ಲಖನೌ: ಉತ್ತರಪ್ರದೇಶದ ಲಖೀಂಪುರ್ ಖೇರಿಯಲ್ಲಿ ಅಕ್ಟೋಬರ್ 3 ರಂದು ಎಂಟು ಜನರು ಮೃತಪಟ್ಟಿರುವ ಉದ್ವಿಗ್ನ ಪ್ರಸಂಗದ ತನಿಖೆಗೆ ಯುಪಿ ಸರ್ಕಾರ ಸಮಿತಿಯೊಂದನ್ನು ನೇಮಿಸಿದೆ. ಈ ಏಕಸದಸ್ಯ ಸಮಿತಿಗೆ ಅಲಹಾಬಾದ್ ಹೈಕೋರ್ಟ್ನ ನಿವೃತ್ತ ನ್ಯಾಯಮೂರ್ತಿ ಪ್ರದೀಪ್ ಕುಮಾರ್ ಶ್ರೀವಾಸ್ತವ ಅವರನ್ನು ನೇಮಿಸಲಾಗಿದೆ.
ಅ.3 ರ ಭಾನುವಾರ ಕೇಂದ್ರ ಗೃಹ ಖಾತೆಯ ರಾಜ್ಯ ಸಚಿವ ಅಜಯ್ ಮಿಶ್ರ ಮಗ ಆಶಿಶ್ ಮಿಶ್ರಗೆ ಸೇರಿದ ಕಾರು ಪ್ರತಿಭಟನಾನಿರತ ರೈತರ ಮೇಲೆ ಹಾಯಿತು. ಇದರಿಂದಾಗಿ 4 ಜನ ರೈತರು ಮೃತಪಟ್ಟರು. ನಂತರ ರೊಚ್ಚಿಗೆದ್ದ ರೈತರು ಕಾರಿನ ಚಾಲಕ ಮತ್ತು ಮೂವರು ಬಿಜೆಪಿ ಕಾರ್ಯಕರ್ತರನ್ನು ಥಳಿಸಿ ಕೊಂದರು ಎಂದು ಆರೋಪಿಸಲಾಗಿದೆ.
ಈ ಘಟನೆಯ ಬಗ್ಗೆ ಎರಡು ತಿಂಗಳೊಳಗೆ ತನಿಖೆ ನಡೆಸಿ ನೈಜ ಚಿತ್ರಣ ನೀಡಲು ತನಿಖಾ ಸಮಿತಿಗೆ ಸೂಚಿಸಿ, ರಾಜ್ಯ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಅವನೀಶ್ ಕುಮಾರ್ ಅವಸ್ಥಿ, ಅ.6 ರಂದು ಆದೇಶ ಹೊರಡಿಸಿದ್ದಾರೆ.