ಮೈಸೂರು: ಸಕಲ ಜೀವಕ್ಕೂ ಪರಿಸರವೇ ಜೀವಧಾತುವಾಗಿದೆ. ಹೀಗಾಗಿ ಮಾನವಕುಲ ಜಾಗೃತಿಗೊಂಡು ಪರಿಸರ ಉಳಿಸಿಕೊಳ್ಳದಿದ್ದರೆ ಮುಂದಿನ ದಿನಗಳಲ್ಲಿ ಜಗತ್ತು ಆಪತ್ತಿನತ್ತ ಮುಖಮಾಡುವುದು ನಿಶ್ಚಿತ ಎಂದು ಸಾಹಿತಿ ಬನ್ನೂರು ಕೆ. ರಾಜು ಎಚ್ಚರಿಸಿದರು.
ನಗರದ ಧರ್ಮಪ್ರಕಾಶ ಡಿ.ಬನುಮಯ್ಯ ಬಾಲಕರ ಪ್ರೌಢಶಾಲೆಯಲ್ಲಿ ಮಂಗಳವಾರ ರಾಜ್ಯ ವಿಜ್ಞಾನ ಪರಿಷತ್ ಜಿಲ್ಲಾ ಘಟಕ ಆಯೋಜಿಸಿದ್ದ ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿ, ಪ್ರಸ್ತುತ ದಿನಗಳಲ್ಲಿ ಪ್ರತಿಯೊಬ್ಬರೂ ಅದರಲ್ಲೂ ವಿಶೇಷವಾಗಿ ವಿದ್ಯಾರ್ಥಿಗಳು ಹಾಗೂ ಯುವಜನರು ಪರಿಸರದ ಮಹತ್ವ ಅರಿತು ಪರಿಸರಕ್ಕೆ ಆಗುತ್ತಿರುವ ಹಾನಿ ತಡೆಯಲು ಮುಂದಾಗಬೇಕು ಎಂದು ಹೇಳಿದರು.
ನಾವು ಉಸಿರಾಡುವ ಗಾಳಿ, ಕುಡಿಯುವ ನೀರು, ನಡೆದಾಡುವ ಭೂಮಿ, ನಮಗೆ ಅಗತ್ಯವಿರುವ ಆಹಾರ ಹೀಗೆ ಪ್ರತಿಯೊಂದೂ ಪರಿಸರದ ಸೃಷ್ಟಿ ಮತ್ತು ಕೊಡುಗೆಯಾಗಿದೆ. ಪರಿಸರವಿಲ್ಲದಿದ್ದರೆ ಮನುಷ್ಯ ತನ್ನ ಅಸ್ತಿತ್ವವನ್ನೇ ಕಳೆದುಕೊಳ್ಳುತ್ತಾನೆ. ಹೀಗಾಗಿ ಪರಿಸರದ ಅವಶ್ಯಕತೆ ಅರಿತು ಪರಿಸರ ಉಳಿಸುವ ಜವಾಬ್ದಾರಿಯನ್ನು ಪ್ರತಿಯೊಬ್ಬರು ಹೊತ್ತುಕೊಳ್ಳಬೇಕು ಎಂದರು.
ಪರಿಸರವನ್ನು ನಾವು ಕಾಪಾಡಿದರೆ ಅದು ನಮ್ಮನ್ನು ಜೀವನಪೂರ್ತಿ ಕಾಪಾಡುತ್ತದೆ. ನಮಗೆ ಪರಿಸರ ಎಷ್ಟು ಮುಖ್ಯವೆಂದು ತಿಳಿದಿದ್ದರೂ ಮರ ಗಿಡಗಳನ್ನು ಕಡಿದು ನಾಶ ಮಾಡುತ್ತಿರುವುದು ಸರಿಯಲ್ಲ. ಮರ, ಗಿಡಗಳನ್ನು ನಿರಂತರವಾಗಿ ಕಡಿಯುತ್ತಾ ಹೋದರೆ ಪರಿಸರ ಅಸಮತೋಲನಕ್ಕೆ ಕಾರಣವಾಗುತ್ತದೆ ಎಂದು ಎಚ್ಚರಿಸಿದರು.
ರಾಜ್ಯ ವಿಜ್ಞಾನ ಪರಿಷತ್ ನಗರ ಸಂಚಾಲಕ ಆರ್.ಅನಂತರಾಮು ಮಾತನಾಡಿ, ಕೆ .ಎಂ. ಮುನ್ಷಿ ಕೇಂದ್ರ ಸಚಿವರಾಗಿದ್ದ ಕಾಲದಲ್ಲಿ ವಿಶ್ವ ಪರಿಸರ ದಿನಾಚರಣೆ ಪ್ರಾರಂಭ ಮಾಡಿದರು. ಅರಣ್ಯ ನಾಶ ತಡೆಗಟ್ಟುವುದು, ಅರಣ್ಯ ಪೋಷಣೆ ಮಾಡುವುದು ಒಳಗೊಂಡಂತೆ 1972ರಿಂದ ವಿವಿಧ ಯೋಜನೆಗಳನ್ನು ರೂಪಿಸಿ ಜನಸಾಮಾನ್ಯರಿಗೆ ತಿಳಿಸುವಂತಹ ಕಾರ್ಯಕ್ರಮ ಇದಾಗಿದೆ. ಅಂದು ಅದನ್ನು ಪ್ರಕೃತಿ ಉತ್ಸವ ಅಥವಾ ವನಮಹೋತ್ಸವ ಎಂದು ಕರೆಯಲಾಗಿತ್ತು ಎಂದರು.
ನಮ್ಮ ಪರಿಸರವನ್ನು ದೇಶದ ಸಮೃದ್ಧಿಗಾಗಿ ಬಳಸಿ ಭವಿಷ್ಯಕ್ಕಾಗಿ ಉಳಿಸಬೇಕು. ಮೊದಲು ನಮ್ಮ ಕಾಲ ಬುಡದಲ್ಲೇ ನಮ್ಮ ಸುತ್ತಲೂ ಇರುವ ಪರಿಸರವನ್ನು ಸ್ವಚ್ಛಗೊಳಿಸುವ ಮತ್ತು ಗಿಡಮರ ನೆಟ್ಟು ಪರಿಸರವನ್ನು ಹಸಿರಾಗಿಸುವ, ಉಸಿರಾಗಿಸುವ ಕಾರ್ಯ ಮಾಡಬೇಕು ಎಂದು ಕರೆ ನೀಡಿದರು. ವೇದಿಕೆಯಲ್ಲಿ ಶಾಲೆಯ ಮುಖ್ಯ ಶಿಕ್ಷಕ ಜಿ.ಎಸ್. ಕೃಪಾಶಂಕರ್ ಅಧ್ಯಕ್ಷತೆ ವಹಿಸಿದ್ದರು. ಶಿಕ್ಷಕರಾದ ಮಹೇಶ್, ಲಿಂಗರಾಜು ಹಾಗೂ ಗೋವಿಂದರಾಜು ಇದ್ದರು.