logo folder
ನ್ಯೂಸ್

ಇನ್ನೂ ಘೋಷಣೆಯಾಗದ ಪರಿಸರ, ಸಾಲುಮರದ ತಿಮ್ಮಕ್ಕ ಪ್ರಶಸ್ತಿ

ಜೀವಪರಿಸ್ಥಿತಿ ಮತ್ತು ಪರಿಸರ ಇಲಾಖೆಯೂ 2025-26ನೇ ಸಾಲಿನ ಪರಿಸರ ಮತ್ತು ಸಾಲು ಮರದ ತಿಮ್ಮಕ್ಕ ಪ್ರಶಸ್ತಿಗೆ ಇದುವರೆಗೂ ಸಾಧಕರನ್ನು ಗುರುತಿಸಿ, ಪ್ರದಾನ ಮಾಡದೆ ಇರುವುದು ಅರ್ಜಿದಾರರ ಆಕ್ರೋಶಕ್ಕೆ ಕಾರಣವಾಗಿದೆ.

* ಜೀವಪರಿಸ್ಥಿತಿ ಮತ್ತು ಪರಿಸರ ಇಲಾಖೆ ವಿರುದ್ಧ ಸಾಧಕರ ಆಕ್ರೋಶ

ಬೆಂಗಳೂರು: ಜೀವಪರಿಸ್ಥಿತಿ ಮತ್ತು ಪರಿಸರ ಇಲಾಖೆಯೂ 2025-26ನೇ ಸಾಲಿನ ಪರಿಸರ ಮತ್ತು ಸಾಲು ಮರದ ತಿಮ್ಮಕ್ಕ ಪ್ರಶಸ್ತಿಗೆ ಇದುವರೆಗೂ ಸಾಧಕರನ್ನು ಗುರುತಿಸಿ, ಪ್ರದಾನ ಮಾಡದೆ ಇರುವುದು ಅರ್ಜಿದಾರರ ಆಕ್ರೋಶಕ್ಕೆ ಕಾರಣವಾಗಿದೆ.

ಪ್ರತಿ ವರ್ಷದಂತೆ ಈ ವರ್ಷವೂ ಪರಿಸರ ಸಂರಕ್ಷಣೆ ಮತ್ತು ಪರಿಸರ ವ್ಯವಸ್ಥಾಪನೆ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವವರಿಂದ ಪ್ರಶಸ್ತಿಗಾಗಿ ಮೇ 5ರಂದು ಅರ್ಜಿಗಳನ್ನು ಆಹ್ವಾನಿಸಿ ಮೇ 25 ಕೊನೇ ದಿನಾಂಕ ನಿಗದಿಪಡಿಸಲಾಗಿತ್ತು. ಈ ಕುರಿತು ದಿನಪತ್ರಿಕೆಗಳಲ್ಲಿ ಜಾಹೀರಾತು ಸಹ ಹೊರಡಿಸಿದ್ದರು. ಆನ್‌ಲೈನ್ ಮೂಲಕ ಅಥವಾ ಸಂಬಂಧಪಟ್ಟ ಇಲಾಖೆಯ ಕಚೇರಿಗೆ ಖುದ್ದು ಭೇಟಿ ನೀಡಿ ಸಲ್ಲಿಸಬಹುದು ಎಂದು ಸೂಚಿಸಲಾಗಿತ್ತು.

ಅದರಂತೆ ರಾಜ್ಯದ ವಿವಿಧ ಜಿಲ್ಲೆಗಳಿಂದ ಪರಿಸರ ಪ್ರೇಮಿಗಳು, ವಿವಿಧ ಸಂಘ-ಸಂಸ್ಥೆಗಳ ಮುಖ್ಯಸ್ಥರು ಸಾಧನೆಯ ವಿವರಗಳ ಸಮೇತ ಅರ್ಜಿ ಸಲ್ಲಿಸಿದ್ದು, ಪ್ರಶಸ್ತಿ ಯಾವಾಗ ಸಿಗಲಿದೆ ಎಂದು ಕಾದು ನೋಡುವ ಪರಿಸ್ಥಿತಿಯನ್ನು ಸರ್ಕಾರ ನಿರ್ಮಾಣ ಮಾಡಿದೆ. ಅರ್ಜಿದಾರರ ನಿರೀಕ್ಷೆ ಈಡೇರುವುದೇ ಎಂಬ ಪ್ರಶ್ನೆ ಕಾಡುತ್ತಿದೆ.

