ನೌಕರರ ಸೇವಾ ಭದ್ರತೆ ಬಗ್ಗೆ ಆತಂಕ 
ನ್ಯೂಸ್

ಸೇವಾ ಭದ್ರತೆ, ಆಡಳಿತಾತ್ಮಕ ಗೊಂದಲದ ಕುರಿತು ಇಎಸ್ಐಎಸ್ ​ನೌಕರರ ಆತಂಕ: ಸರ್ಕಾರಕ್ಕೆ ಪತ್ರ- ESIS employees

ನೌಕರರ ಸೇವಾ ಭದ್ರತೆ, ಆಡಳಿತಾತ್ಮಕ ನಿಯಂತ್ರಣ, ಹಣಕಾಸು ವ್ಯವಸ್ಥೆ ಮತ್ತು ಸಮಾನಾಂತರ ನೇಮಕಾತಿಗಳು ಸೇರಿ ಭವಿಷ್ಯದ ಹಿತಾಸಕ್ತಿಗಳ ಬಗ್ಗೆ ಹಲವು ಪ್ರಶ್ನೆಗಳು ಉದ್ಭವಿಸಿವೆ. ಈ ಕುರಿತು ಸ್ಪಷ್ಟನೆ ನೀಡುವಂತೆ ಇಎಸ್‌ಐಎಸ್ ಕರ್ನಾಟಕ ಅಧಿಕಾರಿಗಳು ಮತ್ತು ನೌಕರರ ಒಕ್ಕೂಟ, ಸರ್ಕಾರದ ಮುಖ್ಯ ಕಾರ್ಯದರ್ಶಿ, ಕಾರ್ಮಿಕ ಇಲಾಖೆ ಕಾರ್ಯದರ್ಶಿ ಹಾಗೂ ಕಾರ್ಮಿಕ ರಾಜ್ಯ ವಿಮಾ ವೈದ್ಯಕೀಯ ಸೇವೆಯ ಆಯುಕ್ತರಿಗೆ ಪತ್ರ ಬರೆದಿದೆ.

ಬೆಂಗಳೂರು: (ESIS employees' concerns over job security and administrative confusion) ಕಾರ್ಮಿಕ ರಾಜ್ಯ ವಿಮಾ ವೈದ್ಯಕೀಯ ಸೇವೆಯನ್ನು(ಇಎಸ್‌ಐಎಸ್‌ಎಂಎಸ್) ಕರ್ನಾಟಕ ಕಾರ್ಮಿಕರ ರಾಜ್ಯ ವಿಮಾ ಸೊಸೈಟಿ ಆಗಿ ರಚಿಸಿದ ಬಳಿಕ ಹಲವು ಆಡಳಿತಾತ್ಮಕ ಗೊಂದಲಗಳು ಸೃಷ್ಟಿಯಾಗಿವೆ. ಈ ಕುರಿತು ಸಮಗ್ರ, ಅಧಿಕೃತ ಸ್ಪಷ್ಟನೆ ಸಿಗದಿದ್ದರೆ ಅನಿಶ್ಚಿತತೆ ಉಂಟಾಗುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ಮತ್ತು ನೌಕರರು ಆತಂಕ ವ್ಯಕ್ತಪಡಿಸಿದ್ದಾರೆ.

ನೌಕರರ ಸೇವಾ ಭದ್ರತೆ, ಆಡಳಿತಾತ್ಮಕ ನಿಯಂತ್ರಣ, ಹಣಕಾಸು ವ್ಯವಸ್ಥೆ ಮತ್ತು ಸಮಾನಾಂತರ ನೇಮಕಾತಿಗಳು ಸೇರಿ ಭವಿಷ್ಯದ ಹಿತಾಸಕ್ತಿಗಳ ಬಗ್ಗೆ ಹಲವು ಪ್ರಶ್ನೆಗಳು ಉದ್ಭವಿಸಿವೆ. ಈ ಕುರಿತು ಸ್ಪಷ್ಟನೆ ನೀಡುವಂತೆ ಇಎಸ್‌ಐಎಸ್ ಕರ್ನಾಟಕ ಅಧಿಕಾರಿಗಳು ಮತ್ತು ನೌಕರರ ಒಕ್ಕೂಟ, ಸರ್ಕಾರದ ಮುಖ್ಯ ಕಾರ್ಯದರ್ಶಿ, ಕಾರ್ಮಿಕ ಇಲಾಖೆ ಕಾರ್ಯದರ್ಶಿ ಹಾಗೂ ಕಾರ್ಮಿಕ ರಾಜ್ಯ ವಿಮಾ ವೈದ್ಯಕೀಯ ಸೇವೆಯ ಆಯುಕ್ತರಿಗೆ ಪತ್ರ ಬರೆದಿದೆ.

