ಅರಕಲಗೂಡು ತಾಲೂಕಿನ ಹನ್ಯಾಳು ಗ್ರಾಮದಲ್ಲಿ ಸರ್ಕಾರಿ ಶಾಲಾ ದಾಖಲಾತಿ ಮಕ್ಕಳ ಮನೆ ಆಂದೋಲನಕ್ಕೆ ಶಾಸಕ ಎ.ಮಂಜು ಚಾಲನೆ ನೀಡಿದರು. ಬಿಇಒ ಕೆ.ಪಿ.ನಾರಾಯಣ್, ಸದಾಶಿವಪ್ಪ, ನಾಗೇಶ್ ಇತರರಿದ್ದರು. 
ನ್ಯೂಸ್

ಸರ್ಕಾರಿ ಶಾಲೆಗೆ ಮಕ್ಕಳನ್ನು ಸೇರಿಸಿ

ಅರಕಲಗೂಡು: ಪಾಲಕರು ಖಾಸಗಿ ಕಾನ್ವೆಂಟ್‌ಗಳ ವ್ಯಾಮೋಹ ತೊರೆದು ಸರ್ಕಾರಿ ಶಾಲೆಗಳಿಗೆ ತಮ್ಮ ಮಕ್ಕಳು ಸೇರಿಸಿ ಗುಣಮಟ್ಟದ ಶಿಕ್ಷಣ ಕೊಡಿಸಬೇಕು ಎಂದು ಶಾಸಕ ಎ.ಮಂಜು ಮನವಿ ಮಾಡಿದರು.

ತಾಲೂಕಿನ ಹನ್ಯಾಳು ಗ್ರಾಮದಲ್ಲಿ ಮಕ್ಕಳ ಮನೆ (ಎಲ್‌ಕೆಜಿ, ಯುಕೆಜಿ) ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ದಾಖಲಾತಿ ಆಂದೋಲನಕ್ಕೆ ಸೋಮವಾರ ಚಾಲನೆ ನೀಡಿ ಮಾತನಾಡಿದ ಅವರು, ಮೂರು ವರ್ಷಕ್ಕೂ ಮೇಲ್ಪಟ್ಟ ಮಕ್ಕಳನ್ನು ತಾಲೂಕಿನಲ್ಲಿ ಈಗಾಗಲೇ ಸ್ಥಾಪಿಸಿರುವ ಮಕ್ಕಳ ಮನೆಗೆ ತಮ್ಮ ಮಕ್ಕಳನ್ನು ಸೇರಿಸಬೇಕು. ಮುಖ್ಯವಾಗಿ ರೈತರು ಹಾಗೂ ಮಧ್ಯಮ ವರ್ಗದವರು ತಮ್ಮ ಮಕ್ಕಳನ್ನು ಖಾಸಗಿ ಶಾಲೆಗಳ ಯಾವುದೇ ಆಮಿಷಗಳಿಗೆ ಒಳಗಾಗದಂತೆ ಖುದ್ದಾಗಿ ಸರ್ಕಾರಿ ಶಾಲೆಗಳಿಗೆ ದಾಖಲಾತಿ ಮಾಡುವ ಮೂಲಕ ಉತ್ತಮ ಶಿಕ್ಷಣವನ್ನು ಪಡೆದುಕೊಳ್ಳಬೇಕು ಎಂದು ಸಲಹೆ ನೀಡಿದರು.

ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ಪಿ. ನಾರಾಯಣ್, ಶಿಕ್ಷಣ ಸಂಯೋಜಕ ಸದಾಶಿವಪ್ಪ, ಕ್ಲಸ್ಟರ್ ಸಂಪನ್ಮೂಲ ವ್ಯಕ್ತಿ ನಾಗೇಶ್, ಶಿಕ್ಷಕರು, ಗ್ರಾಮಸ್ಥರು ಇದ್ದರು.

ಅಧಿಕಾರಿಗಳು ಮತ್ತು ಶಿಕ್ಷಕರು ಹನ್ಯಾಳು, ಸೋಂಪುರ, ಆನಂದೂರು, ಮಧುರನಹಳ್ಳಿ ಗ್ರಾಮಗಳಿಗೆ ಭೇಟಿ ನೀಡಿ ಸರ್ಕಾರಿ ಶಾಲೆಗಳಿಗೆ ತಮ್ಮ ಮಕ್ಕಳನ್ನು ಸೇರಿಸುವಂತೆ ಪ್ರಚಾರ ನಡೆಸಿ ಪ್ರೇರೇಪಿಸಿದರು.