ಗೋವಿಂದರಾಜು ಚಿನ್ನಕುರ್ಚಿ ಬೆಂಗಳೂರು
ರಾಜ್ಯದಲ್ಲಿ ಸೂಕ್ಷ್ಮ ಮತ್ತು ಗಂಭೀರ ಪ್ರಕರಣಗಳ ತನಿಖೆಗೆ ಸಿಬಿಐ ಸ್ಪರ್ಶ ನೀಡಿರುವ ಅಪರಾಧ ತನಿಖಾ ವಿಭಾಗ (ಸಿಐಡಿ), ಇದೀಗ ಪ್ರಕರಣಗಳಲ್ಲಿ ಶಿಕ್ಷೆಯ ಪ್ರಮಾಣ ಸುಧಾರಿಸಲು ಮಾಸ್ಟರ್‌ಪ್ಲಾನ್ ಮಾಡಿದೆ. ನ್ಯಾಯಾಲಯದಲ್ಲಿ ವಿಚಾರಣಾ ಹಂತದಲ್ಲಿರುವ ಪ್ರಕರಣಗಳ ಮೇಲ್ವಿಚಾರಣೆ ಮತ್ತು ಪಬ್ಲಿಕ್ ಪ್ರಾಸಿಕ್ಯೂಟರ್‌ಗಳಿಗೆ ಸಹಾಯಕ್ಕೆ ಟ್ರಯಲ್ ಮಾನಿಟರಿಂಗ್ ಸೆಲ್ (ಟಿಎಂಸಿ) ತೆರೆದು ಡಿಐಜಿಪಿ ದರ್ಜೆ ಅಧಿಕಾರಿಯನ್ನು ನೇಮಿಸಿದೆ. ಇವರು ಡೆಪ್ಯೂಟಿ ಡೈರೆಕ್ಟರ್ ಆ್ ಪ್ರಾಸಿಕ್ಯೂಟರ್ (ಡಿಡಿಪಿ) ಜತೆ ಸಮನ್ವಯತೆ ಸಾಧಿಸಲಿದ್ದಾರೆ.
ಸಿಐಡಿಯಲ್ಲಿ ಹಣಕಾಸು ಆರ್ಥಿಕ ಅಪರಾಧ, ಸೈಬರ್ ಅಪರಾಧ, ಇಂಟರ್‌ಪೋಲ್- ಟೆಕ್ನಿಕಲ್ ಸಪೋರ್ಟ್, ಮಾನವ ಕಳ್ಳಸಾಗಣೆ ನಿಗ್ರಹ ಘಟಕ, ಖೋಟಾ ನೋಟು, ಮಾದಕ ವಸ್ತು ತಡೆ ವಿಭಾಗ, ಅರಣ್ಯ ಘಟಕಗಳು ಮತ್ತು ಹೊಸದಾಗಿ ಕ್ರಿಮಿನಲ್ ಇಂಟಲಿಜೆನ್ಸ್ ವಿಭಾಗ ತೆರೆಯಲಾಗಿದೆ. ಈ ಎಲ್ಲ ವಿಭಾಗಗಳಿಗೆ ಟಿಎಂಸಿಯ ಓರ್ವ ಇನ್‌ಸ್ಪೆಕ್ಟರ್‌ನನ್ನು ನೇಮಿಸಲಾಗಿದೆ.
ತನಿಖಾಧಿಕಾರಿಗಳು ನ್ಯಾಯಾಲಯಕ್ಕೆ ಆರೋಪಪಟ್ಟಿ ಸಲ್ಲಿಸಿದ ಬಳಿಕ ಕೋರ್ಟ್‌ನಲ್ಲಿ ವಿಚಾರಣೆಯ ಮೇಲ್ವಿಚಾರಣೆಯನ್ನು ಟಿಎಂಸಿ ಇನ್‌ಸ್ಪೆಕ್ಟರ್ ವಹಿಸಿಕೊಳ್ಳಲಿದ್ದಾರೆ. ಕೋರ್ಟ್‌ನಲ್ಲಿ ಯಾವ ಕೇಸು ಯಾವ ಹಂತದಲ್ಲಿದೆ, ಸರಿಯಾದ ಸಮಯಕ್ಕೆ ಸಾಕ್ಷಿದಾರ, ತನಿಖಾಧಿಕಾರಿಗಳನ್ನು ಕೋರ್ಟ್‌ಗೆ ಹಾಜರು ಆಗುವಂತೆ ನೋಡಿಕೊಳ್ಳುವುದು ಮತ್ತು ಪಬ್ಲಿಕ್ ಪ್ರಾಸಿಕ್ಯೂಟರ್‌ಗೆ ಅಗತ್ಯವಿರುವ ದಾಖಲೆ ಮತ್ತು ಸಾಕ್ಷಾೃಧಾರ ಒದಗಿಸುವ ಕೆಲಸವನ್ನು ನಿರ್ವಹಿಸುತ್ತಿದ್ದಾರೆ.
