ಮೇದಾರಕೇರಿಯ ಚೌಡಮ್ಮ ದೇವಸ್ಥಾನದಲ್ಲಿ ಸಂಸ್ಕೃತ ಬಾಲಗೋಕುಲ ಉದ್ಘಾಟನೆಯ ಕಾರ್ಯಕ್ರಮದಲ್ಲಿ ಎಂ.ಮಧವಾಚಾರ್, ಪ್ರಸನ್ನ, ಅರವಿಂದ, ಸುಧಾ ಮಾದು, ವಿಕ್ರಮ ಮುಂತಾದವರಿದ್ದರು.  
ನ್ಯೂಸ್

ಸಂಸ್ಕೃತ ಕಲಿಕೆಯಿಂದ ಜ್ಞಾನ ವೃದ್ಧಿ

ಅರವಿಂದ ಅಕ್ಲಾಪುರ

ಶಿವಮೊಗ್ಗ: ಸಂಸ್ಕೃತದಲ್ಲಿ ಅಪಾರವಾದ ಜ್ಞಾನ ಭಂಡಾರವಿದೆ. ಅದನ್ನು ಮಕ್ಕಳು ಅಸಕ್ತಿಯಿಂದ ಕಲಿತರೆ ಅವರ ಜ್ಞಾನ ಹೆಚ್ಚಾಗುತ್ತದೆ ಎಂದು ಮುದ್ರಕರ ಸಂಘದ ಅಧ್ಯಕ್ಷರಾದ ಎಂ.ಮಾಧವಾಚಾರ್ ಹೇಳಿದರು.

ಆರ್‌ಎಸ್‌ಎಸ್‌ನ ವಿಕ್ರಮ ಶಾಖೆಯ ಸೇವಾ ವಿಭಾಗ, ತರುಣೋದಯ ಸಂಸ್ಕೃತ ಸೇವಾ ಸಂಸ್ಥೆ, ಸಂಸ್ಕೃತ ಭಾರತಿ ಮತ್ತು ಮಂಗಳೂರು ಇನ್ಸಿಟಿಟ್ಯೂಟ್ ಆಫ್ ಆಂಕಾಲಜಿ ಸೂಪರ್ ಸ್ಪೆಷಾಲಿಟಿ ಕ್ಯಾನ್ಸರ್ ಆಸ್ಪತ್ರೆ ತೀರ್ಥಹಳ್ಳಿ ಇವರ ಸಂಯುಕ್ತ ಆಶ್ರಯದಲ್ಲಿ ಕುಂಬಾರಗುಂಡಿ ಮೇದಾರಕೇರಿಯ ಚೌಡಮ್ಮ ದೇವಸ್ಥಾನದಲ್ಲಿ ಸಂಸ್ಕೃತ ಬಾಲಗೋಕುಲ ಉದ್ಘಾಟಿಸಿ ಮಾತನಾಡಿದರು.

ಭಾರತ ಮಾತೆಯ ಮಕ್ಕಳನ್ನು ಒಂದುಗೂಡಿಸುವ ಶಕ್ತಿ ಸಂಸ್ಕೃತಕ್ಕಿದೆ. ಸಂಸ್ಕೃತ ಎಲ್ಲ ಭಾಷೆಗಳಿಗೂ ತನ್ನದೇ ಆದ ಕೊಡುಗೆ ನೀಡಿದೆ. ಹಿಂದೆ ಭಾರತದಲ್ಲಿ ಸಂಸ್ಕೃತ ಬಹು ಪ್ರಸಿದ್ದಿ ಹೊಂದಿತ್ತು. ಕಾಲಕ್ರಮೇಣ ಅನೇಕ ಕಾರಣಗಳಿಂದ ಸಂಸ್ಕೃತಕ್ಕೆ ಹಿನ್ನಡೆಯಾದರೂ ಅದು ಎಂದಿಗೂ ಮೃತ ಭಾಷೆಯಾಗದೆ ಇಂದು ಮತ್ತೆ ದೇಶ ವಿದೇಶಗಳಲ್ಲಿ ತನ್ನ ಜನಪ್ರಿಯತೆಯೊಂದಿಗೆ ವಿಶ್ವ ವಂದಿತ ಭಾಷೆಯಾಗಿದೆ ಎಂದರು.

ಸಂಸ್ಕೃತ ಸಾಹಿತ್ಯದಲ್ಲಿ ಜೀವನ ಶೈಲಿ, ಆರೋಗ್ಯ, ವಿಜ್ಞಾನ, ತಂತ್ರಜ್ಞಾನ, ಖಗೋಳ ಮುಂತಾದ ವಿಷಯಗಳಿರುವುದನ್ನು ನಾವು ನೋಡಬಹುದು. ಮಕ್ಕಳಿಗೆ ಸಂಸ್ಕೃತ ಮತ್ತು ಸಂಸ್ಕೃತಿ ಕಲಿಸಲು ಸಂಸ್ಕೃತ ಬಾಲಗೋಕುಲ ಉತ್ತಮ ಯೋಜನೆ ರೂಪಿಸಿರುವುದು ಶ್ಲಾಘನೀಯ ಎಂದು ಹೇಳಿದರು.

ಪ್ರತಿ ಶನಿವಾರ ಸಂಜೆ 5 ರಿಂದ 6ರವರೆಗೆ ನಡೆಯುವ ಸಂಸ್ಕೃತ ಬಾಲಗೋಕುಲಕ್ಕೆ 8 ರಿಂದ 12 ವರ್ಷದ ಮಕ್ಕಳು ಭಾಗವಹಿಸಬಹುದು ಎಂದು ವಿಕ್ರಂ ಶಾಖೆಯ ವಸತಿ ಪ್ರಮುಖ್ ಗುರುಪ್ರಸಾದ್ ತಿಳಿಸಿದರು.

ವಿಕ್ರಂ ಶಾಖೆಯ ಉಪನಗರ ಮೂರರ ಕಾರ್ಯವಾಹ ರಾಘವೇಂದ್ರ, ಶಿವಮೊಗ್ಗ ನಗರ ಸಹ ಸೇವಾ ಪ್ರಮುಖ್ ಪ್ರಸನ್ನ, ವಿಕ್ರವ ಶಾಖಾ ಸೇವಾ ಪ್ರಮುಖ ಅರವಿಂದ, ಸಂಸ್ಕೃತ ಭಾರತಿಯ ಸುಧಾ ಮಾದು ಉಪಸ್ಥಿತರಿದ್ದರು.