ಜೈನ ಅಭಿವೃದ್ಧಿ ನಿಗಮ ಮಂಡಳಿ ಸ್ಥಾಪನೆಗೆ ಒತ್ತಾಯಿಸಿ ಸಾಗರದಲ್ಲಿ ದಿಗಂಬರ ಜೈನ ಸಮಾಜ ಸೇವಾ ಟ್ರಸ್ಟ್ ಪ್ರಮುಖರು ಎಸಿ ವೀರೇಶ್‌ಕುಮಾರ್ ಅವರಿಗೆ ಮನವಿ ಸಲ್ಲಿಸಿದರು. ಹಿತಕರ ಜೈನ್, ಗಜೇಂದ್ರ ಜೈನ್, ಪದ್ಮರಾಜ ಜೈನ್, ಜ್ಯೋತಿ ನೇಮಿರಾಜ್, ಕವಿತಾ ಜೈನ್ ಇತರರಿದ್ದರು.  
ನ್ಯೂಸ್

ಜೈನ ಅಭಿವೃದ್ಧಿ ನಿಗಮ-ಮಂಡಳಿ ಸ್ಥಾಪಿಸಿ

ದಿಗಂಬರ ಜೈನ ಸಮಾಜ ಸೇವಾ ಟ್ರಸ್ಟ್ ಪದಾಧಿಕಾರಿಗಳ ಮನವಿ

ಸಾಗರ: ಜೈನ ಅಭಿವೃದ್ಧಿ ನಿಗಮ ಮಂಡಳಿ ಸ್ಥಾಪನೆಗೆ ಒತ್ತಾಯಿಸಿ ದಿಗಂಬರ ಜೈನ ಸಮಾಜ ಸೇವಾ ಟ್ರಸ್ಟ್ ಪದಾಧಿಕಾರಿಗಳು ಬುಧವಾರ ಉಪವಿಭಾಗಾಧಿಕಾರಿ ವೀರೇಶ್‌ಕುಮಾರ್ ಅವರಿಗೆ ಮನವಿ ಸಲ್ಲಿಸಿದರು.

ಜೈನ ಸಮುದಾಯ ನಾಡು, ನುಡಿ, ಸಂಸ್ಕೃತಿಯನ್ನು ಎತ್ತಿ ಹಿಡಿಯುವ ಕೆಲಸ ಮಾಡುತ್ತಿದೆ. ಆದಿಕವಿ ಪಂಪನಿಂದ ಹಿಡಿದು ಅನೇಕ ಕವಿಗಳು ಸಾಹಿತ್ಯ ಕ್ಷೇತ್ರಕ್ಕೆ ಕೊಡುಗೆ ನೀಡಿದ್ದಾರೆ. ಜೈನ ಸಮುದಾಯದ ಅನೇಕ ಸ್ಮಾರಕಗಳಿವೆ. ಆದರೂ ಸಮಾಜಕ್ಕೆ ಸೂಕ್ತ ಸ್ಥಾನಮಾನ ಸಿಕ್ಕಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ನಿಗಮ ಮಂಡಳಿ ಸ್ಥಾಪನೆಗೆ ಒತ್ತಾಯಿಸಿ ಈಗಾಗಲೇ ಶ್ರೀ ಗುಣಧರನಂದಿ ಮುನಿರಾಜರು ಉಪವಾಸ ಸತ್ಯಾಗ್ರಹ ಮಾಡುವ ನಿರ್ಧಾರ ಕೈಗೊಂಡಿದ್ದಾರೆ. ಜೈನ ಮಠಾಧೀಶರ ಪರಿಷತ್‌ನಿಂದ ಹೊಂಬುಜ ಶ್ರೀಗಳ ನೇತೃತ್ವದಲ್ಲಿ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಗಿದೆ. ರಾಜ್ಯದ ಎಲ್ಲ ಜಿಲ್ಲೆ, ತಾಲೂಕುಗಳಲ್ಲಿ 9 ಬೇಡಿಕೆ ಇರಿಸಿಕೊಂಡು ಮನವಿ ಸಲ್ಲಿಸಲಾಗುತ್ತಿದೆ ಎಂದು ತಿಳಿಸಿದರು.

ಜೈನ ಅಭಿವೃದ್ಧಿ ನಿಗಮ ಸ್ಥಾಪನೆ, ಜೈನ ಮುನಿಗಳಿಗೆ ವಿಶೇಷ ಸೌಲಭ್ಯಕ್ಕಾಗಿ ಕಾನೂನು ರೂಪಿಸಬೇಕು. ಪವಿತ್ರ ಕ್ಷೇತ್ರ ಸಮ್ಮೇದ್ ಶಿಖರ್ಜಿ ಯಾತ್ರೆಗೆ ಸಹಕಾರ, ರಾಜ್ಯದಲ್ಲಿರುವ ಪ್ರಾಚೀನ ತೀರ್ಥಕ್ಷೇತ್ರಗಳ ಸಂರಕ್ಷಣೆ, ವಿದ್ಯಾರ್ಥಿ ನಿಲಯಗಳ ನಿರ್ಮಾಣ, ವಿದ್ಯಾರ್ಥಿ ವೇತನ, ರಾಣಿ ಚನ್ನಭೈರಾದೇವಿ ಜಯಂತಿ ಆಚರಣೆ, ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಚಿತ ತರಬೇತಿ, ಪ್ರತಿ ಹೋಬಳಿಯಲ್ಲೂ ತ್ಯಾಗಿ ನಿವಾಸ ನಿರ್ಮಿಸಬೇಕು ಎಂದು ಒತ್ತಾಯಿಸಿದರು.

ಟ್ರಸ್ಟ್ ಅಧ್ಯಕ್ಷ ಹಿತಕರ ಜೈನ್, ಉಪಾಧ್ಯಕ್ಷ ಗಜೇಂದ್ರ ಜೈನ್, ಪ್ರಮುಖರಾದ ವೈ.ಜೆ.ಪದ್ಮರಾಜ ಜೈನ್, ದೇವರಾಜ ಜೈನ್, ಜಿನದತ್ತ ಜೈನ್, ನೀಲೇಂದ್ರ ಜೈನ್, ಮಹೇಂದ್ರ ಜೈನ್, ಓಂಕಾರ ಜೈನ್, ನಾಗರಾಜ್, ವೀರರಾಜ ಜೈನ್, ಜ್ಯೋತಿ ನೇಮಿರಾಜ್, ಕವಿತಾ ಜೈನ್, ಶ್ರುತಿ ನೇಮಯ್ಯ, ಪದ್ಮಾ ಬಾಹುಬಲಿ ಇತರರಿದ್ದರು.