ಅಪರಾಧ ನ್ಯಾಯ ವ್ಯವಸ್ಥೆಯಲ್ಲಿ ಮೂರು ಮುಖ್ಯ ಸ್ತಂಭಗಳಾದ ಪೊಲೀಸ್, ಪ್ರಾಸಿಕ್ಯೂಷನ್ ಮತ್ತು ಕೋರ್ಟ್‌ಗಳ ನಡುವಿನ ಸಮನ್ವಯತೆ ಮುಖ್ಯವಾಗಿದೆ. ಅಪರಾಧ ಪ್ರಕರಣಗಳ ತನಿಖೆಯನ್ನು ಎಷ್ಟೇ ಉತ್ತಮ ರೀತಿಯಲ್ಲಿ ಮಾಡಿದರೂ, ನ್ಯಾಯಾಲಯದಲ್ಲಿ ವಿಚಾರಣೆ ವೇಳೆ ಉತ್ತಮ ಪ್ರಾಸಿಕ್ಯೂಷನ್ ಸಹ ನಡೆಯಬೇಕಿದೆ. ಇದರಿಂದ ಮಾತ್ರ ಅಪರಾಧ ಪ್ರಕರಣಗಳಲ್ಲಿ ಶಿಕ್ಷೆಯ ಪ್ರಮಾಣ ಸುಧಾರಿಸಲಿದೆ. ಕೋರ್ಟ್‌ಗಳಲ್ಲಿ ಕಾನೂನು ಕ್ರಮವನ್ನು ಮೇಲ್ವಿಚಾರಣೆ ಮಾಡದಿದ್ದರೆ ಎಷ್ಟೇ ಉತ್ತಮ ತನಿಖೆ ನಡೆಸಿದ್ದರೂ ಪ್ರಯೋಜನ ಆಗುವುದಿಲ್ಲ.
ಅದರಲ್ಲಿಯೂ ಸಿಐಡಿ ರಾಜ್ಯದಲ್ಲಿ ನಡೆಯುವ ಪ್ರಮುಖ, ಸೂಕ್ಷ್ಮ, ಆರ್ಥಿಕ, ಹಣಕಾಸು ಮತ್ತು ಸೈಬರ್ ಅಪರಾಧ ಪ್ರಕರಣಗಳ ತನಿಖೆಯನ್ನು ನಡೆಸಲಿದೆ. ಆದರಿಂದ ನ್ಯಾಯಾಲಯಕ್ಕೆ ಅಗತ್ಯ ಇರುವ ಸಾಕ್ಷಾೃಧಾರ ಮತ್ತು ಹೇಳಿಕೆಗಳನ್ನು ಕಾಲಕಾಲಕ್ಕೆ ಒದಗಿಸಲು ಟ್ರಯಲ್ ಮಾನಿಟರಿಂಗ್ ಸೆಲ್ ತೆರೆಯಲಾಗಿದೆ. ಇದನ್ನು ಡಿಐಜಿಪಿ ದರ್ಜೆ ಅಧಿಕಾರಿ ಮೇಲ್ವಿಚಾರಣೆಯಲ್ಲಿ ಉಪನಿರ್ದೇಶಕ ಆಫ್ ಪ್ರಾಸಿಕ್ಯೂಷನ್ (ಡಿಡಿಪಿ) ಅವರಿಗೆ ಸಹಾಯ ಮಾಡಲಿದ್ದಾರೆ.
ಪ್ರತಿವಾರ ಟಿಎಂಸಿ ಸಭೆ ನಡೆಯಲಿದ್ದು, ಕೋರ್ಟ್‌ನಲ್ಲಿ ಬಾಕಿರುವ ಪ್ರತಿಯೊಂದು ಪ್ರಕರಣಗಳ ಕುರಿತು ಚರ್ಚೆ ನಡೆಯಲಿದೆ. ಸಿಐಡಿಯ ಎಸ್‌ಪಿ ಮತ್ತು ಕಾನೂನು ಸಲಹೆಗಾರರು ತಲಾ 3 ಪ್ರಕರಣಗಳನ್ನು ಸೂಕ್ಷ್ಮವಾಗಿ ಮೇಲ್ವಿಚಾರಣೆ ಮಾಡಲಿದ್ದಾರೆ. ಅಲ್ಲದೆ, ತನಿಖಾ ಅಧಿಕಾರಿಗಳು ತಲಾ 2 ಪ್ರಕರಣಗಳನ್ನು ನಿರ್ವಹಿಸಲಿದ್ದು, ಕೋರ್ಟ್‌ನಲ್ಲಿ ನಿಗದಿತ ಸಮಯದಲ್ಲಿ ವಿಚಾರಣೆ ಪೂರ್ಣ ಆಗುವಂತೆ ಅಗತ್ಯ ಕ್ರಮಗಳನ್ನು ಟಿಎಂಸಿ ತಂಡ ನಿರ್ವಹಿಸಲಿದೆ.
