ಶಿಮ್ಲಾ: ಸಂಜೌಲಿಯಲ್ಲಿ ಮಸೀದಿಯೊಂದರ ಅನಧಿಕೃತ ಭಾಗವನ್ನು ನೆಲಸಮಗೊಳಿಸುವಂತೆ ಒತ್ತಾಯಿಸಿ ಪ್ರತಿಭಟಿಸುತ್ತಿದ್ದ ಪ್ರತಿಭಟನಾಕಾರರ ಮೇಲೆ ಪೊಲೀಸರ ಲಾಠಿ ಪ್ರಹಾರ ನಡೆಸಿದ ಕ್ರಮವನ್ನು ವಿರೋಧಿಸಿ ಹಿಮಾಚಲ ಪ್ರದೇಶದ ರಾಜಧಾನಿಯಲ್ಲಿ ಗುರುವಾರ ಮೂರು ಗಂಟೆಗಳ ಬಂದ್‌ಗೆ ಕರೆ ನೀಡಲಾಗಿತ್ತು. ಇದರಿಂದ ಅಂಗಡಿಗಳು ಮತ್ತು ವ್ಯಾಪಾರ ಸಂಸ್ಥೆಗಳು ಬಾಗಿಲುಮುಚ್ಚಿದ್ದವು.
ಶಿಮ್ಲಾದಲ್ಲಿ ಬಿಜೆಪಿಗೆ ಸಂಬಂಧಿಸಿದ ಶಿಮ್ಲಾ ಬೆಯೋಪರ್ ಮಂಡಲ್ ಬೆಳಗ್ಗೆ 10 ರಿಂದ ಮಧ್ಯಾಹ್ನ 1ರವರೆಗೆ ಬಂದ್‌ಗೆ ಕರೆ ನೀಡಲಾಗಿತ್ತು. ಪ್ರತಿಭಟನಾಕಾರರು ಜಿಲ್ಲಾಧಿಕಾರಿ ಕಚೇರಿವರೆಗೆ ಮೆರವಣಿಗೆ ಮಾಡಿ, ಪ್ರತಿಭಟಿಸಿದರು. ವರ್ತಕರ ಸಂಘಟನೆಯ ಅಧ್ಯಕ್ಷ ಸಂಜೀವ್ ಠಾಕೂರ್, ಬಂದ್ ಸಂಪೂರ್ಣ ಮತ್ತು ಶಾಂತಿಯುತವಾಗಿದೆ ಎಂದು ಹೇಳಿದ್ದಾರೆ.
ಇದೇ ವೇಳೆ ಮಂಡಿ ಪಟ್ಟಣದ ಜೈಲ್ ರಸ್ತೆಯಲ್ಲಿರುವ ಮಸೀದಿಯ ಅನಧಿಕೃತ ಭಾಗವನ್ನು ಮುಸ್ಲಿಂ ಸಮುದಾಯದವರೇ ಕೆಡವಿದ್ದಾರೆ. ಈ ಮಧ್ಯೆ ಮಂಡಿಯಲ್ಲಿರುವ ಮಸೀದಿಯನ್ನು ಮುಸ್ಲಿಂ ಸಮುದಾಯದವರು ಕೆಡವಿದ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿವೆ.
ಮಸೀದಿ ಲೋಕೋಪಯೋಗಿ ಇಲಾಖೆಗೆ ಸೇರಿದ ಜಾಗದಲ್ಲಿ ನಿರ್ಮಾಣವಾಗಿತ್ತು. ಈ ಬಗ್ಗೆ ಪಿಡಬ್ಲ್ಯುಡಿ ಮತ್ತು ಮುನ್ಸಿಪಲ್ ಕಾರ್ಪೊರೇಷನ್ ಎರಡೂ ಮಸೀದಿ ಆಡಳಿತಕ್ಕೆ ನೋಟಿಸ್ ನೀಡಿದ್ದವು.
ಮಸೀದಿಯ ಗೋಡೆಯು ಪಿಡಬ್ಲ್ಯುಡಿ ಜಮೀನಿನಲ್ಲಿದೆ ಎಂದು ಆಕ್ಷೇಪಿಸಿ ಅಧಿಕಾರಿಗಳು ನೋಟಿಸ್ ನೀಡಿದ್ದರು, ಹಾಗಾಗಿ ನಾವು ಗೋಡೆಯನ್ನು ನೆಲಸಮಗೊಳಿಸಲು ನಿರ್ಧರಿಸಿದೆವು. ನಿಯಮ ಪಾಲನೆಗೆ ನಾವು ಬದ್ಧವಾಗಿದ್ದು, ಎಲ್ಲರೊಂದಿಗೆ ಭ್ರಾತೃತ್ವ ಬಯಸುತ್ತೇವೆ ಎಂದು ಮಸೀದಿ ಸಮಿತಿ ಸದಸ್ಯ ಇಕ್ಬಾಲ್ ಅಲಿ ಹೇಳಿದರು.
ರಾಜ್ಯದ ಹೊರಗಿನಿಂದ ಹಿಮಾಚಲ ಪ್ರದೇಶಕ್ಕೆ ಬರುವ ಜನರ ದಾಖಲಾತಿಗಳನ್ನು ಪರಿಶೀಲಿಸಬೇಕು ಎಂದು ಬಿಜೆಪಿಯ ಮಾಜಿ ಸಚಿವ ಸುರೇಶ್ ಭಾರದ್ವಾಜ್ ಆಗ್ರಹಿಸಿದ್ದರು.
ಬಂದ್ ವೇಳೆ ಬ್ಯಾರಿಕೇಡ್‌ಗಳನ್ನು ಮುರಿದ ನಂತರ ಹಿಂದೂ ಗುಂಪುಗಳ ಪ್ರತಿಭಟನಾಕಾರರ ಮೇಲೆ ಪೊಲೀಸರು ಎರಡು ಬಾರಿ ಲಾಠಿ ಚಾರ್ಜ್ ನಡೆಸಿದ್ದಾರೆ. ಪ್ರತಿಭಟನಕಾರರನ್ನು ಚದುರಿಸಲು ಜಲ ಫಿರಂಗಿಗಳನ್ನು ಬಳಸಿದ್ದರು. ಪ್ರತಿಭಟನಕಾರರು ಮತ್ತು ಪೊಲೀಸರ ಘರ್ಷಣೆಯಲ್ಲಿ ಆರು ಪೊಲೀಸ್ ಸಿಬ್ಬಂದಿ ಸೇರಿದಂತೆ ಹತ್ತು ಮಂದಿ ಗಾಯಗೊಂಡಿದ್ದಾರೆ.