ನ್ಯೂಸ್

ಈ ಸ್ಟಾರ್ ನಟನ ಮೊದಲ ಸಂಬಳ 50 ರೂ...ಆದರೆ ಇಂದು 6300 ಕೋಟಿ ರೂ. ಒಡೆಯ!

ಬೆಂಗಳೂರು: ಬಾಲಿವುಡ್‌ ಮಂದಿಯ ಜೀವನವು ಅನೇಕ ಜನರನ್ನು ಆಕರ್ಷಿಸುತ್ತದೆ. ಪ್ರತಿದಿನ ಅನೇಕ ಯುವಕರು ಈ ಗ್ಲಾಮರ್ ತುಂಬಿದ ಜಗತ್ತಿನಲ್ಲಿ ತಮ್ಮ ಛಾಪು ಮೂಡಿಸಲು ಮುಂಬೈ ತಲುಪುತ್ತಾರೆ. ಆದರೆ ಅವರಲ್ಲಿ ಕೆಲವರು ಮಾತ್ರ ತಾವಂದುಕೊಂಡ ಸ್ಥಾನ ತಲುಪಲು ಸಾಧ್ಯವಾಗುತ್ತದೆ. ಫೋಟೋದಲ್ಲಿ ಕಾಣುತ್ತಿರುವ ಈ ಮಗು ಕೂಡ ದೊಡ್ಡವನಾದ ಮೇಲೆ ನಟನಾಗಬೇಕೆಂಬ ಬಯಕೆಯಿಂದ ಮುಂಬೈಗೆ ತೆರಳಿ, ಆ ನಂತರ ಕಠಿಣ ಪರಿಶ್ರಮದ ಮೇಲೆ ಇಂದು ಬಹಳಷ್ಟು ಸಂಪತ್ತು ಮತ್ತು ಅಪಾರ ಜನಪ್ರಿಯತೆ ಗಳಿಸಿದ್ದಾರೆ. ಅಂದಹಾಗೆ ಇವರ ಮೊದಲ ಸಂಬಳ ಕೇವಲ 50 ರೂ.  

ಹೌದು, ಇವರು ಬೇರೆ ಯಾರೂ ಅಲ್ಲ ಶಾರುಖ್ ಖಾನ್. ಶಾರುಖ್ ಇಂದು ಬಾಲಿವುಡ್ ನ ಕಿಂಗ್ ಖಾನ್. 1965, ನವೆಂಬರ್ ನಲ್ಲಿ ಶಾರುಖ್ ದೆಹಲಿಯಲ್ಲಿ ಜನಿಸಿದರು. ಶಾರುಖ್ ಅವರ ತಂದೆ 1981 ರಲ್ಲಿ ಕ್ಯಾನ್ಸರ್ ನಿಂದ ನಿಧನರಾದರು, ಅವರ ತಾಯಿ ಮಧುಮೇಹ ರೋಗಿಯಾಗಿದ್ದರಿಂದ 1991 ರಲ್ಲಿ ಇಹಲೋಕ ತ್ಯಜಿಸಿದರು. ಈ ಸಮಯದಲ್ಲಿ ಶಾರುಖ್ ಬಹಳ ಕಷ್ಟದ ಜೀವನ ಎದುರಿಸಬೇಕಾಯಿತು.

