ಸಾಗರ: ವನ್ನೀಯಕುಲಂ ಕ್ಷತ್ರಿಯ ಸಮಾಜಕ್ಕೆ ಪ್ರತ್ಯೇಕ ನಿಗಮ-ಮಂಡಳಿ ರಚಿಸುವ ಜತೆಗೆ ಸಮಾಜದ ಅಭಿವೃದ್ಧಿಗೆ ಅಗತ್ಯ ಸಹಕಾರ ನೀಡಲು ಚಳಿಗಾಲದ ಅಧಿವೇಶದನದಲ್ಲಿ ಸೂಕ್ತ ನಿರ್ಣಯ ಕೈಗೊಳ್ಳಬೇಕು ಎಂದು ಒತ್ತಾಯಿಸಿ ಸಮಾಜದ ಪ್ರಮುಖರು ಶಾಸಕ ಗೋಪಾಲಕೃಷ್ಣ ಬೇಳೂರು ಅವರಿಗೆ ಮನವಿ ಸಲ್ಲಿಸಿದರು.
ರಾಜ್ಯದಲ್ಲಿ ಸಮಾಜದವರು 25 ಲಕ್ಷಕ್ಕೂ ಹೆಚ್ಚು ಜನರಿದ್ದಾರೆ. ಜಿಲ್ಲೆಯಲ್ಲಿ ಸುಮಾರು 1.50 ಲಕ್ಷ ಜನಸಂಖ್ಯೆ ಹೊಂದಿದೆ. ಸಮಾಜವನ್ನು ಒಕ್ಕಲಿಗ ಗೌಡ ವಿಭಾಗಕ್ಕೆ ಸೇರಿಸಲಾಗಿದ್ದು, ಅದನ್ನು 2ಎಗೆ ಸೇರಿಸಬೇಕು. ಹಿಂದುಳಿದ ವರ್ಗಗಳ ಆಯೋಗದಡಿ ಈ ಬಗ್ಗೆ ಪರಿಶೀಲನೆ ನಡೆಸಬೇಕು. ಈಗಾಗಲೇ ತಿಗಳರು ಸಮುದಾಯದಡಿ ನಮ್ಮ ಸಮುದಾಯವನ್ನು ಸೇರಿಸಿರುವುದರಿಂದ ಯಾವುದೇ ಸೌಲಭ್ಯ ಸಿಗುತ್ತಿಲ್ಲ ಎಂದು ಮನವರಿಕೆ ಮಾಡಿಕೊಟ್ಟರು.
ಹಿಂದುಳಿದ ಆಯೋಗಕ್ಕೆ ಇದಕ್ಕೆ ಸಂಬಂಧಿಸಿ ದಾಖಲೆ ನೀಡಲಾಗಿದೆ. ಕಳೆದ ಬಾರಿ ಬೆಳಗಾವಿ ಅಧಿವೇಶದಲ್ಲಿ ಶಿವಮೊಗ್ಗ ಗ್ರಾಮಾಂತರ ಶಾಸಕಿ ಶಾರದಾ ಪೂರ‌್ಯಾನಾಯ್ಕ್ ಸಮುದಾಯದ ಪರ ಮಾತನಾಡಿದ್ದರು. ಆದರೆ ಈತನಕ ಬೇಡಿಕೆ ಈಡೇರಿಲ್ಲ. ಹಾಗಾಗಿ ಈ ಬಾರಿಯಾದರೂ ನಮ್ಮ ಸಮುದಾಯದ ಬೇಡಿಕೆ ಈಡೇರಿಸಲು ಕ್ರಮ ಕೈಗೊಳ್ಳುವಂತೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ಶಾರದಾ ಪೂರ‌್ಯಾನಾಯ್ಕಾ, ಶಾಸಕ ಚನ್ನಬಸಪ್ಪ ಮತ್ತಿತರರಿಗೆ ಮನವಿ ಸಲ್ಲಿಸಿದ್ದೇವೆ ಎಂದರು.
ಪ್ರತಿಕ್ರಿಯಿಸಿದ ಶಾಸಕ ಬೇಳೂರು, ಬೆಳಗಾವಿ ಅಧಿವೇಶನದಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಚಿವ ಶಿವರಾಜ ತಂಗಡಗಿ ಅವರೊಂದಿಗೆ ಸಮಾಜವನ್ನು 2ಎಗೆ ಸೇರಿಸುವ ಕುರಿತು ಮಾತುಕತೆ ನಡೆಸುತ್ತೇನೆ. ನಿಮ್ಮ ಸಮಾಜದ ಪ್ರಮುಖರ ನಿಯೋಗ ಬಂದರೆ ಸಚಿವರ ಜತೆ ಮಾತುಕತೆಗೆ ಅವಕಾಶ ಕಲ್ಪಿಸಿಕೊಡುತ್ತೇನೆ ಎಂದು ಭರವಸೆ ನೀಡಿದರು.
ಸಂಘದ ಅಧ್ಯಕ್ಷ ಆರ್.ಶ್ರೀನಿವಾಸ್, ಪ್ರಧಾನ ಕಾರ್ಯದರ್ಶಿ ಶಂಕರ್, ಹರಿನಾಥ್, ಚಿನ್ನಪ್ಪ, ಶಂಕರ್, ಟಿ.ಕೆ.ಮಂಜಣ್ಣ, ರವಿಶಂಕರ್, ಭದ್ರಗಿರಿ, ತಂಗವೇಲು, ರವಿಕುಮಾರ್, ಗೋಪಿನಾಥ್, ಆನಂದ್, ಪ್ರಸಾದಿ, ಕೃಷ್ಣರಾಜ್ ಇತರರಿದ್ದರು.