ಬೆಂಗಳೂರು: ಗ್ರಾಮೀಣಾಭಿವೃದ್ಧಿ ಅಧಿಕಾರಿ(ಪಿಡಿಒ)ಗಳ ಸಮಸ್ಯೆ ಪರಿಹಾರಕ್ಕೆ ಸರ್ಕಾರ ಮುಂದಾಗಿದೆ. ಅವರ ಸೇವಾ ನಿರ್ವಹಣೆ ಬಗ್ಗೆ ಪ್ರಮುಖ ಪ್ರಾಧಿಕಾರ ರಚಿಸಿ ಆದೇಶ ಹೊರಡಿಸಿದೆ.
ಪಿಡಿಒಗಳಿಗೆ ಲಘು ಮತ್ತು ಕಠಿಣ ದಂಡನೆ ವಿಧಿಸಲು, ಕಾಲಬದ್ಧ ವೇತನ ಬಡ್ತಿ ಮಂಜೂರಾತಿ, ಪರೀಕ್ಷಾರ್ಥ ಅವಧಿ ಘೋಷಣೆ ಮತ್ತು ಸೇವಾ ವಿಷಯ ನಿರ್ವಹಣೆ ಮಾಡಲು ಪ್ರಾಧಿಕಾರ ರಚಿಸಲಾಗಿದೆ. ಗ್ರಾಮೀಣಾಭಿವೃದ್ಧಿ ಆಯುಕ್ತಾಲಯದ ಆಯುಕ್ತರು ಪ್ರಾಧಿಕಾರಿ ಆಗಿರುತ್ತಾರೆ.
ಹಿರಿಯ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಹುದ್ದೆಗಳನ್ನು ರಾಜ್ಯ ವೃಂದವನ್ನಾಗಿ ಪರಿಗಣಿಸಿ, ಸರ್ಕಾರವನ್ನು ನೇಮಕಾತಿ ಮತ್ತು ಶಿಸ್ತು ಪ್ರಾಧಿಕಾರವನ್ನಾಗಿ ಮತ್ತು ಪಂಚಾಯತಿ ಅಭಿವೃದ್ಧಿ ಅಧಿಕಾರಿ ಹುದ್ದೆಗಳನ್ನು ರಾಜ್ಯ ವೃಂದವನ್ನಾಗಿ ಪರಿಗಣಿಸಿಪಂಚಾಯತ್ ರಾಜ್ ಇಲಾಖೆ ಆಯುಕ್ತರನ್ನು ನೇಮಕಾತಿ ಮತ್ತು ಶಿಸ್ತು ಪ್ರಾಧಿಕಾರವನ್ನಾಗಿ ನೇಮಿಸಲಾಗಿದೆ.
ಸೇವಾ ವಿಷಯ, ಕಾಯಂ ಪೂರ್ವ ಅವಧಿ ಘೋಷಣೆ, ಬಡ್ತಿ, ಮನೆ/ ನಿವೇಶನ/ ವಾಹನ ಖರೀದಿಗೆ ಅನುಮತಿ, ಸಾಲ ಮಂಜೂರಾತಿಗೆ ಒಪ್ಪಿಗೆ ಪತ್ರ, ಜಿ.ಪಿ.ಎ್ ಸಾಲ ಮಂಜೂರಾತಿ ಮತ್ತಿತರ ವಿಷಯಗಳು ಪ್ರಾಧಿಕಾರದ ವ್ಯಾಪ್ತಿಗೆ ಬರಲಿವೆ ಎಂದು ಸುತ್ತೋಲೆಯಲ್ಲಿ ತಿಳಿಸಲಾಗಿದೆ.