ತಡೆಯಾಜ್ಞೆ ತೆರವಿಗೆ ವಿಶೇಷ ಕ್ರಮ
ಸುಪ್ರೀಂಕೋರ್ಟ್, ಹೈಕೋರ್ಟ್ ಸೇರಿ ವಿವಿಧ ಕೋರ್ಟ್‌ನಲ್ಲಿ ತಡೆಯಾಜ್ಞೆ ಇರುವ ಸಿಐಡಿ ಪ್ರಕರಣಗಳಿಗೆ ವಿಶೇಷ ಗಮನ ನೀಡುವ ವ್ಯವಸ್ಥೆ ಮಾಡಲಾಗಿದೆ. ಈ ನಿಟ್ಟಿನಲ್ಲಿ ಡಿಡಿಪಿ ಅವರನ್ನು ನೋಡಲ್ ಅಧಿಕಾರಿಯನ್ನಾಗಿ ನೇಮಿಸಿದ್ದು, ಇವರು ಅಡ್ವೊಕೇಟ್ ಜನರಲ್ ಕಚೇರಿಯೊಂದಿಗೆ ಸಂಪರ್ಕ ಸಾಧಿಸುತ್ತಾರೆ. ಮತ್ತೊಂದೆಡೆ ತನಿಖಾಧಿಕಾರಿಗಳು ತಡೆಯಾಜ್ಞೆಯನ್ನು ತೆರವು ಮಾಡಲು ಮೇಲ್ಮನವಿ ಮತ್ತು ರಿಟ್ ಅರ್ಜಿಗಳನ್ನು ಸಲ್ಲಿಸಲು ಗಮನಹರಿಸುತ್ತಾರೆ. ಜತೆಗೆ ಸಿಐಡಿಯ ಸರ್ಕಾರಿ ವಕೀಲರು ಮತ್ತು ಪ್ರಾಸಿಕ್ಯೂಟರ್‌ಗಳೊಂದಿಗೆ ನಿಕಟ ಸಮನ್ವಯ ಸಾಧಿಸಲಿದ್ದಾರೆ.
ಸಿಐಡಿಯಲ್ಲಿ ತನಿಖೆಯ ವೇಗ ಹೆಚ್ಚಳದ ಅಂಕಿ-ಅಂಶ:
-------------------------------------------
ವಿಭಾಗದ ಹೆಸರು ಜೂನ್-2023 ಮಾರ್ಚ್ 2024
-------------------------------------------
ಕ್ರಿಮಿನಲ್ ಇಂಟೆಲಿಜೆನ್ಸ್ ಯುನಿಟ್ 36 31
ಸೈಬರ್ ಅಪರಾಧ 109 74
ಮಾನವ ಕಳ್ಳಸಾಗಾಣಿಕೆ ವಿರೋಧಿ ಘಟಕ 67 22
ಆರ್ಥಿಕ ಅಪರಾಧ 143 58
ವಿಶೇಷ ವಿಚಾರಣೆ 151 81
ನರಹತ್ಯೆ ಮತ್ತು ಚೌರ‌್ಯ 31 33
ಡಿಎಫ್ ಐಡಿ 213 77
ಫೈನಾನ್ಶಿಯಲ್ ಇಂಟೆಲಿಜೆನ್ಸ್ 76 72
ಖೋಟಾ ನೋಟು, ಮಾದಕವಸ್ತು, ಶಿಲ್ಪ ವಿಭಾಗ 17 15
------------------------------------------------
ಒಟ್ಟು 843 463
ವರ್ಷದ ಮೊದಲ ಮೂರು ತಿಂಗಳಲ್ಲಿ ಕೋರ್ಟ್‌ಗಳಲ್ಲಿನ 8 ಪ್ರಕರಣಗಳ ವಿಚಾರಣೆ ಪೂರ್ಣವಾಗಿದ್ದು, ನಾಲ್ಕರಲ್ಲಿ ಅಪರಾಧಿಗಳಿಗೆ ಶಿಕ್ಷೆಯಾಗಿದೆ. ಟಿಎಂಸಿ ರಚನೆಯಿಂದ ಶಿಕ್ಷೆ ಪ್ರಮಾಣದಲ್ಲಿ ಸುಧಾರಣೆ ಕಾಣುತ್ತಿದೆ.
|ಡಾ. ಎಂ.ಎ. ಸಲೀಂ, ಸಿಐಡಿ, ಡಿಜಿಪಿ