ನ್ಯೂಸ್

ಅರೆಭಾಷೆ ಗೌಡರು ಗಣತಿಯಲ್ಲಿ ಗೌಡ ಎಂದೇ ನಮೂದಿಸಿ

ಸುಂಟಿಕೊಪ್ಪ: ಅರೆಭಾಷೆ ಗೌಡರು ಗಣತಿಯಲ್ಲಿ ಜಾತಿ ‘ಗೌಡ’ ಎಂದು ನಮೂದಿಸಲು ಸುಂಟಿಕೊಪ್ಪ ಗೌಡ ಸಮಾಜ ಮತ್ತು ಸಂಘಟನೆಗಳ ಪದಾಧಿಕಾರಿಗಳು ಮನವಿ ಮಾಡಿದ್ದಾರೆ.

ಪ್ರಸ್ತುತ ನಡೆಯಲಿರುವ ಜನ ಗಣತಿಯಲ್ಲಿ ಮತ್ತು ಮುಂದೆ ನಡೆಯಲಿರುವ ಕೇಂದ್ರ ಸರ್ಕಾರದ ಜಾತಿ ಗಣತಿಯಲ್ಲಿ ಜಾತಿಯ ಕಾಲಂನಲ್ಲಿ ಗೌಡ ಎಂದು, ಉಪಜಾತಿ ಅರೆಭಾಷೆ ಗೌಡ, ಮಾತೃ ಭಾಷೆ ಅರೆಭಾಷೆ ಎಂದು ಎಲ್ಲ ಅರೆಭಾಷೆ ಗೌಡರು ನಮೂದಿಸ ಬೇಕೆಂದು ಸುಂಟಿಕೊಪ್ಪ ಗೌಡ ಸಮಾಜದ ಅಧ್ಯಕ್ಷ ಕುಂಜಿಲನ ಮಂಜುನಾಥ್ ಮನವಿ ಮಾಡಿದ್ದಾರೆ.

ಮೂಲತಃ ಗೌಡರು ಒಕ್ಕಲಿಗ ಸಮುದಾಯದ ಭಾಗವಾಗಿದ್ದಾರೆ. ಆದರೆ ಅರೆಭಾಷೆ ಗೌಡರ ಶೈಕ್ಷಣಿಕ ಮತ್ತು ಕಂದಾಯ ಸೇರಿದಂತೆ ಎಲ್ಲ ಮೂಲ ದಾಖಲೆಗಳಲ್ಲಿ ಗೌಡ ಎಂದೇ ನಮೂದಾಗಿರುತ್ತದೆ. ಈಗ ಬದಲಾಯಿಸಿ ಮಾಹಿತಿ ನೀಡಿದರೆ ಮುಂದಿನ ದಿನಗಳಲ್ಲಿ ತೊಂದರೆ ಅನುಭವಿಸುವ ಸಾಧ್ಯತೆ ಇದೆ. ಈ ದಿಸೆಯಲ್ಲಿ ಬೆಂಗಳೂರು, ಮೈಸೂರು, ಮಡಿಕೇರಿ ಮತ್ತು ಪುತ್ತೂರಿನಲ್ಲಿ ಸಮದಾಯದ ಸಭೆಗಳನ್ನು ನಡೆಸಿ, ಕೊಡಗಿನ ಎಲ್ಲ ಗೌಡ ಸಮಾಜಗಳೊಂದಿಗೆ ಚರ್ಚಿಸಿ, ಕೊಡಗು ಗೌಡ ಸಮಾಜಗಳ ಒಕ್ಕೂಟವು ಈ ನಿರ್ಣಯ ಕೈಗೊಂಡಿದೆ. ಇದಕ್ಕೆ ನಾವು ಪೂರ್ಣ ಬೆಂಬಲ ಸೂಚಿಸಿದ್ದೇವೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಗಣತಿಯಲ್ಲಿ ತಮ್ಮ ಜಾತಿಗೆ ಇರುವ ಇನ್ನೊಂದು ಹೆಸರು ಎಂಬ ಕಾಲಂ ಸಹ ಇದ್ದು, ಅಲ್ಲಿ ಒಕ್ಕಲಿಗ, ಕೊಡಗು ಗೌಡ, ಅರೆಭಾಷೆ ಒಕ್ಕಲಿಗ ಎಂದು ನಮೂದಿಸಲು ಅವರು ಕೋರಿದ್ದಾರೆ. ಹಾಗೆಯೇ ಎಲ್ಲ ಮೂಲ ದಾಖಲೆಗಳನ್ನು ಒಕ್ಕಲಿಗ ಎಂದು ಹೊಂದಿರುವ ಅರೆಭಾಷೆ ಗೌಡ ಸಮುದಾಯದವರು ಅವರುಗಳು ಜಾತಿ ಒಕ್ಕಲಿಗ ಉಪಜಾತಿ ಅರೆಭಾಷೆ ಗೌಡ/ಅರೆಭಾಷೆ ಒಕ್ಕಲಿಗ ಮತ್ತು ಮಾತೃಭಾಷೆ ಅರೆ ಭಾಷೆ ಎಂದು ನಮೂದಿಸಲು ಯಾವುದೇ ಅಭ್ಯಂತರ ಇಲ್ಲ ಎಂದು ತಿಳಿಸಿದ್ದಾರೆ.