್ಳಿ ರಸ್ತೆಯಲ್ಲಿ ಯುಜಿಡಿ ಸಮಸ್ಯೆ ಕುರಿತು ಮಾಹಿತಿ ಇರಲಿಲ್ಲ. ಪರಿಶೀಲನೆ ನಡೆಸುತ್ತೇನೆ ಎಂದು ಹೇಳಿದ್ದಾರೆ.