ನ್ಯೂಸ್

ಸಮಾನ ಅವಕಾಶ ನೀಡಿರುವ ಸಂವಿಧಾನ

ಲಲಾಟಾಕ್ಷ ಎಸ್

ತಿ.ನರಸೀಪುರ: ವಿಶ್ವದಲ್ಲೇ ಆರ್ಥಿಕತೆಯಲ್ಲಿ ಭಾರತ 4 ನೇ ಸ್ಥಾನದಲ್ಲಿರುವುದಕ್ಕೆ ನಮ್ಮ ಸಂವಿಧಾನವೇ ಕಾರಣ ಎಂದು ತಹಸೀಲ್ದಾರ್ ಟಿ.ಜಿ.ಸುರೇಶ್ ಆಚಾರ್ ಹೇಳಿದರು.


ಪಟ್ಟಣದ ವಿದ್ಯೋದಯ ಕಾಲೇಜು ಆವರಣದಲ್ಲಿ ಶುಕ್ರವಾರ ತಾಲೂಕು ಆಡಳಿತ ಹಾಗೂ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯಿಂದ ಹಮ್ಮಿಕೊಂಡಿದ್ದ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ವಿಭಜಿತರಾಗಿದ್ದ ಭಾರತೀಯರನ್ನು ಒಂದುಗೂಡಿಸಿ ಸಮಾನ ಅವಕಾಶಗಳನ್ನು ಕಲ್ಪಿಸಿದ್ದ ಸಂವಿಧಾನ ದೇಶದ ಏಕತೆ, ಸಮಗ್ರತೆಯನ್ನು ಎತ್ತಿ ಹಿಡಿದಿದೆ. ದೇಶದ ಮತ್ತಷ್ಟು ಪ್ರಗತಿಗೆ ಹಾಗೂ ಏಕತೆ, ಸಮಗ್ರತೆ ಕಾಪಾಡಲು ಎಲ್ಲರೂ ಸಕ್ರಿಯರಾಗಬೇಕು ಎಂದು ಹೇಳಿದರು.


ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಸಿ.ಕೃಷ್ಣ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಸ್ವಾತಂತ್ರ್ಯ ಬಂದ ನಂತರ ನಮ್ಮ ಆಡಳಿತ ವ್ಯವಸ್ಥೆ ಕಾರ್ಯ ವಿಧಾನಗಳನ್ನು ಅಳವಡಿಸಲು ಸಂವಿಧಾನ ರಚನಾ ಸಮಿತಿ ರಚಿಸಲಾಯಿತು. ಸಮಿತಿಯಲ್ಲಿದ್ದ ಅಂಬೇಡ್ಕರ್ ಅವರು ವಿಶ್ವದ ಹಲವು ದೇಶಗಳ ಕಾನೂನು ಅಧ್ಯಯನ ಮಾಡಿ ತಮ್ಮ ಜ್ಞಾನ ಮತ್ತು ಪರಿಶ್ರಮದಿಂದ ದೇಶದ ಏಕತೆ, ಸಮಗ್ರತೆಗೆ ಪೂರಕವಾದ ಸಂವಿಧಾನವನ್ನು ನೀಡಿ ಶೋಷಿತ ಸಮುದಾಯಗಳಿಗೆ ಸಮಾನ ಹಕ್ಕುಗಳನ್ನು ನೀಡಿದ್ದಾರೆ ಎಂದರು.


ತಿ.ನರಸೀಪುರ, ಬನ್ನೂರು ಹಾಗೂ ಗರ್ಗೇಶ್ವರಿಯ ಪೌರಕಾರ್ಮಿಕರು, ಘನತ್ಯಾಜ್ಯ ನಿರ್ವಹಣೆಯಲ್ಲಿ ರಾಷ್ಟ್ರ ಪ್ರಶಸ್ತಿ ವಿಜೇತರಾದ ಅಸ್ವಿಯಾ ಬಾನು, ದೃಶ್ಯ ಕಲೆ 2ಡಿಯಲ್ಲಿ ರಾಷ್ಟ್ರ ಪ್ರಶಸ್ತಿ ಪಡೆದ ಮುಸುವಿನಕೊಪ್ಪಲು ಸರ್ಕಾರಿ ಪ್ರೌಢಶಾಲೆ ವಿದ್ಯಾರ್ಥಿನಿ ರಕ್ಷಿತಾ ಅವರ ಪಾಲಕರನ್ನು ಅಭಿನಂದಿಸಲಾಯಿತು.
ಬಿಇಒ ಜಿ.ಶೋಭಾ, ಉಪತಹಸೀಲ್ದಾರ್ ರಾಜಾಕಾಂತ್, ಪುರಸಭೆ ಮಾಜಿ ಅಧ್ಯಕ್ಷ ಟಿ.ಎಂ.ನಂಜುಂಡಸ್ವಾಮಿ, ಮುಖ್ಯಾಧಿಕಾರಿ ವಸಂತಕುಮಾರಿ, ಬನ್ನೂರು ಪುರಸಭೆ ಮುಖ್ಯಾಧಿಕಾರಿ ಹೇಮಂತ್ ರಾಜ್, ಬಿಆರ್‌ಸಿ ನಾಗೇಶ್, ಹಿಂದುಳಿದ ವರ್ಗಗಳ ಇಲಾಖೆ ಸಿಬ್ಬಂದಿ ರಾಜಣ್ಣ, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಶಿವಶಂಕರಮೂರ್ತಿ, ಶಿಕ್ಷಕರ ಸಂಘದ ಅಧ್ಯಕ್ಷ ಎಚ್.ಡಿ.ಮಾದಪ್ಪ, ಆರೋಗ್ಯಾಧಿಕಾರಿ ಡಾ.ರವಿಕುಮಾರ್, ಪುಟ್ಟಯ್ಯ, ಸಿ.ಪುಟ್ಟಮಲ್ಲಯ್ಯ, ಉಪನ್ಯಾಸಕ ಮೂಗೂರು ಕುಮಾರಸ್ವಾಮಿ ಇದ್ದರು.