ಶಿವಮೊಗ್ಗ ವಿನೋಬನಗರದಲ್ಲಿ ಇಪಿಎಸ್-95 ರಾಷ್ಟ್ರೀಯ ಸಂಘರ್ಷ ಸಮಿತಿ ಪದಾಧಿಕಾರಿಗಳು ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ಅವರಿಗೆ ಮನವಿ ಸಲ್ಲಿಸಿದರು. ಕೆ.ಆರ್.ನಾಗರಾಜ್, ಟಿ.ಜಿ.ಬಸವರಾಜಯ್ಯ, ಎಚ್.ತಿಮ್ಮಪ್ಪ, ಮಂಜುನಾಥ, ಪುಟ್ಟಾಚಾರ್, ಕುಲಕರ್ಣಿ ಇದ್ದರು. 
ನ್ಯೂಸ್

ಕನಿಷ್ಠ ಪಿಂಚಣಿ ಪರ ಧ್ವನಿ ಎತ್ತುವಂತೆ ಇಪಿಎಸ್-95 ನಿವೃತ್ತ ಕಾರ್ಮಿಕರ ಒತ್ತಾಯ

ಶಿವಮೊಗ್ಗ: ಇಪಿಎಸ್-95 ಕಾರ್ಮಿಕರಿಗೆ ಕನಿಷ್ಠ ಪಿಂಚಣಿ 7,500 ರೂ., ಡಿಎ ಹಾಗೂ ಇನ್ನಿತರ ಸೌಲಭ್ಯ ಕಲ್ಪಿಸಲು ಲೋಕಸಭೆ ಅಧಿವೇಶನದಲ್ಲಿ ಧ್ವನಿ ಎತ್ತುವಂತೆ ಒತ್ತಾಯಿಸಿ ಇಪಿಎಸ್-95 ರಾಷ್ಟ್ರೀಯ ಸಂಘರ್ಷ ಸಮಿತಿ ಪದಾಧಿಕಾರಿಗಳು ಶುಕ್ರವಾರ ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ಅವರಿಗೆ ಮನವಿ ಸಲ್ಲಿಸಿದರು.

ವಿನೋಬನಗರದ ಲೋಕಸಭಾ ಸದಸ್ಯ ರಾಘವೇಂದ್ರ ಅವರ ನಿವಾಸದಲ್ಲಿ ಸಮಿತಿ ಅಧ್ಯಕ್ಷ ಕೆ.ಆರ್.ನಾಗರಾಜ್ ನೇತೃತ್ವದಲ್ಲಿ ಭೇಟಿಯಾದ ಪದಾಧಿಕಾರಿಗಳು, ಕೆಎಸ್‌ಆರ್‌ಟಿಸಿ, ವಿಐಎಸ್‌ಎಲ್, ಎಂಪಿಎಂ, ಮೈಸೂರು ಮಿನರಲ್ಸ್ ಲಿಮಿಟೆಡ್, ಕುದುರೆಮುಖ ಐರನ್, ವೈದ್ಯಕೀಯ ಇಲಾಖೆ, ಕರ್ನಾಟಕ ಫಾರೆಸ್ಟ್ ಡಿವಿಜನ್ ಸೇರಿ ಹತ್ತು ಹಲವು ಸಂಘ ಸಂಸ್ಥೆಗಳ ಕಾರ್ಮಿಕರು ಇಪಿಎಸ್-95 ಅಡಿ ಕೇವಲ 1ರಿಂದ 3 ಸಾವಿರ ರೂ.ವರೆಗೆ ಮಾತ್ರ ಪಿಂಚಣಿ ಪಡೆಯುತ್ತಿದ್ದೇವೆ. ಅದರಿಂದ ಜೀವನ ನಡೆಸುವುದು ದುಸ್ತರವಾಗಿದೆ ಎಂದು ಹೇಳಿದರು.

ಈಗಾಗಲೇ ದೆಹಲಿಯ ರಾಮಲೀಲಾ ಮೈದಾನ ಮತ್ತು ಜಂತರ್ ಮಂತರ್‌ಗಳಲ್ಲಿ ಅನೇಕ ಬಾರಿ ಕನಿಷ್ಠ ಪಿಂಚಣಿಗೆ ರಾಷ್ಟ್ರೀಯ ಅಧ್ಯಕ್ಷ ಕಮ್ಯಾಂಡರ್ ಅಶೋಕ್ ರಾವತ್ ನೇತೃತ್ವದಲ್ಲಿ ಧರಣಿ ಸತ್ಯಾಗ್ರಹ ಹಾಗೂ ಮೌನ ಪ್ರತಿಭಟನೆ ನಡೆಸಲಾಗಿದೆ. ಆರು ವರ್ಷಗಳಿಂದ ಕನಿಷ್ಠ ಪಿಂಚಣಿಗೆ ಮಹಾರಾಷ್ಟ್ರದ ಬುಲ್ದಾನಾದಲ್ಲಿ ಸರತಿ ಉಪವಾಸ ಸತ್ಯಾಗ್ರಹವನ್ನು ಸಹೋದ್ಯೋಗಿಗಳು ಮಾಡುತ್ತಿದ್ದಾರೆ. ಹಾಗಾಗಿ ಇಪಿಎಸ್-95 ಕನಿಷ್ಠ ಪಿಂಚಣಿಗಾಗಿ ಸಂಸತ್‌ನಲ್ಲಿ ನಮ್ಮ ಪರವಾಗಿ ವಿಷಯ ಮಂಡಿಸಿ ಮುಖಾಂತರ ನಿವೃತ್ತ ಹಾಗೂ ವಯೋವೃದ್ಧ ಕಾರ್ಮಿಕರ ಜೀವನ ನಿರ್ವಹಣೆಗೆ ಅನುಕೂಲ ಮಾಡಿಕೊಡಬೇಕೆಂದು ವಿನಂತಿಸಿದರು.

ಸಮಿತಿ ಪ್ರಧಾನ ಕಾರ್ಯದರ್ಶಿ ಟಿ.ಜಿ.ಬಸವರಾಜಯ್ಯ, ಎಚ್.ತಿಮ್ಮಪ್ಪ, ಮಂಜುನಾಥ, ಪುಟ್ಟಾಚಾರ್, ಕುಲಕರ್ಣಿ ಮತ್ತಿತರರು ಪಾಲ್ಗೊಂಡಿದ್ದರು.