ದಾವಣಗೆರೆಯಲ್ಲಿ ಜಿಲ್ಲಾ ಪೊಲೀಸ್‌ನ ಪರಿವೀಕ್ಷಣಾ ಕವಾಯತಿನ ವಂದನೆ ಸ್ವೀಕರಿಸಿದ ಅಪರಾಧ ಮತ್ತು ತಾಂತ್ರಿಕ ಸೇವೆಗಳ ಎಡಿಜಿಪಿ ಪಿ. ಹರಿಶೇಖರನ್ ಅವರೊಂದಿಗೆ ಪೂರ್ವವಲಯದ ಐಜಿಪಿ ಡಾ.ಬಿ.ಆರ್. ರವಿಕಾಂತೇಗೌಡ ಇದ್ದರು.
- ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಪಿ. ಹರಿಶೇಖರನ್ ಆಶಯ
- ಇಲಾಖೆಯ ಪರಿವೀಕ್ಷಣಾ ಕವಾಯತು ವೀಕ್ಷಣೆ
- ಶಿಕ್ಷೆ ಕೊಡಿಸುವಲ್ಲಿ ನಾವು ಹಿಂದಿದ್ದೇವೆ
ದಾವಣಗೆರೆ: ಮಹಿಳೆಯರು ಮತ್ತು ಮಕ್ಕಳ ಮೇಲೆ ನಡೆಯುತ್ತಿರುವ ಅತ್ಯಾಚಾರ, ಪೋಕ್ಸೋ ಪ್ರಕರಣಗಳ ಸಂಬಂಧ ಪೊಲೀಸರು ತನಿಖಾ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳಬೇಕಿದೆ ಎಂದು ಅಪರಾಧ ಮತ್ತು ತಾಂತ್ರಿಕ ಸೇವೆಗಳ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಪಿ. ಹರಿಶೇಖರನ್ ಆಶಿಸಿದರು.
ಜಿಲ್ಲಾ ಪೊಲೀಸ್ ಇಲಾಖೆಯಿಂದ ಇಲ್ಲಿನ ಜಿಲ್ಲಾ ಸಶಸ್ತ್ರ ಮೀಸಲು ಪಡೆಯ ಮೈದಾನದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಪರಿವೀಕ್ಷಣಾ ಕವಾಯತು ಪ್ರದರ್ಶನ ವೀಕ್ಷಿಸಿ ಮಾತನಾಡಿದರು.
ಪ್ರತಿ ಠಾಣೆ ವ್ಯಾಪ್ತಿಯಲ್ಲಿನ ಪೊಲೀಸ್ ಬಲ ಸರಿಯಾಗಿ ಬಳಕೆಯಾಗಬೇಕು. ಅದರ ಪರಿಶೀಲನೆ ಆಗಬೇಕು. ಸಭೆಗೆ ಬರುವಾಗ ಪೂರ್ವ ತಯಾರಿ ನಡೆಸಬೇಕು. ತಾಂತ್ರಿಕವಾಗಿ ನಾವು ಎಷ್ಟೇ ಮುಂದಿದ್ದರೂ ಶಿಕ್ಷೆ ಕೊಡಿಸುವ ವಿಚಾರದಲ್ಲಿ ನಾವು ಹಿಂದಿದ್ದೇವೆ ಎಂದ ಅವರು, ಎನ್‌ಡಿಪಿಎಸ್ ಪ್ರಕರಣ, ಸೈಬರ್ ಅಪರಾಧಗಳ ವಿಚಾರದಲ್ಲಿ ತನಿಖೆ ಮಟ್ಟ ವೃದ್ಧಿಸಿಕೊಳ್ಳಬೇಕಿದೆ ಎಂದರು.
ದಾವಣಗೆರೆ ಜಿಲ್ಲೆಯಲ್ಲಿ ಮಾರಣಾಂತಿಕ ಅಪಘಾತಗಳು ಹೆಚ್ಚಿವೆ. ರಾಜ್ಯದಲ್ಲಿ ಒಂದು ದಿನದಲ್ಲಿ 25ರಿಂದ 27 ಸರಾಸರಿ ಮಾರಣಾಂತಿಕ ಅಪಘಾತಗಳು ನಡೆಯುತ್ತಿವೆ. ಹೆಚ್ಚು ಜನರು ಸಾವಿಗೀಡಾಗುತ್ತಿದ್ದಾರೆ. ಕೊಲೆ ಪ್ರಕರಣಗಳು ಭಾವನಾತ್ಮಕ ಹಾನಿ ತಂದರೆ ಅಪಘಾತಗಳು ಕೂಡ ಅದರ ಜತೆಗೆ ಆರ್ಥಿಕ ಹಾನಿಯನ್ನೂ ಹೆಚ್ಚಿಸುತ್ತಿವೆ ಎಂದು ಹೇಳಿದರು.
ಅಪಘಾತಗಳನ್ನು ನಿಯಂತ್ರಣ ಮಾಡುವ ಹಿನ್ನೆಲೆಯಲ್ಲಿ ಪೇದೆ ಹಂತದಿಂದ ಹಿಡಿದು ಮೇಲಧಿಕಾರಿವರೆಗೆ ವಿಶ್ಲೇಷಣೆ ಆಗಬೇಕು. ಅಪಘಾತ ಸ್ಥಳ ಭೇಟಿ ನಡೆಸಬೇಕು. ಯಾವ ದಿನದಲ್ಲಿ ಹೆಚ್ಚು ಅಪಘಾತ ಆಗುತ್ತಿವೆ, ಏನಾದರೂ ಬದಲಾವಣೆ ಮಾಡಬಹುದೆ ಎಂಬುದದ ಬಗ್ಗೆ ಆಲೋಚನೆ ಮಾಡಬೇಕು ಎಂದು ಸಲಹೆ ನೀಡಿದರು.
