ನ್ಯೂಸ್

ಯುರೋಪಿಯನ್​ ರಾಷ್ಟ್ರಗಳಲ್ಲಿ ಲಾಕ್​ಡೌನ್​ 'ಔಟ್​' ಆಗಿದ್ದೇಕೆ? ಬೀದಿಗಿಳಿದು ವ್ಯಾಪಾರ- ವಹಿವಾಟು ನಡೆಸುತ್ತಿರುವ ಜನರು

ಲಂಡನ್​: ಚೀನಾ ಬಳಿಕ ಕರೊನಾದ ಹಾಟ್​​ಸ್ಪಾಟ್​ ಆಗಿದ್ದು, ಯುರೋಪಿಯನ್​ ದೇಶಗಳು. ಕೆಲವೇ ದಿನಗಳಲ್ಲಿ ಚೀನಾವನ್ನು ಮೀರಿಸಿದ ಮಟ್ಟದಲ್ಲಿ ಇಟಲಿಯನ್ನು ಕರೊನಾ ಆವರಿಸಿತು. ನಂತರ ಸ್ಪೇನ್​, ಫ್ರಾನ್ಸ್​, ಜರ್ಮನಿ, ಬ್ರಿಟನ್​, ಆಸ್ಟ್ರಿಯಾಗಳನ್ನು ಆವರಿಸಿತು. ಬಹುತೇಕ ಯುರೋಪ್​ನ ಎಲ್ಲ ರಾಷ್ಟ್ರಗಳಲ್ಲಿ ಚೀನಾಕ್ಕಿಂತಲೂ ಅಧಿಕ ಪ್ರಮಾಣದಲ್ಲಿ ಕರೊನಾದಿಂದಾಗಿ ಸಾವು ಸಂಭವಿಸಿದವು. ಲಕ್ಷಾಂತರ ಜನರಿಗೆ ಸೋಂಕು ವ್ಯಾಪಿಸಿತು.

ಪ್ರಸ್ತುತ ಭಾರತದಲ್ಲಿ ಲಾಕ್​ಡೌನ್​ ಮೇ 3ರವರೆಗೆ ಮುಂದುವರಿದಿದೆ. ಆದರೆ, ಯುರೋಪಿಯನ್ ರಾಷ್ಟ್ರಗಳಲ್ಲಿ ಪರಿಸ್ಥಿತಿ ಹೇಗಿದೆ ಗೊತ್ತೆ?

ಯುರೋಪ್​ನ ಬಹುತೇಕ ರಾಷ್ಟ್ರಗಳಲ್ಲಿ ಲಾಕ್​ಡೌನ್​ "ಔಟ್"​ ಆಗಿದೆ. ಹೌದು ಅಲ್ಲೀಗ ಜನ ಸಂಚಾರಕ್ಕೆ ಮುಕ್ತ ಅವಕಾಶ ಕಲ್ಪಿಸಲಾಗಿದೆ. ಸ್ಪೇನ್​, ಇಟಲಿ, ಆಸ್ಟ್ರಿಯಾಗಳು ಕರೊನಾ ನಿರ್ಬಂಧಗಳನ್ನು ತೆರವುಗೊಳಿಸುವಲ್ಲಿ ಹಲವು ಕ್ರಮಗಳನ್ನು ಕೈಗೊಂಡಿವೆ.

ಕಳೆದ 25 ದಿನಗಳ ಅವಧಿಯಲ್ಲಿ ಹೊಸ ಸೋಂಕಿತ ಪ್ರಕರಣಗಳ ಸಂಖ್ಯೆ ಇಲ್ಲಿ ಗಣನಿಯವಾಗಿ ಇಳಿಮುಖವಾಗಿದೆ. ಸಾವುಗಳ ಸಂಖ್ಯೆಯೂ ಕಡಿಮೆಯಾಗಿದೆ. ಜತೆಗೆ ಕುಸಿದಿರುವ ಆರ್ಥಿಕ ವ್ಯವಸ್ಥೆಯನ್ನು ಹಳಿಗೆ ತರಬೇಕಿದೆ. ಈ ಎಲ್ಲ ಕಾರಣದಿಂದಾಗಿ ಇಲ್ಲಿ ನಿರ್ಬಂಧಗಳನ್ನು ಸಡಿಲಿಸಲಾಗುತ್ತಿದೆ.

ಯುರೋಪಿನ ರಾಷ್ಟ್ರಗಳಲ್ಲಿ ವ್ಯಾಪಾರ-ವಹಿವಾಟು ಆರಂಭಕ್ಕೆ ಅನುಮತಿ ನೀಡಲಾಗಿದೆ. ಸ್ಪೇನ್​ನಲ್ಲಿ ಅತ್ಯಾವಶ್ಯಕವಲ್ಲದ ಸೇವೆಗಳನ್ನು ಅಥವಾ ಉದ್ಯೋಗಳ ಆರಂಭಕ್ಕೆ ಸರ್ಕಾರ ಅನುಮತಿ ನೀಡಿದೆ. ಅಲ್ಲಿನ ಜನಜೀವನ ಸಹಜವಾಗಿ ಸಹಜ ಸ್ಥಿತಿಗೆ ಮರಳುತ್ತಿದೆ. ಕಾರ್ಖಾನೆಗಳನ್ನು ಆರಂಭಿಸಲು ಅಲ್ಲಿನ ಸರ್ಕಾರ ಅನುಮತಿಸಿದೆ. ಜತೆಗೆ ಮೆಟ್ರೋ ರೈಲುಗಳ ಸಂಚಾರ ಶುರುವಾಗಿದೆ.

ಜರ್ಮನಿಯಲ್ಲಿ ಶಾಲಾ- ಕಾಲೇಜುಗಳನ್ನು ಸೋಮವಾರದಿಂದ ಆರಂಭಿಸಲು ಚಿಂತನೆ ನಡೆಸಲಾಗಿದೆ. ಇಟಲಿಯಲ್ಲೂ ಶೈಕ್ಷಣಿಕ ಚಟುವಟಿಕೆಗಳು ಚಾಲನೆ ಪಡೆದಿವೆ. ಅಲ್ಲೀಗ ಶಾಲೆ ಹಾಗೂ ಡೇ ಕೇರ್​ಗಳು ಆರಂಭವಾಗಿವೆ.

ಆದರೆ, ಫ್ರಾನ್ಸ್​ನಲ್ಲಿ ಮೇ 11ರವರೆಗೆ ಲಾಕ್​ಡೌನ್​ ಮುಂದುವರಿಯಲಿದೆ ಎಂದು ಅಧ್ಯಕ್ಷ ಇಮ್ಯಾನುವೆಲ್​ ಮ್ಯಾಕ್ರಾನ್​ ಘೋಷಣೆ ಮಾಡಿದ್ದಾರೆ.

ವಿದೇಶ