ಶಾರುಖ್ ತಮ್ಮ ವೃತ್ತಿಯನ್ನು ಸಣ್ಣ ಪರದೆಯಿಂದ ಪ್ರಾರಂಭಿಸಿದರು. ಅವರು 1989 ರಲ್ಲಿ ಟಿವಿ ಶೋ 'ಫೌಜಿ' ಮಾಡಿದರು. ಈ ಧಾರಾವಾಹಿಯಲ್ಲಿ ಲೆಫ್ಟಿನೆಂಟ್ ಅಭಿಮನ್ಯು ರೈ ಪಾತ್ರದಲ್ಲಿ ಸಾಕಷ್ಟು ಜನಪ್ರಿಯತೆಯನ್ನು ಪಡೆದರು. ಇದಾದ ನಂತರ ಶಾರುಖ್ 'ಸರ್ಕಸ್', 'ದಿಲ್ ದರಿಯಾ' ಮುಂತಾದ ಶೋಗಳನ್ನು ಕೂಡ ಮಾಡಿದ್ದರು. ಕಿರುತೆರೆಯಲ್ಲಿ ಸಾಕಷ್ಟು ಜನಮನ್ನಣೆ ಗಳಿಸಿದ ನಂತರ ಅವರು ಬಾಲಿವುಡ್‌ನತ್ತ ಮುಖಮಾಡಿ 1992ರಲ್ಲಿ ತೆರೆಕಂಡ 'ದೀವಾನಾ' ಸಿನಿಮಾದಲ್ಲಿ ನಟಿಸಿದರು. ಕಿಂಗ್ ಖಾನ್ ಅವರ ಈ ಚಿತ್ರ ಸೂಪರ್ ಡೂಪರ್ ಹಿಟ್ ಆಗಿತ್ತು. ಇದಕ್ಕಾಗಿ ಅವರು ಅತ್ಯುತ್ತಮ ನಟ ಪ್ರಶಸ್ತಿಯನ್ನೂ ಪಡೆದರು.

ಈ ಚಿತ್ರದ ನಂತರ, ಶಾರುಖ್ ಹಿಂತಿರುಗಿ ನೋಡಲಿಲ್ಲ. ಒಂದರ ನಂತರ ಒಂದರಂತೆ ಹಲವಾರು ಉತ್ತಮ ಚಿತ್ರಗಳನ್ನು ನೀಡಿದರು. ಕಳೆದ ವರ್ಷವೇ, ನಟನ ಮೂರು ಬ್ಯಾಕ್ ಟು ಬ್ಯಾಕ್ ಚಿತ್ರಗಳು ಬಾಕ್ಸ್ ಆಫೀಸ್‌ನಲ್ಲಿ ಯಶಸ್ವಿಯಾದವು. ಕಿಂಗ್ ಖಾನ್ ಅವರ 'ಪಠಾಣ್' 2023 ರ ಆರಂಭದಲ್ಲಿ ಬ್ಲಾಕ್ಬಸ್ಟರ್ ಆಗಿತ್ತು, ನಂತರ ಬಂದ 'ಜವಾನ್' ಅನೇಕ ದಾಖಲೆಗಳನ್ನು ಮಾಡಿತು. ವರ್ಷದ ಕೊನೆಯಲ್ಲಿ ಬಿಡುಗಡೆಯಾದ ಶಾರುಖ್ ಖಾನ್ ಅವರ 'ಡಿಂಕಿ' ಕೂಡ ಸೂಪರ್‌ಹಿಟ್ ಆಗಿತ್ತು.

ಮೊದಲ ಸಂಭಾವನೆ ಎಷ್ಟು?
ಶಾರುಖ್ ಇಂದು ಸೂಪರ್‌ಸ್ಟಾರ್ ಆಗಿರಬಹುದು. ಆದರೆ ಅವರು ಉದ್ಯಮದಲ್ಲಿ ತಮ್ಮ ನೆಲೆ ಕಂಡುಕೊಳ್ಳಲು ಸಾಕಷ್ಟು ಹೋರಾಟ ಮಾಡಬೇಕಾಯಿತು. ಸಂದರ್ಶನವೊಂದರಲ್ಲಿ, ಕಿಂಗ್ ಖಾನ್ ತಮ್ಮ ಮೊದಲ ಸಂಭಾವನೆಯನ್ನೂ ಬಹಿರಂಗಪಡಿಸಿದ್ದರು. ಶಾರುಖ್ ಖಾನ್ ಅವರು ಪಂಕಜ್ ಉದಾಸ್ ಅವರ ಸಂಗೀತ ಕಛೇರಿಯಲ್ಲಿ ಭಾಗವಹಿಸಿದ್ದರು. ಅಲ್ಲಿ ಅವರು ತಮ್ಮ ಮೊದಲ ಸಂಬಳವಾಗಿ 50 ರೂ. ಪಡೆದರು. ಶಾರುಖ್ ಖಾನ್ ತಮ್ಮ ಮೊದಲ ಸಂಬಳದೊಂದಿಗೆ ತಾಜ್ ಮಹಲ್ ನೋಡಲು ಆಗ್ರಾಕ್ಕೆ ಹೋದರು.  