ಸಾಲುಮರದ ತಿಮ್ಮಕ್ಕ ಪ್ರಶಸ್ತಿಯನ್ನು ಕಲ್ಯಾಣ ಕರ್ನಾಟಕ, ಕಿತ್ತೂರು ಕರ್ನಾಟಕ, ಕರಾವಳಿ ಕರ್ನಾಟಕ, ಮಧ್ಯ ಕರ್ನಾಟಕ ಮತ್ತು ದಕ್ಷಿಣ ಕರ್ನಾಟಕ ಪ್ರಾದೇಶಿಕ ವಿಭಾಗಗಳಿಗೆ ತಲಾ ಒಂದರಂತೆ ಹಾಗೂ ಪರಿಸರ ಪ್ರಶಸ್ತಿಯನ್ನು ಒಟ್ಟು 6 ನೀಡಲು ತೀರ್ಮಾನಿಸಲಾಗಿತ್ತು. ಜೂ.5ರಂದು ನಡೆಯಬೇಕಿದ್ದ ಪರಿಸರ ದಿನಾಚರಣೆಗೂ ಒಂದುದಿನ ಮುನ್ನ ಪ್ರಶಸ್ತಿ ಪುರಸ್ಕೃತರ ಹೆಸರುಗಳನ್ನು ಘೋಷಣೆ ಮಾಡಬೇಕಿತ್ತು. ಇಲಾಖಾಧಿಕಾರಿಗಳ ಉದಾಸೀನದಿಂದ ಸಾಧಕರು ಅವಕಾಶವಂಚಿತರಾಗುವ ಆತಂಕ ಎದುರಾಗಿದೆ.

ವಾಲ್ಮೀಕಿ, ರಾಜ್ಯೋತ್ಸವ, ಜಾನಪದ ಸೇರಿ ವಿವಿಧ ಇಲಾಖೆ, ಅಕಾಡೆಮಿಗಳಿಂದ ಕೊಡಮಾಡುವ ಪ್ರಶಸ್ತಿಯನ್ನು ವಿವಿಧ ಸಾಧಕರಿಗೆ ಪ್ರದಾನ ಮಾಡಲಾಗಿದೆ. ಆದರೆ ಈ ಎರಡೂ ಪ್ರಶಸ್ತಿಗಳನ್ನು ಯಾಕೆ ಪ್ರದಾನ ಮಾಡಿಲ್ಲ ಎಂಬುದು ಪರಿಸರ ಪ್ರೇಮಿಗಳ ಪ್ರಶ್ನೆಯಾಗಿದೆ.

ಸಾಧಕರಿಗೆ ಇನ್ನು ಪ್ರಶಸ್ತಿ ಪ್ರದಾನ ಮಾಡದೆ ಇರುವ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದು ವಿತರಣೆಗೆ ಕ್ರಮ ವಹಿಸಲಾಗುವುದು. - ಶಿವಣ್ಣ, ಕೆಎಸ್‌ಪಿಸಿಬಿ ಅಧ್ಯಕ್ಷ
ಕಳೆದ ಮೂವತ್ತು ವರ್ಷಗಳಿಂದ ಪರಿಸರ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದು, ಅರ್ಜಿ ಸಲ್ಲಿಸಿ ಹಲವು ತಿಂಗಳು ಕಳೆದರೂ ಸಾಧಕರ ಹೆಸರು ಪ್ರಕಟಗೊಂಡಿಲ್ಲ. ಸರ್ಕಾರ ಕೂಡಲೇ ಗಮನ ಹರಿಸಿ ಪ್ರಶಸ್ತಿ ಪ್ರದಾನ ಮಾಡಲು ಮುಂದಾಗಬೇಕು. - ಉಮಾಪತಿ, ಅರ್ಜಿದಾರ