ಸೊಸೈಟಿ ರಚನೆ ಅಧಿಕಾರ ರಾಜ್ಯ ಸರ್ಕಾರಕ್ಕಿದ್ದರೂ ಅದರ ಕಾರ್ಯಾಚರಣೆಯಲ್ಲಿ ನೌಕರರ ರಾಜ್ಯ ವಿಮಾ ನಿಗಮದ(ಇಎಸ್‌ಐಸಿ) ಮಾರ್ಗಸೂಚಿ ಅನುಸರಿಸಲಾಗುತ್ತಿದೆ. ಇಲಾಖೆ ಸಿಬ್ಬಂದಿಯನ್ನು ರಾಜ್ಯ ಸರ್ಕಾರಿ ನೌಕರರೆಂದು ಪರಿಗಣಿಸಲಾಗುತ್ತಿದೆ. ಇದರಿಂದ ಅಧಿಕಾರ ವ್ಯಾಪ್ತಿ ಮತ್ತು ಜವಾಬ್ದಾರಿಗಳ ಬಗ್ಗೆ ಸ್ಪಷ್ಟ ಮಾರ್ಗದರ್ಶನದ ಕೊರತೆಯಿಂದ ಆಡಳಿತಾತ್ಮಕ ಗೊಂದಲ ಉಂಟಾಗಿದೆ. ಸೊಸೈಟಿ ರಚನೆಗೆ ಸಂಬಂಧಿಸಿದ ಅಧಿಕೃತ ದಾಖಲೆಗಳು, ಸಿಬ್ಬಂದಿಯ ಸ್ಥಾನಮಾನ, ಸೇವಾ ನಿಯಮ ಹಾಗೂ ಪರಿಗಣಿತ ನಿಯೋಜನೆ(ಡೀಮ್ಡ್ ಡ್ಯೊಟೇಷನ್) ಸಂಬಂಧಿಸಿದ ವಿಚಾರಗಳು ಸಿಬ್ಬಂದಿಗೆ ತಿಳಿಯಬೇಕು.

ಸಿಬ್ಬಂದಿ, ರಾಜ್ಯ ಸರ್ಕಾರಿ ನೌಕರರಾಗಿಯೇ ಮುಂದುವರಿಯುತ್ತಾರೆ ಎಂದು ಹೇಳಲಾಗುತ್ತಿದ್ದರೂ, ವೇತನ ಪಾವತಿಗೆ ರಾಜ್ಯ ಸರ್ಕಾರದ ನೇರ ವ್ಯವಸ್ಥೆ ಬದಲಾಗಿ ಸೊಸೈಟಿಯಿಂದ ಹಣ ವರ್ಗಾವಣೆ ಮಾಡುವ ಪದ್ಧತಿ ಅನುಸರಿಸಲಾಗುತ್ತಿದೆ. ಇದರಿಂದ ಸೇವಾ ಭದ್ರತೆ, ಹಣಕಾಸಿನ ಸ್ಥಿರತೆ ಮತ್ತು ಭವಿಷ್ಯದ ಹಕ್ಕುಗಳ ಬಗ್ಗೆ ನೌಕರರಲ್ಲಿ ಆತಂಕ ಮೂಡಿದೆ.ಸಮಾನಾಂತರ ನೇಮಕಾತಿಗಳು ಭವಿಷ್ಯದಲ್ಲಿ ಪದೋನ್ನತಿ, ವರ್ಗಾವಣೆ, ಸೇವಾ ಭದ್ರತೆ ಸೇರಿ ಇತರ ಸೇವಾ ಅವಕಾಶಗಳ ಮೇಲೆ ಪರಿಣಾಮ ಬೀರಲಿದೆ. ಹಾಗಾಗಿ, ರಾಜ್ಯ ಸರ್ಕಾರ, ಇಎಸ್‌ಐಎಸ್ ಸೊಸೈಟಿ, ಇಎಸ್‌ಐಸಿ ನಡುವಿನ ಆಡಳಿತಾತ್ಮಕ ಹಾಗೂ ಹಣಕಾಸಿನ ಜವಾಬ್ದಾರಿಗಳ ಬಗ್ಗೆ ಸ್ಪಷ್ಟ ಮಾರ್ಗಸೂಚಿ ಹೊರಡಿಸಬೇಕು ಎಂದು ನೌಕರರು ಒತ್ತಾಯಿಸಿದ್ದಾರೆ.

