ನ್ಯೂಸ್

EPFO: ಪಿಎಫ್​ ಖಾತೆದಾರರಿಗೆ ಶುಭ ಸುದ್ದಿ.. ಖಾತೆಗೆ ಬಡ್ಡಿ ಹಣ ಜಮೆ!

ನವದೆಹಲಿ: ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ (ಇಪಿಎಫ್‌ಒ) 2023-24ರ ಆರ್ಥಿಕ ವರ್ಷಕ್ಕೆ ಘೋಷಿಸಿದ್ದ ಭವಿಷ್ಯ ನಿಧಿಯ ಮೇಲಿನ ಬಡ್ಡಿ ಜಮೆ ಮಾಡುವ ಪ್ರಕ್ರಿಯೆ ನಡೆಯುತ್ತಿದೆ.

2023-24 ರ ಆರ್ಥಿಕ ವರ್ಷಕ್ಕೆ 8.25 ಪ್ರತಿಶತ ಬಡ್ಡಿ ಘೋಷಿಸಿತ್ತು. ಆದರೆ ಬಡ್ಡಿಯನ್ನು ಸರ್ಕಾರ ಖಾತೆದಾರರ ಅಕೌಂಟ್​ಗಳಿಗೆ ಇನ್ನೂ ಜಮೆ ಮಾಡಿರಲಿಲ್ಲ. ಇತ್ತೀಚೆಗೆ ಪಿಎಫ್ ಖಾತೆದಾರರು ಇಪಿಎಫ್‌ಒ ಅನ್ನು ಟ್ಯಾಗ್ ಮಾಡಿ, ಬಡ್ಡಿ ಮತ್ತು ಠೇವಣಿ ಪ್ರಕ್ರಿಯೆಗೆ ಸಂಬಂಧಿಸಿದಂತೆ ಟ್ವಿಟರ್‌ನಲ್ಲಿ ಪ್ರಶ್ನೆಯನ್ನು ಕೇಳಿದ್ದರು. ಈ ಪ್ರಶ್ನೆಗೆ ಇಪಿಎಫ್‌ಒ ಉತ್ತರ ನೀಡಿದೆ.

ಶೀಘ್ರದಲ್ಲೇ ನಿಮ್ಮ ಖಾತೆಯಲ್ಲಿ ಹಣ ಕಾಣಿಸುತ್ತದೆ ಎಂದು ಇಪಿಎಫ್​ಒ ಉತ್ತರಿಸಿದೆ. ಪ್ರತಿ ವರ್ಷ ಬಡ್ಡಿ ಯ ಸಂಪೂರ್ಣ ಹಣ ಒಂದೇ ಬಾರಿ ಜಮೆ ಆಗುತ್ತದೆ ಎನ್ನಲಾಗಿದೆ. ಜುಲೈ 23 ರ ನಂತರ ಬಡ್ಡಿಯನ್ನು ವರ್ಗಾಯಿಸುವ ಸಾಧ್ಯತೆಯಿದೆ ಎಂದು ತಜ್ಞರು ಭವಿಷ್ಯ ನುಡಿದಿದ್ದಾರೆ.

ಸರ್ಕಾರಿ ಮತ್ತು ಖಾಸಗಿ ಕಂಪನಿಗಳಲ್ಲಿ ಕೆಲಸ ಮಾಡುವ ನೌಕರರು ಉಳಿತಾಯ ಮಾಡಬೇಕೆಂಬ ಉದ್ದೇಶದಿಂದ ಕೇಂದ್ರವು ನೌಕರರ ಭವಿಷ್ಯ ನಿಧಿ (ಇಪಿಎಫ್) ಆರಂಭಿಸಿದೆ. 20 ಅಥವಾ ಅದಕ್ಕಿಂತ ಹೆಚ್ಚು ಉದ್ಯೋಗಿಗಳನ್ನು ಹೊಂದಿರುವ ಕಂಪನಿಗಳು ಉದ್ಯೋಗಿಗಳಿಗೆ ಪಿಎಫ್ ಸೌಲಭ್ಯವನ್ನು ಒದಗಿಸಬೇಕು. 12ರಷ್ಟು ಹಣವನ್ನು ಉದ್ಯೋಗಿಯ ಖಾತೆಯಿಂದ ಕಡಿತಗೊಳಿಸಿದರೆ, ಕಂಪನಿಯು ಅದೇ ಮೊತ್ತವನ್ನು ಪಿಎಫ್ ಖಾತೆಗೆ ಜಮೆ ಮಾಡುತ್ತದೆ. ಆದರೆ, ಕಂಪನಿಯು ಠೇವಣಿ ಇಟ್ಟಿರುವ ಹಣದ ಶೇ.3.67ರಷ್ಟು ಹಣ ಇಪಿಎಫ್ ಖಾತೆಯಲ್ಲಿ ಜಮೆಯಾಗಿದೆ. ಉಳಿದ 8.33 ಪ್ರತಿಶತವು ಪಿಂಚಣಿ ಯೋಜನೆಗೆ (ಇಪಿಎಸ್) ಸಲ್ಲುತ್ತದೆ. 2023-2024 ರ ಹಣಕಾಸು ವರ್ಷದಲ್ಲಿ ಉದ್ಯೋಗಿಗಳ ಭವಿಷ್ಯ ನಿಧಿ (ಇಪಿಎಫ್) ಮೇಲಿನ ಬಡ್ಡಿ ದರವು ಶೇಕಡಾ 8.25 ಆಗಿದೆ.

2022-23ನೇ ಹಣಕಾಸು ವರ್ಷದಲ್ಲಿ ಬಡ್ಡಿ ದರವು 8.15 ಪ್ರತಿಶತದಷ್ಟಿತ್ತು. ಬಡ್ಡಿಯನ್ನು 28.17 ಕೋಟಿ ಸದಸ್ಯರ ಖಾತೆಗಳಿಗೆ ಜಮಾ ಮಾಡಲಾಗಿದೆ ಎಂದು ತಿಳಿದುಬಂದಿದೆ. ಕಳೆದ ವರ್ಷ ಬಡ್ಡಿ ದರದಲ್ಲಿ ಹೆಚ್ಚಳವನ್ನು ಘೋಷಿಸಿತ್ತು.