ಜಿಲ್ಲಾ ಪೊಲೀಸ್ ಕಚೇರಿ ಆವರಣದಲ್ಲಿ ಅಡಕೆ ಬೆಳೆದಿರುವುದು ಉತ್ತಮವಾಗಿದೆ. ತುಂತುರು ನೀರಾವರಿ ಹಾಗೂ ಆಟೋಮೇಷನ್ ತಂತ್ರಜ್ಞಾನ ಬಳಸಿಕೊಳ್ಳಿ ಎಂದು ಸೂಚಿಸಿದರು.
ಎಸ್ಪಿ ನಾಯಕತ್ವದ ಪರೇಡ್‌ಗೆ ಮೆಚ್ಚುಗೆ
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್ ಅವರು ತಾವೇ ಖುದ್ದು ಪರಿವೀಕ್ಷಣಾ ಕವಾಯತಿನ ನಾಯಕತ್ವ ವಹಿಸಿದ್ದರು. ಕೆಳ ಹಂತದ ಸಿಬ್ಬಂದಿಗೆ ಪರೇಡ್‌ನ ಸಂಕೇತಗಳನ್ನು ನೀಡಿದರು. ಇದನ್ನು ವೀಕ್ಷಿಸಿದ ಎಡಿಜಿಪಿ ‘ನನ್ನ 33 ವರ್ಷದ ಅವಧಿಯಲ್ಲಿ ಎಸ್ಪಿ ನೇತೃತ್ವದ ಪರೇಡ್ ನೋಡುವ ಭಾಗ್ಯ ದಕ್ಕಿದೆ. ಸಿಬ್ಬಂದಿಗಿಂತ ತಾವೇನೂ ಕಡಿಮೆ ಇಲ್ಲ ಎಂಬುದನ್ನು ಎಸ್ಪಿ ತೋರಿಸಿದ್ದಾರೆ. ಇದರ ಬಗ್ಗೆ ಡಿಐಜಿ ಸಲೀಂ ಸಾಹೇಬರಿಗೂ ತಿಳಿಸುತ್ತೇನೆ’ ಎಂದು ಹೇಳಿದರು.
ಕವಾಯತು ಕೇವಲ ಡಿಎಆರ್‌ಗೆ ಸೀಮಿತವಲ್ಲ. ಎಲ್ಲ ಎಸ್ಪಿ, ಎಎಸ್ಪಿ, ಡಿಎಸ್ಪಿ, ಪಿಎಸ್‌ಐ, ಇನ್ಸ್‌ಪೆಕ್ಟರ್‌ಗಳೂ ಕೂಡ ವಾರಕ್ಕೊಮ್ಮೆ ಪರೇಡ್ ಮಾಡಬೇಕು. ಪೊಲೀಸರಿಗೆ ಕೇವಲ ಜ್ಞಾನ ಇದ್ದರೆ ಸಾಲದು. ಶಿಸ್ತು, ತರಬೇತಿ ಇಲ್ಲದಿದ್ದಲ್ಲಿ ಪೊಲೀಸ್ ಬಲ ಸಕಾಲದಲ್ಲಿ ಕೆಲಸ ಮಾಡಲಾಗದು. ಸಿಬ್ಬಂದಿ ಜತೆ ಉತ್ತಮ ಸಂಪರ್ಕ, ಕಮ್ಯಾಂಡ್ ಮಾಡುವವರೇ ಉತ್ತಮ ನಾಯಕರಾಗಲು ಸಾಧ್ಯ ಎಂದರು.
ಪರಿವೀಕ್ಷಣಾ ಕವಾಯತಿನಲ್ಲಿ 8 ತಂಡಗಳು ಭಾಗವಹಿಸಿದ್ದವು. ಕಾರ್ಯಕ್ರಮದಲ್ಲಿ ಉತ್ತಮ ಸೇವೆ ಸಲ್ಲಿಸಿದ 65 ಮಂದಿ ಪೊಲೀಸ್ ಅಧಿಕಾರಿ- ಸಿಬ್ಬಂದಿಗೆ ಪ್ರಶಂಸನಾ ಪತ್ರಗಳನ್ನು ನೀಡಲಾಯಿತು. ಪೂರ್ವವಲಯದ ಐಜಿಪಿ ಡಾ.ಬಿ.ಆರ್. ರವಿಕಾಂತೇಗೌಡ ಸ್ವಾಗತಿಸಿದರು. ಎಎಸ್ಪಿ ಪರಮೇಶ್ವರ ಹೆಗಡೆ ವಂದಿಸಿದರು. ದೇವರಾಜ ಸಂಗೇನಹಳ್ಳಿ ಕಾರ್ಯಕ್ರಮ ನಿರ್ವಹಿಸಿದರು.
ದಾವಣಗೆರೆಯಲ್ಲಿ ಜಿಲ್ಲಾ ಪೊಲೀಸ್‌ನ ಪರಿವೀಕ್ಷಣಾ ಕವಾಯತಿನ ವಂದನೆ ಸ್ವೀಕರಿಸಿದ ಅಪರಾಧ ಮತ್ತು ತಾಂತ್ರಿಕ ಸೇವೆಗಳ ಎಡಿಜಿಪಿ ಪಿ. ಹರಿಶೇಖರನ್ ಅವರೊಂದಿಗೆ ಪೂರ್ವವಲಯದ ಐಜಿಪಿ ಡಾ.ಬಿ.ಆರ್. ರವಿಕಾಂತೇಗೌಡ ಇದ್ದರು.