ಶಿವಮೊಗ್ಗ: ಮಾನವ ಕಳ್ಳಸಾಗಣೆ ಸಾಮಾಜಿಕ ಪಿಡುಗಾಗಿ ಪರಿಣಮಿಸಿದ್ದು, ಅದನ್ನು ನಿರ್ಮೂಲನೆ ಮಾಡುವುದು ನಾಗರಿಕ ಸಮಾಜದ ಜವಾಬ್ದಾರಿ ಎಂದು ಜಿಲ್ಲಾ ಪ್ರಧಾನ ಮತ್ತು ಸೆಷನ್ಸ್ ನ್ಯಾಯಾಧೀಶ ಮಂಜುನಾಥ ನಾಯಕ್ ಹೇಳಿದರು.
ನಗರದ ಡಿಎಆರ್ ಸಭಾಂಗಣದಲ್ಲಿ ಬುಧವಾರ ಜಿಲ್ಲಾಡಳಿತ, ಜಿಪಂ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಬೆಂಗಳೂರಿನ ಮುಕ್ತಿ ಸಂಸ್ಥೆ ಆಶ್ರಯದಲ್ಲಿ ಆಯೋಜಿಸಿದ್ದ ಮಾನವ ಕಳ್ಳಸಾಗಣೆ ತಡೆ ದಿನಾಚರಣೆ, ಜಾಗೃತಿ ಮತ್ತು ಕಾನೂನು ಅರಿವು ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.
ಜಿಲ್ಲೆಯಲ್ಲಿ ಗುರುತಿಸಲಾದ ಮಾನವ ಕಳ್ಳ ಸಾಗಣೆ ಪ್ರಕರಣಗಳು ಅತ್ಯಲ್ಪವಾದರೂ 15 ದಿನಗಳ ಅವಧಿಯಲ್ಲಿ 2 ಪ್ರಕರಣಗಳು ಬೆಳಕಿಗೆ ಬಂದಿವೆ. ಅಧಿಕಾರಿಗಳು ಸೂಕ್ಷ್ಮವಾಗಿ ಪರಿಶೀಲಿಸಿ ಅದರ ತೀವ್ರತೆ ಅರಿತು ತ್ವರಿತವಾಗಿ ಮೊಕದ್ದಮೆ ದಾಖಲಿಸಬೇಕು. ವಿಳಂಬವಾದಲ್ಲಿ ಅದರ ಮಹತ್ವ ಹೋಗಿ ವಿಚಾರಣೆ ಹಂತದಲ್ಲಿ ಹಲವು ಕಾರಣಗಳಿಂದ ಬಿದ್ದುಹೋಗುವ ಸಂಭವ ಹೆಚ್ಚು ಎಂದರು.
ಕೆಲವು ವಿಷಯಗಳಲ್ಲಿ ಜಪ್ತಿ ಮಾಡಲಾದ ವಸ್ತುಗಳು, ಸಾಂದರ್ಭಿಕ ಸಾಕ್ಷ್ಯಗಳು, ಸಾಕ್ಷಿಗಳು ಸಾಮಾಜಿಕ ಜವಾಬ್ದಾರಿ ಉಳ್ಳವರಾಗಿರಬೇಕು. ಇಲ್ಲದಿದ್ದಲ್ಲಿ ವಿಚಾರಣೆ, ಸಾಕ್ಷ್ಯಗಳಿಲ್ಲದೆ ಹೋಗುವ ಆತಂಕವೇ ಹೆಚ್ಚು. ವಿಶೇಷವಾಗಿ ಪೋಕ್ಸೊ, ಬಾಲ್ಯವಿವಾಹ ಪ್ರಕರಣಗಳಲ್ಲಿ ಜಿಲ್ಲೆ ಮುಂಚೂಣಿಯಲ್ಲಿದೆ. ಜನರಲ್ಲಿ ಉಂಟಾಗಿರುವ ಜಾಗೃತಿ ಕೊರತೆ ಇದಕ್ಕೆ ಕಾರಣ ಎಂದು ಹೇಳಿದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕಿ ಭಾರತಿ ಬಣಕಾರ್, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ, ನ್ಯಾಯಾಧೀಶ ಎಂ.ಎಸ್.ಸಂತೋಷ್, ಎಎಸ್‌ಪಿ ಎ.ಜಿ.ಕಾರಿಯಪ್ಪ, ಡಿಎಚ್‌ಒ ಡಾ. ಕೆ.ಎಸ್.ನಟರಾಜ್, ಡಿಡಿಪಿಐ ಎಸ್.ಆರ್.ಮಂಜುನಾಥ್, ಮುಕ್ತಿ ಸಂಸ್ಥೆಯ ಸಂಯೋಜಕಿ ಜಿ.ಸುಧಾ ಇತರರಿದ್ದರು.