ನ್ಯೂಸ್

ಈಶ್ವರ್​ ಖಂಡ್ರೆ ಅಸಮಾಧಾನಕ್ಕೆ ಕಾರಣವಾಯ್ತು ಕಾಂಗ್ರೆಸ್​ ಸ್ಟಾರ್​ ಪ್ರಚಾರಕರ ಪಟ್ಟಿ?

ಬೆಂಗಳೂರು: ಕರ್ನಾಟಕ ವಿಧಾನಸಭೆ ಚುನಾವಣೆ ಸಮೀಪಿಸುತ್ತಿರುವ ಬೆನ್ನಲ್ಲೇ ಕರ್ನಾಟಕ ಪ್ರದೇಶ ಕಾಂಗ್ರೆಸ್​ ಕಮಿಟಿ ಬುಧವಾರ ತನ್ನ 40 ಜನ ಸ್ಟಾರ್​ ಪ್ರಚಾರಕರ ಪಟ್ಟಿ ಬಿಡುಗಡೆ ಮಾಡಿದೆ.

ಪಟ್ಟಿ ಬಿಡುಗಡೆ ಮಾಡಿರುವ ಬೆನ್ನಲ್ಲೇ ಅಸಮಾಧಾನದ ಹೊಗೆಯಾಡುತ್ತಿದ್ದು ಈ ಪೈಕಿ ಕಾಂಗ್ರೆಸ್​ ಒಕ್ಷದ ಹಿರಿಯ ನಾಯಕರೊಬ್ಬರು ತಮ್ಮ ಆಪ್ತರ ಬಳಿ ಬೇಸರವನ್ನು ಹೊರಹಾಕಿದ್ದಾರೆ.

ಸ್ಟಾರ್​ ಪ್ರಚಾರಕರ ಪಟ್ಟಿಯಲ್ಲಿ ಇಲ್ಲ ಆ ನಾಯಕ

ಇನ್ನು ಬುಧವಾರ ಕೆಪಿಸಿಸಿ ಬಿಡುಗಡೆ ಮಾಡಿದ ಸ್ಟಾರ್​ ಪ್ರಚಾರಕರ ಪಟ್ಟಿಯಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಈಶ್ವರ್​ ಖಂಡ್ರೆಗೆ ಸ್ಥಾನ ನೀಡದಿರುವುದು ಆ ನಾಯಕನ ಕಣ್ಣು ಕೆಂಪಗಾಗಿಸಿದೆ.

ಕಲ್ಯಾಣ ಕರ್ನಾಟಕ ಕಾಂಗ್ರೆಸ್​ ಉಸ್ತುವಾರಿ ಆಗಿರುವ ಈಶ್ವರ್​ ಖಂಡ್ರೆಗೆ ಸ್ಟಾರ್​ ಪ್ರಚಾರಕರ ಪಟ್ಟಿಯಲ್ಲಿ ಸ್ಥಾನ ನೀಡದಿರುವುದು ಹಿರಿಯ ಕಾಂಗ್ರೆಸ್​ ನಾಯಕನಿಗೆ ಬೇಸರ ತರಿಸಿದ್ದು ತಮ್ಮ ಆಕ್ರೋಶವನ್ನು ಹೊರಹಾಕಿದ್ದಾರೆ.

ಆಪ್ತರ ಬಳಿ ಬೇಸರ

ಇನ್ನು ಈ ಕುರಿತು ತಮ್ಮ ಆಪ್ತರ ಜೊತೆ ಸಭೆ ನಡೆಸುವ ವೇಳೆ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್​ ಖಂಡ್ರೆ ತಮಗೆ ಸ್ಥಾನ ನೀಡದಿರುವ ಕುರಿತು ಬೇಸರ ವ್ಯಕ್ತಪಡಿಸಿದ್ದಾರೆ ಎಂದು ತಿಳಿದು ಬಂದಿದೆ.

ಇತ್ತೀಚೆಗೆ ಬಂದ ಜಗದೀಶ್ ಶೆಟ್ಟರ್ ಪ್ರಚಾರಕರ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ. ಕಾರ್ಯಾಧ್ಯಕ್ಷರಾದ ರಾಮಲಿಂಗರೆಡ್ಡಿ, ಸತೀಶ್ ಜಾರಕಿಹೊಳಿ ಸ್ಥಾನ ಪಡೆದಿದ್ದಾರೆ. ಆದರೆ, ಕಲ್ಯಾಣ ಕರ್ನಾಟಕ ಭಾಗದ ಉಸ್ತುವಾರಿ ಆದ್ರೂ ಪ್ರಚಾರಕರ ಪಟ್ಟಿಯಲ್ಲಿ ಸ್ಥಾನವಿಲ್ಲ ಎಂದು ಈಶ್ವರ್​ ಖಂಡ್ರೆ ತಮ್ಮ ಆಪ್ತರ ಬಳಿ ಬೇಸರವನ್ನು ಹೊರಹಾಕಿದ್ದಾರೆ.