ಸೆಪ್ಟೆಂಬರ್ ವೇತನ ಬಾಕಿ:

ಹಣ ಕೊರತೆಯಿಂದ ಇಎಸ್‌ಐಎಸ್‌ಎಂಎಸ್‌ನಲ್ಲಿ ಕಾರ್ಯನಿರ್ವಹಿಸುತ್ತಿರುವ ಬಹುತೇಕ ಅಧಿಕಾರಿಗಳು, ಸಿಬ್ಬಂದಿಗೆ ಸೆಪ್ಟೆಂಬರ್ ತಿಂಗಳ ವೇತನವಾಗಿಲ್ಲ. ಇಎಸ್‌ಐ ಯೋಜನೆಯಡಿ ವಿಮಾ ಲಾನುಭವಿಗಳಿಗೆ ನಿರಂತರವಾಗಿ ವೈದ್ಯಕೀಯ ಸೇವೆ ಒದಗಿಸುತ್ತಿರುವ ನೌಕರರ ಮನೋಸ್ಥೈರ್ಯ ಮೇಲೆ ಪರಿಣಾಮ ಬೀರಲಿದೆ. ವಿಳಂಬ ಮಾಡದೆ ಬಾಕಿ ವೇತನವನ್ನು ತಕ್ಷಣ ಪಾವತಿಗೆ ಕ್ರಮ ಕೈಗೊಳ್ಳುವಂತೆ ಕರ್ನಾಟಕ ಎಂಪ್ಲಾಯಿಸ್ ಸ್ಟೇಟ್ ಇನ್‌ಶ್ಯೂರೆನ್ಸ್ ಸ್ಕೀಮ್ ಮೆಡಿಕಲ್ ಸರ್ವೀಸಸ್ ನೌಕರರು, ಕಾರ್ಮಿಕರ ಸಚಿವರಿಗೆ ಪತ್ರ ಬರೆದಿದ್ದಾರೆ.

ಕರ್ನಾಟಕ ಕಾರ್ಮಿಕರ ರಾಜ್ಯ ವಿಮಾ ಸೊಸೈಟಿ ಆಗಿ ರಚಿಸಿದ ಬಳಿಕ ಕೆಲವೊಂದು ಆಡಳಿತಾತ್ಮಕ ಗೊಂದಲ ಉಂಟಾಗಿದೆ. ಸಿಬ್ಬಂದಿಯ ನಿಯೋಜನೆ ಗೊಂದಲ ಬಗೆಹರಿಸಬೇಕು. ಸೇವಾ ಭದ್ರತೆ, ವೇತನ, ಪಿಂಚಣಿ, ಪದೋನ್ನತಿ ಮತ್ತು ವರ್ಗಾವಣೆ ಸೇರಿ ಸೇವಾ ಹಕ್ಕುಗಳಿಗೆ ಧಕ್ಕೆಯಾಗುವುದಿಲ್ಲ ಎಂಬ ಸ್ಪಷ್ಟನೆ ನೀಡಬೇಕು.

ಡಾ.ಮಾಲೇಗೌಡ, ವೈದ್ಯಾಧಿಕಾರಿಗಳ ಸಂಘದ ಅಧ್ಯಕ್ಷ.