ಎನ್‌ಇಎಸ್ ಇನ್‌ಸ್ಟಿಟ್ಯೂಟ್ ಆಫ್ ಅಡ್ವಾನ್ಸ್ಡ್ ಸ್ಟಡೀಸ್‌ನಿಂದ ಏರ್ಪಡಿಸಿದ್ದ ಓರಿಯಂಟೇಷನ್ ಕಾರ್ಯಕ್ರಮವನ್ನು ನ್ಯಾಯಾಧೀಶ ಎಂ.ಎಸ್.ಸಂತೋಷ್ ಉದ್ಘಾಟಿಸಿದರು. ಎಸ್.ಎನ್.ನಾಗರಾಜ, ಡಾ. ಬಿ.ಎಸ್.ಶಿವಪ್ರಸಾದ್, ಡಾ. ಭರತ್, ರಾಮ್‌ಪ್ರಸಾದ್ ಇದ್ದರು. 
ನ್ಯೂಸ್

ಉತ್ತಮ ವ್ಯಕ್ತಿತ್ವಗಳಿಂದ ಸ್ಫೂರ್ತಿ ಪಡೆಯಿರಿ

ಅರವಿಂದ ಅಕ್ಲಾಪುರ

ಶಿವಮೊಗ್ಗ: ಸಮಾಜದಲ್ಲಿರುವ ಉತ್ತಮ ವ್ಯಕ್ತಿತ್ವಗಳಿಂದ ಯುವ ಸಮೂಹ ಸ್ಫೂರ್ತಿ ಪಡೆಯಬೇಕು ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ಎಂ.ಎಸ್.ಸಂತೋಷ್ ಹೇಳಿದರು.

ನಗರದ ಎನ್‌ಇಎಸ್ ಇನ್‌ಸ್ಟಿಟ್ಯೂಟ್ ಆಫ್ ಅಡ್ವಾನ್ಸ್ಡ್ ಸ್ಟಡೀಸ್‌ನಿಂದ ಪ್ರಥಮ ವರ್ಷದ ಬಿಕಾಂ, ಬಿಬಿಎ, ಬಿಸಿಎ ವಿದ್ಯಾರ್ಥಿಗಳಿಗೆ ಏರ್ಪಡಿಸಿದ್ದ ಓರಿಯಂಟೇಷನ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ವಿದ್ಯಾರ್ಥಿ ಜೀವನದಲ್ಲಿ ಆಕರ್ಷಣೆ ಸಹಜ. ಆದರೆ ನಮ್ಮ ಮನಸ್ಸು ಸದಭಿರುಚಿಯತ್ತ ಆಕರ್ಷಿತವಾಗಬೇಕು ಎಂದು ತಿಳಿಸಿದರು.

ಆಧುನಿಕ ಕಾಲದಲ್ಲಿ ಕೆಟ್ಟ ಆಕರ್ಷಣೆಗಳಿಗೆ ಒಳಗಾಗಲು ಅನೇಕ ಅವಕಾಶಗಳಿವೆ. ಅಂತಹ ಆಕರ್ಷಣೆ ಭರದಲ್ಲಿ ಪಾಲಕರ ಕಿವಿಮಾತುಗಳು ಸ್ವಾತಂತ್ರೃ ಹರಣವಾಗುತ್ತಿದೆ ಎಂಬ ಭಾವನೆ ಮೂಡುತ್ತದೆ. ಇದರ ಬದಲು ವಿದ್ಯಾರ್ಥಿಗಳು ಪಾಲಕರು ಮತ್ತು ಶಿಕ್ಷಕರ ಅನುಭವದ ಮಾತಿಗೆ ಮನ್ನಣೆ ನೀಡಬೇಕು ಎಂದರು.

ಎನ್‌ಇಎಸ್ ಕಾರ್ಯದರ್ಶಿ ಎಸ್.ಎನ್.ನಾಗರಾಜ ಮಾತನಾಡಿ, ನಮ್ಮ ಸಂಸ್ಕೃತಿ, ಸಂಸ್ಕಾರವನ್ನು ಕಾಪಾಡುವ ಹೊಣೆ ಯುವ ಸಮೂಹದ ಮೇಲಿದೆ. ಶಿಕ್ಷಕರು ಶಾಲೆಯಲ್ಲಿ, ಪಾಲಕರು ಮನೆಯಲ್ಲಿ ವಿದ್ಯಾರ್ಥಿಗಳ ಮೇಲೆ ನಿಗಾವಹಿಸಬೇಕು ಎಂದು ತಿಳಿಸಿದರು.

ವೈದ್ಯೆ ಡಾ. ರಕ್ಷಾ ರಾವ್ ಮಾತನಾಡಿ, ಪದವಿ ಶಿಕ್ಷಣವು ಯುವ ಸಮೂಹದಲ್ಲಿ ಹೊಸತನದ ಜವಾಬ್ದಾರಿ ಮೂಡಿಸುತ್ತದೆ. ಆ ಹಂತದಲ್ಲಿ ಆಲೋಚನಾ ಪ್ರೌಢಿಮೆ ಹೆಚ್ಚಾಗಬೇಕು. ಒತ್ತಡಗಳನ್ನು ಸಮರ್ಥವಾಗಿ ನಿರ್ವಹಿಸಬೇಕು. ಉತ್ತಮ ಹವ್ಯಾಸಗಳನ್ನು ರೂಡಿಸಿಕೊಳ್ಳಬೇಕು ಎಂದರು.

ಪ್ರಾಚಾರ್ಯ ಡಾ. ಬಿ.ಎಸ್.ಶಿವಪ್ರಸಾದ್, ಎನ್‌ಇಎಸ್ ಆಜೀವ ಸದಸ್ಯರಾದ ಡಾ. ಭರತ್, ರಾಮಪ್ರಸಾದ್ ಉಪಸ್ಥಿತರಿದ್ದರು.