ಅಗ್ನಿಯು ಎಲ್ಲರ ಮನೆಗಳಲ್ಲಿ ಸಮಾನವಾಗಿಯೇ ಉರಿಯುತ್ತದೆ. ಇದು ಶಿವನ ಸಮದರ್ಶಿತ್ವದ ಸಂಕೇತ. ಸಾಮಾನ್ಯವಾಗಿ ಪ್ರತಿಯೊಬ್ಬನೂ ಜನ್ಮ ಜನ್ಮಾಂತರಗಳ ಸಂಸ್ಕಾರದಿಂದಾಗಿ ರಾಗ -ದ್ವೇಷಗಳಿಂದ ಕೂಡಿರುತ್ತಾನೆ. ಅಂತೆಯೇ ಅವನು ಎಲ್ಲರನ್ನೂ ಸಮಾನವಾಗಿ ನೋಡಲು ಆಗುವುದಿಲ್ಲ. ದಿವಾಂಧಾಃ ಪ್ರಾಣಿನಃಕೇಚಿತ್ ರಾತ್ರ್ಯಂಧಾ ಹ್ಯಪರೇ ಕಿಲ| ಸಮದೃಷ್ಟಿವಿಹೀನೋ ಯಃ ಸರ್ವಥಾತ್ವಂಧ ಏವ ಸಃ ||- ಜಗತ್ತಿನಲ್ಲಿ ಕೆಲವರಿಗೆ ಸೂರ್ಯಾಸ್ತವಾದ ಮೇಲೆ ಏನೂ ಕಾಣುವುದಿಲ್ಲ. ಅಂತಹವರಿಗೆ ರಾತ್ರ್ಯಂಧರೆನ್ನುತ್ತಾರೆ. ಗೂಗೆ ಮುಂತಾದ ಪ್ರಾಣಿಗಳಿಗೆ ಹಗಲಿನಲ್ಲಿ ಕಣ್ಣು ಕಾಣುವುದಿಲ್ಲ. ಅವು ದಿವಾಂಧ ಪ್ರಾಣಿಗಳು. ಯಾರಿಗೆ ಸಮದೃಷ್ಟಿ ಇರುವುದಿಲ್ಲವೋ ಅವರು ಸರ್ವಥಾ ಅಂಧರು.
ಸರ್ವಭೂತೇಷು ಚಾತ್ಮಾನಂ ಸರ್ವಭೂತಾನಿ ಚಾತ್ಮಾನಿ | ಯಃ ಪಶ್ಯತಿ ಮಹಾಯೋಗೀ ಸ ಏವ ದೃಷ್ಟಿಮಾನ್ ಮತಃ|| -ಆದ್ದರಿಂದ ಎಲ್ಲ ಪ್ರಾಣಿಗಳಲ್ಲಿ ತನ್ನನ್ನು ಮತ್ತು ತನ್ನಲ್ಲಿ ಎಲ್ಲ ಪ್ರಾಣಿಗಳನ್ನು ಸಮದೃಷ್ಟಿಯಿಂದ ನೋಡುವವನು ಮಾತ್ರ ದೃಷ್ಟಿಯುಳ್ಳವನು. ಉಳಿದವರೆಲ್ಲರೂ ಅಂಧರೆಂದೇ ಭಾವಿಸಬೇಕು.
ಸಮ ದೃಷ್ಟಿಯೇ 3ನೇ ನೇತ್ರವು. ಅಂತಹ ದಿವ್ಯ ದೃಷ್ಟಿಯನ್ನು ಪಡೆದುಕೊಳ್ಳುವ ಸಾಧಕನಿಗೆ ತೃತೀಯ ನೇತ್ರದ ಲಾಭವಾಗುವುದು. ಅವಾಗ ಅವನೂ ಶಿವಸ್ವರೂಪನೇ ಆಗಿರುತ್ತಾನೆ. ರಾಗ ದ್ವೇಷ ಗಳಿಂದ ಮುಕ್ತನಾದ, ದ್ವಂದ್ವಾತೀತನಾದ, ಮಾತ್ಸರ್ಯರಹಿತನಾದ, ಶತ್ರು- ಮಿತ್ರರಲ್ಲಿ ಸಮಭಾವದಿಂದ ಕೂಡಿದ, ಲಾಭಾಲಾಭಗಳನ್ನು ಸಮ ದೃಷ್ಟಿಯಿಂದ ನೋಡುವ, ನಿಂದೆ ಮತ್ತು ಸ್ತುತಿಗಳನ್ನು ಸಮಾನವಾಗಿ ಕಾಣುವ ಶಿವಯೋಗಿಯೇ ಎಲ್ಲರಲ್ಲಿ ಎದ್ದು ತೋರುತ್ತಾನೆ. ಇಂತಹ ಸಮದೃಷ್ಟಿಯು ಯಾರಿಗೆ ಪ್ರಾಪ್ತವಾಗುವುದೋ ಅವರ ಮನಸ್ಸು ರಾಗ ದ್ವೇಷಾದಿಗಳಿಂದ ಮುಕ್ತವಾಗಿ ಸಮಸ್ಥಿತಿಯಲ್ಲಿರುವದರಿಂದ ಅಂತಹ ಸಮ ಸ್ಥಿತಿಯ ವ್ಯಕ್ತಿಯು ಯಾವ ರೋಗದಿಂದಲೂ ಗ್ರಥಿತನಾಗುವುದಿಲ್ಲ ಎಂದೇ ಚರಕಮರ್ಷಿಗಳು ಗುಣರಸಾಯನದಲ್ಲಿ ಸಮದೃಷ್ಟಿತ್ವ ಪರಿಗಣಿಸಿದ್ದಾರೆ.