ಸಾಗರದ ಸರ್ಕಾರಿ ಪಿಯು ಕಾಲೇಜು ಆವರಣದಲ್ಲಿ ಎಬಿವಿಪಿಯಿಂದ ಏರ್ಪಡಿಸಿದ್ದ ಪರಿಸರ ದಿನಾಚರಣೆ ಕಾರ್ಯಕ್ರಮದಲ್ಲಿ ಸಸಿ ನೆಡಲಾಯಿತು. ಕೆ.ಸಿ.ಸತ್ಯನಾರಾಯಣ, ಮೋಹನ್, ಬಸವರಾಜಪ್ಪ, ಪ್ರಶಾಂತ್ ಇತರರಿದ್ದರು.  
ನ್ಯೂಸ್

ಉತ್ತಮ ಆರೋಗ್ಯಕ್ಕಾಗಿ ಪರಿಸರ ಅಗತ್ಯ

ಶಿವಕುಮಾರ ಎಸ್.ಪಿ.

ಸಾಗರ: ಹಸಿರು ಪರಿಸರವೇ ನಮ್ಮ ಉಸಿರು. ವಿದ್ಯಾರ್ಥಿಗಳು ಪರಿಸರ ಕಾಳಜಿ ಬೆಳೆಸಿಕೊಳ್ಳಬೇಕು. ಪರಿಸರ ಹಸನಾಗಿದ್ದರೆ ಮಾತ್ರ ಮನುಷ್ಯ ಆರೋಗ್ಯವಂತನಾಗಿ ಇರುತ್ತಾನೆ ಎಂದು ಸರ್ಕಾರಿ ಪದವಿಪೂರ್ವ ಕಾಲೇಜಿನ ಪ್ರಾಚಾರ್ಯ ಕೆ.ಸಿ.ಸತ್ಯನಾರಾಯಣ ಹೇಳಿದರು.

ಸಾಗರದ ಸರ್ಕಾರಿ ಪದವಿಪೂರ್ವ ಕಾಲೇಜು ಆವರಣದಲ್ಲಿ ಶನಿವಾರ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್‌ನಿಂದ ಏರ್ಪಡಿಸಿದ್ದ ಪರಿಸರ ದಿನಾಚರಣೆ ಕಾರ್ಯಕ್ರಮದಲ್ಲಿ ಸಸಿ ನೆಟ್ಟು ಮಾತನಾಡಿದರು.

ಇತ್ತೀಚೆಗೆ ಪರಿಸರದ ಮೇಲಿನ ಕಾಳಜಿ ಕಡಿಮೆಯಾಗುತ್ತಿದೆ. ಬೇರೆಬೇರೆ ಕಾರಣಗಳಿಗಾಗಿ ಅರಣ್ಯನಾಶ ಮಾಡಲಾಗುತ್ತಿದೆ. ಇದು ಪರಿಸರದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ. ಪರಿಸರ ಉಳಿಸಿಕೊಳ್ಳುವ ಜತೆಗೆ ಅಭಿವೃದ್ಧಿ ಕೆಲಸಗಳನ್ನು ಮಾಡಿಕೊಳ್ಳಬೇಕು. ಸಸಿ ನೆಟ್ಟು ಅದನ್ನು ಪೋಷಿಸುವ ಕೆಲಸ ತುರ್ತಾಗಿ ಆಗಬೇಕಿದೆ. ವಿದ್ಯಾರ್ಥಿ ಸಂಘಟನೆಗಳು ಈ ನಿಟ್ಟಿನಲ್ಲಿ ಮುಂದಾಳತ್ವ ವಹಿಸಿ ಸಮೂಹ ಜಾಗೃತಿ ಮೂಡಿಸಬೇಕು ಎಂದು ತಿಳಿಸಿದರು.

ಎಬಿವಿಪಿ ರಾಜ್ಯ ಕಾರ್ಯಕಾರಿಣಿ ಸದಸ್ಯ ಮೋಹನ್ ಮಾತನಾಡಿ, ಎಬಿವಿಪಿ ಶೈಕ್ಷಣಿಕ ಜಾಗೃತಿ ಜತೆಗೆ ಪರಿಸರ ಪರವಾಗಿಯೂ ಕೆಲಸ ಮಾಡುತ್ತಿದೆ. ಪರಿಸರ ಉಳಿಸಿ ಬೆಳೆಸುವ ಮಹತ್ತರ ಕೆಲಸಕ್ಕೆ ವಿದ್ಯಾರ್ಥಿ ಸಮೂಹ ದೊಡ್ಡ ಸಂಖ್ಯೆಯಲ್ಲಿ ಕೈಜೋಡಿಸಬೇಕು. ಕಾಡಿನ ನಾಶದಿಂದ ಹವಾಮಾನ ವೈಪರೀತ್ಯ ಉಂಟಾಗುತ್ತಿದೆ. ಸಸಿ ನೆಟ್ಟು ಪಾಲನೆ, ಪೋಷಣೆ ಮಾಡುವ ಮೂಲಕ ಭೂಮಿಗೆ ಹಸಿರು ಹೊದೆಸುವ ಸಂಕಲ್ಪ ಕೈಗೊಳ್ಳಬೇಕು ಎಂದರು.

ಎನ್‌ಎಸ್‌ಎಸ್ ಕಾರ್ಯಕ್ರಮ ಅಧಿಕಾರಿ ಬಸವರಾಜಪ್ಪ, ಉಪನ್ಯಾಸಕರಾದ ಪ್ರಶಾಂತ್, ರವಿ, ಎಬಿವಿಪಿಯ ನಿತಿನ್‌ಕುಮಾರ್, ಸಂದೀಪ್, ಮಣಿ ಇತರರಿದ್ದರು.