ನಿವ್ವಳ ಮೌಲ್ಯ ಎಷ್ಟು?
ಶಾರುಖ್ ಖಾನ್ ಅವರ ಮೊದಲ ಸಂಭಾವನೆ 50 ರೂ. ಆದರೆ ಇಂದು ಅವರು ಅಪಾರ ಸಂಪತ್ತಿನ ಒಡೆಯರಾಗಿದ್ದಾರೆ. ಜಾಗತಿಕ ಸೂಪರ್ ಸ್ಟಾರ್ ಎನಿಸಿಕೊಂಡಿರುವ ಶಾರುಖ್ ಖಾನ್ ಅವರ ಒಟ್ಟು ಆಸ್ತಿ 6300 ಕೋಟಿ ರೂ. ಕುತೂಹಲಕಾರಿ ಸಂಗತಿಯೆಂದರೆ, ಕಳೆದ ದಶಕದಲ್ಲಿ ಅವರ ನಿವ್ವಳ ಮೌಲ್ಯವು 300 ಪ್ರತಿಶತಕ್ಕಿಂತ ಹೆಚ್ಚಾಗಿದೆ. ಶಾರುಖ್ ಖಾನ್ ವ್ಯಾಪಾರ, ಚಲನಚಿತ್ರಗಳು ಮತ್ತು ಬ್ರ್ಯಾಂಡ್ ಎಂಡಾರ್ಸ್‌ಮೆಂಟ್‌ಗಳಿಂದ ದೊಡ್ಡ ಆದಾಯವನ್ನು ಗಳಿಸುತ್ತಾರೆ.

ಹಾಲಿವುಡ್ ಚಿತ್ರ ಮಾಡಲ್ಲ

ತಮ್ಮ ವೃತ್ತಿಜೀವನದಲ್ಲಿ ಅನೇಕ ಸೂಪರ್‌ಹಿಟ್ ಬಾಲಿವುಡ್ ಚಿತ್ರಗಳಲ್ಲಿ ಕೆಲಸ ಮಾಡಿದ ಶಾರುಖ್ ಖಾನ್ ಅವರಿಗೆ ಹಾಲಿವುಡ್‌ನಿಂದಲೂ ಆಫರ್‌ಗಳು ಬಂದಿವೆ, ಆದರೆ ಅವರು ಅಲ್ಲಿ ಕೆಲಸ ಮಾಡಲು ಇಷ್ಟಪಡುವುದಿಲ್ಲ. ಸಂದರ್ಶನವೊಂದರಲ್ಲಿ ಶಾರುಖ್ ಗೆ ಈ ಪ್ರಶ್ನೆಯನ್ನು ಕೇಳಿದಾಗ , 'ನಾನು ಟಾಮ್ ಕ್ರೂಸ್‌ ನಷ್ಟು ಚೆನ್ನಾಗಿಲ್ಲ, ಜಾನ್ ಟ್ರಾವೋಲ್ಟಾ ಹಾಗೆ ನೃತ್ಯ ಮಾಡುವುದಿಲ್ಲ. ನಾನು ಅದನ್ನು ಮಾಡಲು ಬಯಸುವುದಿಲ್ಲ ಎಂಬ ಕಾರಣಕ್ಕಾಗಿ ಅಲ್ಲ, ಆದರೆ ನನಗದನ್ನು ಮಾಡಲು ಸಾಧ್ಯವಿಲ್ಲ' ಎಂದು ತಿಳಿಸಿದ್ದರು.